More

    ಆಸರೆಯಾದ ಇಂದಿರಾ ಕ್ಯಾಂಟೀನ್

    ಹೀರಾನಾಯ್ಕ ಟಿ.
    ವಿಜಯಪುರ: ಮಹಾಮಾರಿ ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ನಲ್ಲಿ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದ ಅನೇಕ ಬಡವರು, ನಿರ್ಗತಿಕರಿಗೆ ಇಂದಿರಾ ಕ್ಯಾಂಟೀನ್ ಆಸರೆಯಾಗಿದೆ.

    ಲಾಕ್‌ಡೌನ್‌ನಿಂದ ಬೀದಿ ಬದಿ ವ್ಯಾಪಾರಿಗಳು, ಸ್ಲಂಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಆಹಾರದ ಕೊರತೆ ಕಾಡುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್ ಮೂಲಕ ಅವರಿಗೆ ಉಚಿತವಾಗಿ ಆಹಾರ ಪೂರೈಸಲಾಗುತ್ತಿದೆ.

    ಪ್ರತಿದಿನ 3 ಸಾವಿರ ಜನರಿಗೆ ಊಟ
    ಬರದನಾಡು ವಿಜಯಪುರ ಜಿಲ್ಲೆಯ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ವರವಾಗಿದೆ. ಜಿಲ್ಲೆಯಲ್ಲಿ ವಿಜಯಪುರ ನಗರ ವ್ಯಾಪ್ತಿಯ ವಿಜಯಪುರ ನಗರದ ಪಾಲಿಕೆ ಆವರಣ ಸಮೀಪ, ಗೋದಾವರಿ ಹೋಟೆಲ್ ಹತ್ತಿರ, ಬಂಜಾರ ಕ್ರಾಸ್ ಬಳಿಯ ಐಟಿಐ ಕಾಲೇಜು ಕ್ಯಾಂಪಸ್ ಹಾಗೂ ಎಪಿಎಂಸಿ ಬಳಿ ಕ್ಯಾಂಟೀನ್ ನಿರ್ಮಿಸಲಾಗಿದೆ. ಅಲ್ಲದೆ, ಬಸವನಬಾಗೇವಾಡಿ ಮತ್ತು ಇಂಡಿಯಲ್ಲಿ ಒಟ್ಟು ಆರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಮೂರು ಸಾವಿರ ಜನರಿಗೆ ಅನುಕೂಲವಾಗುವಂತೆ ಉಚಿತವಾಗಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

    ಪಾಲಿಕೆ ಸಿಬ್ಬಂದಿಯಿಂದ ಪೂರೈಕೆ
    ಕರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕದ ಕಾರ್ಮೋಡ ಸೃಷ್ಟಿಗೊಂಡಿದೆ. ಇದರಿಂದಾಗಿ ಮಹಾನಗರ ವ್ಯಾಪ್ತಿಯ ಸ್ಲಂಗಳಲ್ಲಿ ವಾಸಿಸುತ್ತಿರುವ ಜನರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ನಿರ್ಗತಿಕರಿಗೆ ಪಾಲಿಕೆ ಸಿಬ್ಬಂದಿ ವಾಹನಗಳಲ್ಲಿ ಆಹಾರವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕಾಗಿ 13 ಜನ ಆರೋಗ್ಯ ನಿರೀಕ್ಷಕರನ್ನು ನಿಯೋಜಿಸಲಾಗಿದ್ದು, ಪ್ರತಿಯೊಬ್ಬರಿಗೆ ಊಟ, ತಿಂಡಿ ವ್ಯವಸ್ಥೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

    ಬಾಕಿ ಹಣ ಶೀಘ್ರ ಪಾವತಿ
    ಕಳೆದ 10 ತಿಂಗಳಿಂದ ಇಂದಿರಾ ಕ್ಯಾಂಟೀನ್ ಬಾಕಿ ಬಿಲ್ ಸರ್ಕಾರ ಪಾವತಿಸಿರಲಿಲ್ಲ. ಒಟ್ಟು 95 ಲಕ್ಷ ರೂ. ಪಾವತಿಸಬೇಕಿತ್ತು. ಅದರಲ್ಲಿ 55 ಲಕ್ಷ ರೂ. ಪಾವತಿಸಲಾಗಿದೆ. ಇನ್ನುಳಿದ ನಾಲ್ಕು ತಿಂಗಳ ಬಾಕಿ ಬಿಲ್ 40 ಲಕ್ಷ ರೂ. ಪಾವತಿಸಬೇಕಿದೆ. ಶೀಘ್ರದಲ್ಲೇ ಅದನ್ನು ಪಾವತಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಶ್ರೀಹರ್ಷಶೆಟ್ಟಿ ಮಾಹಿತಿ ನೀಡಿದ್ದಾರೆ.

    ಕರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರದ ನಿಯಮದನ್ವಯ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಆರು ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ.
    ವಿಜಯ್ ಮೆಕ್ಕಳಕಿ, ಯೋಜನಾ ನಿರ್ದೇಶಕ
    ಜಿಲ್ಲಾ ನಗರಾಭಿವೃದ್ಧಿ ಕೋಶ

    ಲಾಕ್‌ಡೌನ್‌ನಿಂದಾಗಿ ದುಡಿಯಲು ಕೆಲಸ ಇಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿರುವುದರಿಂದ ತುಂಬ ಅನುಕೂಲವಾಗಿದೆ.
    ಅಬ್ದುಲ್ ರೆಹಮಾನ್, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts