More

    ರೈತರಿಗೆ 10 ಲಕ್ಷ ರೂ. ಸಹಾಯಧನ

    ವಿಜಯಪುರ: ಸಾವಯವ ಕೃಷಿ ಸರ್ವರ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ರೈತರಿಗೆ ಉತ್ತೇಜನ ನೀಡಲು ಹಾಗೂ ಸಾವಯವ ಉತ್ಪನ್ನಗಳ ಘಟಕಕ್ಕೆ 10 ಲಕ್ಷ ರೂ.ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
    ನಗರ ಹೊರವಲಯದ ಕೃಷಿ ಮಹಾವಿದ್ಯಾಲಯ (ಹಿಟ್ನಳ್ಳಿ ಫಾರ್ಮ)ದಲ್ಲಿ ಧಾರವಾಡ ಕೃಷಿ ವಿವಿ ಸಹಯೋಗದಲ್ಲಿ ಕೃಷಿ ಸಂಶೋಧನೆ ಕೇಂದ್ರದಿಂದ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಮೇಳ-2019-20 ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಪ್ರತಿಯೊಬ್ಬರೂ ಮಣ್ಣಲ್ಲಿ ಮಣ್ಣಾಗುತ್ತೇವೆ. ಮನುಷ್ಯ ಸತ್ತರೆ ಮಣ್ಣಲ್ಲಿ ಹೂಳುತ್ತಾರೆ. ಭೂಮಿಯೇ ಸತ್ತರೆ? ಎಂದು ಪ್ರಶ್ನಿಸಿದ ಸವದಿ, ಮಣ್ಣಿನ ಜೀವಂತಿಕೆ ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು. ಅದಕ್ಕಾಗಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ವಿಷಮುಕ್ತ ಆಹಾರ ಉತ್ಪಾದಿಸಲು ಮುಂದಾಗಬೇಕೆಂದು ರೈತರಿಗೆ ತಿಳಿಸಿದರು.

    ಮೋದಿ ಸರ್ಕಾರದ ಕಾಳಜಿ

    ಮೋದಿ ಸರ್ಕಾರ ರೈತರಿಗೆ ಅಪಾರ ಕೊಡುಗೆ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರತಿ ರೈತ ಕುಟುಂಬಕ್ಕೆ ಆರು ಸಾವಿರ ರೂ. ಸಹಾಯಧನ ನೀಡಿದೆ. ಮೋದಿ ಅವರು ತುಮಕೂರಿನ ಮಠದಲ್ಲಿ ನಿಂತು ಕೇವಲ ಒಂದು ಬಟನ್ ಒತ್ತುವ ಮೂಲಕ ಮೂರು ಕ್ಷಣದಲ್ಲಿ ಆರು ಕೋಟಿ ರೈತರಿಗೆ 12 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದರು. ಇದು ರೈತರಿಗೆ ಮೋದಿ ಸರ್ಕಾರ ನೀಡುತ್ತಿರುವ ಗೌರವ ಎಂದರು.
    ರೈತರ ಬೆಳೆಗೆ ಮೋದಿ ಸರ್ಕಾರ ವೈಜ್ಞಾನಿಕ ದರ ನೀಡುತ್ತಿದೆ. ಒಟ್ಟು 26 ವಿವಿಧ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡುವ ಭರವಸೆ ನೀಡಿದರು.

    ಹಲೋ…ಬೇಡ-ಜೈಕಿಸಾನ್ ಎನ್ನಿ

    ಇಂದು ಪ್ರತಿ ರೈತರ ಕೈಯಲ್ಲಿ ಮೊಬೈಲ್ ಇದೆ. ಕರೆ ಸ್ವೀಕರಿಸಿದ ಕ್ಷಣ ಹಲೋ ಎನ್ನುತ್ತೇವೆ. ಈ ಹಲೋ ಎಂಬ ಪದ ದೂರವಾಣಿ ಕಂಡು ಹಿಡಿದ ವಿಜ್ಞಾನಿಯ ಪ್ರೇಯಸಿಯ ಹೆಸರು. ಆ ವಿಜ್ಞಾನಿ ಮೊದಲ ಬಾರಿಗೆ ದೂರವಾಣಿಯಲ್ಲಿ ಮಾತನಾಡಿದ್ದು ತನ್ನ ಪ್ರೇಯಸಿ ಹಲೋ ಜತೆಗೆ. ಇಂದಿಗೂ ನಾವು ದೂರವಾಣಿ ಸ್ವೀಕರಿಸಿದಾಗ ಆ ವಿಜ್ಞಾನಿಯ ಪ್ರೇಯಸಿ ಹೆಸರನ್ನೇ ಉಚ್ಚರಿಸುತ್ತೇವೆ. ಅದರ ಬದಲಾಗಿ ಜೈ ಕಿಸಾನ್ ಎನ್ನುವುದನ್ನು ರೂಢಿಮಾಡಿಕೊಳ್ಳಬೇಕು. ಈ ಮಾತಿನ ತಾತ್ಪರ್ಯ ಇಷ್ಟೇ ‘ಜೈ ಕಿಸಾನ್’ ಎಲ್ಲೆಡೆ ಮೊಳಗಬೇಕೆಂದು ಸವದಿ ಮಾರ್ಮಿಕವಾಗಿ ಹೇಳಿದರು.

    ಸದೃಢ ಸಮಾಜ ನಿರ್ಮಿಸೋಣ

    ಈ ದೇಶ ರೈತರ ಶ್ರಮದ ಮೇಲೆ ನಿಂತಿದೆ. ಸೈನಿಕ ಮತ್ತು ರೈತ ಈ ದೇಶದ ರಕ್ಷಕರು. ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕಿರೋದು ರೈತರ ಕರ್ತವ್ಯ. ವಿಷಯುಕ್ತ ಔಷಧ ಬಳಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ನಾನು ಸಹ ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ಡಿಸಿಎಂ ಹೇಳಿದರು.
    ದುಡ್ಡು ಗಳಿಕೆ ದೊಡ್ಡ ವಿಷಯವಲ್ಲ. ಅದೆಂದೂ ಶಾಶ್ವತವಲ್ಲ. ಅಧಿಕಾರ, ಅಂತಸ್ತು, ಐಶ್ವರ್ಯ ಶಾಶ್ವತ ಅಲ್ಲ. ಇರುವಷ್ಟು ದಿನ ನಾವು ಮಾಡುವ ಒಳ್ಳೆಯ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಆ ಕಾರ್ಯ ನಮ್ಮಿಂದವಾಗಬೇಕು. ರೈತರಾದ ನಾವೆಲ್ಲರೂ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.

    ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ತೋಟಗಾರಿಕೆಗೆ ಪ್ರಧಾನವಾದ ವಿಜಯಪುರ ಜಿಲ್ಲೆಯಲ್ಲಿಯೇ ತೋಟಗಾರಿಕೆ ವಿವಿ ಆಗಬೇಕಿತ್ತು. ಆದರೆ ಅದನ್ನು ಬಾಗಲಕೋಟೆಯಲ್ಲಿ ಮಾಡಿದ್ದು ಸೂಕ್ತವಲ್ಲ ಎಂದರು.
    ಕೃಷಿ ಮಹಾವಿದ್ಯಾಲಯದ ಏಳಿಗೆಗೆ ಸದಾಕಾಲ ಸಹಕಾರ ನೀಡುತ್ತ ಬಂದಿದ್ದು ಬರುವ ದಿನಗಳಲ್ಲೂ ಆ ಸಹಕಾರ ಮುಂದುವರಿಯಲಿದೆ ಎಂದರು.
    ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಮಾತನಾಡಿ, ಕೃಷಿ ತಂತ್ರಜ್ಞಾನ ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಕೃಷಿ ಮೇಳದ ಸದುಪಯೋಗವನ್ನು ಎಲ್ಲ ರೈತರು ಪಡೆಯಬೇಕು. ಯುವಜನತೆ ಕೃಷಿಯತ್ತ ಹೆಚ್ಚು ಆಸಕ್ತರಾಗಬೇಕು. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂದರು.
    ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಬಿ.ಎಸ್. ಯಡಿಯೂರಪ್ಪ ರೈತ ಪರ ಕಾಳಜಿ ಮೆರೆದಿದ್ದಾರೆ. ರೈತರು ಎದುರಿಸುತ್ತಿರುವ ಸವಾಲು ಅಪಾರ. ಇಂದು ಕೃಷಿಕರಿಗೆ ಭವಿಷ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಯುವ ಕೃಷಿಕರ ಪ್ರಮಾಣ ಕಡಿಮೆಯಾಗುತ್ತಿದೆ. ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಸಾಧನೆ ಮಾಡುವ ಯುವ ಪದವಿಧರರ ಪ್ರಮಾಣ ಕಡಿಮೆ ಎಂದರು.
    ಕೃಷಿ ಸಾಧಕರ ಪರಿಚಯ ಮುಂದಿನ ಪೀಳಿಗೆಗೆ ಮಾಡಿಕೊಡಬೇಕು. ಹಸಿರು ಕ್ರಾಂತಿ ಪರಿಣಾಮ ಆಹಾರದ ಸಮಸ್ಯೆ ನೀಗಿತು ನಿಜ. ಆದರೆ, ಆಹಾರ ಉತ್ಪಾದನೆ ಕ್ಷೇತ್ರದ ಸವಾಲು ಇಂದಿಗೂ ಬಗೆಹರಿದಿಲ್ಲ. ಕೃಷಿ ಪ್ರತಿಯೊಬ್ಬರ ಜೀವಾಳವಾಗಬೇಕೆಂದರು.
    ಕುಲಪತಿ ಡಾ.ಎಂ.ಬಿ. ಚೆಟ್ಟಿ ಮಾತನಾಡಿದರು. ಶಾಸಕ ದೇವಾನಂದ ಚವಾಣ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸದಸ್ಯರಾದ ಕವಿತಾ ರಾಠೋಡ, ಪ್ರತಿಭಾ ಪಾಟೀಲ, ನವೀನ ಅರಕೇರಿ, ಮುಖಂಡರಾದ ದಯಾಸಾಗರ ಪಾಟೀಲ ಇತರರಿದ್ದರು. ಮಧುಶ್ರೀ ಹಾಗೂ ತಂಡದವರು ಪ್ರಾರ್ಥಿಸಿದರು.

    ಮೇಳಕ್ಕಿಲ್ಲ ಕಳೆ; ಡಿಸಿಎಂ ಚಾಟಿ

    ಕೃಷಿ ಮೇಳ ಸಂಪೂರ್ಣ ಸಪ್ಪೆಯಾಗಿರುವುದನ್ನು ಗಮನಿಸಿದ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಉದ್ಘಾಟನೆ ಭಾಷಣದಲ್ಲೇ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು.
    ಕೃಷಿ ಮೇಳವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಬಹುದಿತ್ತು. ಅದಕ್ಕೆ ಇನ್ನಷ್ಟು ಮೆರಗು ಬರಬೇಕಿತ್ತು. ಇದೊಂಥರ ಯಾವುದೋ ಧಾಬಾದಲ್ಲಿ ಮಾಡಿದಂತೆ ಭಾಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂಥ ಮೇಳ ಆಯೋಜಿಸಬಾರದರು. ಅರ್ಥಪೂರ್ಣವಾಗಿ ಆಚರಿಸಬೇಕೆಂದರು.
    ನೂರಾರು ವರ್ಷ ನಮ್ಮನ್ನು (ರೈತರನ್ನು) ನಿರ್ಲಕ್ಷ್ಯ ಮಾಡಿಕೊಂಡು ಬರಲಾಗಿದೆ. ರೈತರೆಂದರೆ ನಿರ್ಲಕ್ಷಿತರು ಎಂದು ಪರಿಗಣಿಸಲಾಗಿದೆ. ಇದು ಪುನರಾವರ್ತನೆ ಆಗಬಾರದು ಎಂದರು.
    ಸಿರಿಧಾನ್ಯ, ಸಾವಯವ ಕೃಷಿ, ಆಧುನಿಕ ಯಂತ್ರೋಪಕರಣಗಳ ಬಳಕೆ, ಹೊಸ ತಳಿಗಳ ಪರಿಚಯ ಹೀಗೆ ಹತ್ತು ಹಲವು ಉದ್ದೇಶಗಳೊಂದಿಗೆ ಹಮ್ಮಿಕೊಂಡಿರುವ ಕೃಷಿ ಮೇಳ ಸರ್ವರಿಗೂ ಸದುಪಯೋಗ ಆಗಬೇಕೆಂದರು.

    ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ವಿಶ್ವ ಬ್ಯಾಂಕ್‌ನಿಂದ 25 ಕೋಟಿ ರೂ. ಅನುದಾನ ಮಂಜೂರಾಗಿದೆ. ವಿದ್ಯಾರ್ಥಿಗಳಿಗೆ ಹೊರ ದೇಶಕ್ಕೆ ಹೋಗಿ ಕೃಷಿ ಕುರಿತು ಸುದೀರ್ಘ ಅಧ್ಯಯನ ನಡೆಸಲು ಈ ಅನುದಾನದ ಪೈಕಿ 13 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
    ಡಾ. ಎಂ.ಬಿ. ಚೆಟ್ಟಿ, ಉಪಕುಲಪತಿ, ಧಾರವಾಡ ಕೃಷಿ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts