More

    ಎನ್‌ಟಿಪಿಸಿ ಅನುದಾನ ಸದುಪಯೋಗವಾಗಲಿ

    ವಿಜಯಪುರ: ಜಿಲ್ಲೆಯ ಎನ್‌ಟಿಪಿಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳು ರಾಜ್ಯಕ್ಕೆ ಮಾದರಿಯಾಗಬೇಕು. ಎನ್‌ಟಿಪಿಸಿ ನೀಡುವ ಅನುದಾನ ಸದುಪಯೋಗವಾಗಬೇಕೆಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಎನ್‌ಟಿಪಿಸಿಯಿಂದ ಅಂದಾಜು 18.17 ಕೋಟಿ ರೂ. ತೆರಿಗೆ ಹಣದ ಚೆಕ್‌ನ್ನು ಎನ್‌ಟಿಪಿಸಿ ವ್ಯಾಪ್ತಿಯಲ್ಲಿ ಬರುವ ಐದು ಗ್ರಾಮ ಪಂಚಾಯಿತಿಗಳಾದ ಮುತ್ತಗಿ, ಕೂಡಗಿ, ಗೊಳಸಂಗಿ, ಮಸೂತಿ ಹಾಗೂ ತೆಲಗಿ ಗ್ರಾಮ ಪಂಚಾಯಿತಿಗಳಿಗೆ ವಿತರಿಸಿ ಅವರು ಮಾತನಾಡಿದರು.

    ಈ ತೆರಿಗೆ ಹಣದಿಂದ ಸ್ಥಳೀಯ ಸಂಸ್ಥೆಗಳಿಗೆ ಆದಾಯದ ಮೂಲ ಬಂದಂತಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ಚೆಕ್‌ಗಳನ್ನು ವಿತರಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಗ್ರಾಮ ಪಂಚಾಯಿತಿಗಳು ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು. ರಾಜ್ಯದ ದೇವನಹಳ್ಳಿ ಪಂಚಾಯಿತಿ ಬಿಟ್ಟರೆ ನಂತರ ಹೆಚ್ಚಿನ ಅನುದಾನ ಪಡೆಯುತ್ತಿರುವ ಕೂಡಗಿ ಪಂಚಾಯಿತಿ ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯಿತಿಯಾಗಿ ರೂಪುಗೊಳ್ಳಲು ಪಿಡಿಒ ಹಾಗೂ ನೂತನ ಚುನಾಯಿತಿ ಪ್ರತಿನಿಧಿಗಳು ಶ್ರಮವಹಿಸಬೇಕು ಎಂದರು.

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆದಾಯ ಬರುವ ಬಡಾವಣೆಗಳ ನಿರ್ಮಾಣ, ಕಲ್ಯಾಣ ಮಂಟಪ, ಕಾಂಪ್ಲೆಕ್ಸ್ ಹಾಗೂ ಸಣ್ಣ ಸಣ್ಣ ಉದ್ದಿಮೆಗಳಿಗೆ ಅವಕಾಶ ನೀಡಿ ಆದಾಯ ಹೆಚ್ಚಿಸಿಕೊಳ್ಳಬೇಕು. ಎನ್‌ಟಿಪಿಸಿ ಯಿಂದ ಬಂದ ಹಣದಲ್ಲಿ ಗ್ರಾಮ ಪಂಚಾಯಿತಿಗಳು ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ನೂತನ ತಂತ್ರಜ್ಞಾನದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಲ್ಲದೆ ಕುಡಿಯುವ ನೀರು, ರಸ್ತೆಗಳನ್ನು ನಿರ್ಮಿಸುವುದರಿಂದ ಮಾದರಿ ಗ್ರಾಮ ಪಂಚಾಯಿತಿಗಳಾಗಿ ಅಭಿವೃದ್ಧಿ ಹೊಂದಬೇಕು ಎಂದರು.

    ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೀಳ್ಯದೆಲೆ ಬೆಳೆಯುತ್ತಿದ್ದು, ಇದಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ. ಇದಕ್ಕೆ ಸೂಕ್ತ ಮಾರುಕಟ್ಟೆ ನಿರ್ಮಿಸಿ ಆದಾಯದ ಮೂಲ ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಶಿವಾನಂದ ಪಾಟೀಲ ತಿಳಿಸಿದರು.

    ಜಿಲ್ಲಾಧಿಕಾರಿ ಪಿ. ಸುನಿಲಕುಮಾರ ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಹೆಚ್ಚು ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಗ್ರಾಮಗಳನ್ನು ಹೆಚ್ಚು ಅಭಿವೃದ್ಧಿಪಡಿಸಬಹುದಾಗಿದೆ. ಶಾಸಕರು, ನಾವುಗಳು ಕೂಡಿಕೊಂಡು ಎನ್‌ಟಿಪಿಸಿಯಿಂದ ಹೆಚ್ಚಿನ ಅನುದಾನ ಕೊಡಿಸಲು ಶ್ರಮಿಸಿದ್ದೇವೆ. ಪಿಡಿಒ, ನೂತನ ಚುನಾಯಿತ ಪ್ರತಿನಿಧಿಗಳು ಸೇರಿ ಕ್ರಿಯಾಯೋಜನೆ ಸಿದ್ಧಪಡಿಸಿ ಈ ಕುರಿತು ಸಮಿತಿಯಲ್ಲಿ ಚರ್ಚಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದರು.

    ಎನ್‌ಟಿಪಿಸಿ ಚೀಫ್ ಜನರಲ್ ಕೆ.ಜಿ. ರೆಡ್ಡಿ ಮಾತನಾಡಿ, ಎನ್‌ಟಿಪಿಸಿಯಿಂದ ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಈ ಭಾಗದ ಗ್ರಾಮ ಪಂಚಾಯಿತಿಗಳಿಗೆ ಚೆಕ್ ಮೂಲಕ ಅನುದಾನ ನೀಡುತ್ತಿದ್ದು, ತಮ್ಮ ತಮ್ಮ ಪಂಚಾಯಿತಿಗಳ ಅಭಿವೃದ್ಧಿಪಡಿಸಿಕೊಳ್ಳಲು ಅನುದಾನ ಬಳಸಿಕೊಳ್ಳಬೇಕು. ಈ ಕುರಿತು ಕ್ರಿಯಾಯೋಜನೆ ರೂಪಿಸಿ ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳಬೇಕು ಎಂದರು.

    ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, 2022-23 ರಿಂದ ಪ್ರತಿವರ್ಷ ಕೂಡಗಿ ಗ್ರಾಮ ಪಂಚಾಯಿತಿಗೆ 200.01 ಲಕ್ಷ ರೂ, ಮಸೂತಿಗೆ 99.47 ಲಕ್ಷ ರೂ, ತೆಲಗಿಗೆ 78.33 ಲಕ್ಷ ರೂ, ಗೊಳಸಂಗಿಗೆ 62.15 ಲಕ್ಷ ರೂ. ಹಾಗೂ ಮುತ್ತಗಿ ಗ್ರಾಮ ಪಂಚಾಯಿತಿಗೆ 1.97 ಲಕ್ಷ ರೂ ಸೇರಿದಂತೆ 441.93 ಲಕ್ಷ ರೂಗಳ ಕರದ ಮೊತ್ತ ಬರಲಿದೆ ಎಂದು ಹೇಳಿದರು.

    ಅದರಂತೆ 2018 ರಿಂದ 2022 ರವರೆಗೆ ಮುತ್ತಗಿ ವ್ಯಾಪ್ತಿಯಲ್ಲಿ 9.30 ಕೋಟಿ ರೂ, ಕೂಡಗಿ ವ್ಯಾಪ್ತಿಯಲ್ಲಿ 8.48 ಕೋಟಿ ರೂ, ಗೊಳಸಂಗಿ ವ್ಯಾಪ್ತಿಯಲ್ಲಿ 2.49 ಕೋಟಿ ರೂ, ಮಸೂತಿ ವ್ಯಾಪ್ತಿಯಲ್ಲಿ 3.91 ಕೋಟಿ ರೂ. ಹಾಗೂ ತೆಲಗಿ ವ್ಯಾಪ್ತಿಯಲ್ಲಿ 3.18 ಕೋಟಿ ರೂ. ಸೇರಿದಂತೆ ಒಟ್ಟು 18 ಕೋಟಿ 17 ಲಕ್ಷ ಕರ ಚೆಕ್ ಮೂಲಕ ಇಂದು ವಿತರಿಸಲಾಯಿತು ಎಂದರು.

    ಎನ್‌ಟಿಪಿಸಿ ಉಪ ವ್ಯವಸ್ಥಾಪಕ ಸುರೇಂದ್ರನ್, ಪಬ್ಲಿಕ್ ರಿಲೇಶನ್ ಆಫೀಸರ್ ಗುಲಶನ್, ಕೋಲಾರ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts