ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಭಾರತದ ಸಂಸ್ಕೃತಿ, ಪರಂಪರೆ, ಜ್ಞಾನ ಮತ್ತು ಜೀವನ ಮೌಲ್ಯಗಳನ್ನು ಬಲಗೊಳಿಸುತ್ತದೆ ಎಂದು ದೆಹಲಿ ಎಬಿಆರ್‌ಎಸ್‌ಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಹಿರಿಯ ಉಪನ್ಯಾಸಕ ಶಿವಾನಂದ ಸಿಂಧನಕೇರಾ ಹೇಳಿದರು.ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಚಿಂತನೆ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ನೀತಿ ಪ್ರತಿ ವ್ಯಕ್ತಿಯ ಸೃಜನಶೀಲ ಸಾಮರ್ಥ್ಯದ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಶರೀರ, ಬುದ್ಧಿ, ಮನಸ್ಸು ಮತ್ತು ಅಧ್ಯಾತ್ಮ ಆಧರಿತ ಭಾರತೀಯ ಜ್ಞಾನ ಮತ್ತು ಚಿಂತನೆಯ ಪರಂಪರೆ ಈ ನೀತಿಗೆ ದಾರಿದೀಪವಾಗಿದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಿಂದ ಆತ್ಮಸಾಕ್ಷಾತ್ಕಾರ ಮತ್ತು ಸ್ವಯಂ ಏಳಿಗೆಗೆ ವ್ಯಕ್ತಿಯನ್ನು ಸಿದ್ಧಪಡಿಸುವುದು ಪ್ರಾಚೀನ ಭಾರತದ ಶಿಕ್ಷಣದ ಗುರಿಯಾಗಿತ್ತು. ಭಾರತದ ಗುರುಕುಲಗಳು ಮತ್ತು ಹೆಸರಾಂತ ವಿಶ್ವವಿದ್ಯಾಲಯಗಳಾದ ತಕ್ಷಶಿಲಾ, ನಳಂದಾ, ವಿಕ್ರಮಶಿಲಾ, ವಲ್ಲಭಿಯಂತಹ ಸಂಸ್ಥೆಗಳು ಬಹುವಿಷಯದ ಬೋಧನೆ ಮತ್ತು ಸಂಶೋಧನೆಯ ಉನ್ನತ ಗುಣಮಟ್ಟ ಸಾಧಿಸಿದ್ದವು.
ಭಾರತೀಯ ಶಿಕ್ಷಣ ವ್ಯವಸ್ಥೆಯು ಚರಕ, ಸುಶ್ರುತ, ಆರ್ಯಭಟ, ಮಹಾವೀರ, ಭಾಸ್ಕರಾಚಾರ್ಯ, ರೋಹಿಣಿ, ಬ್ರಹ್ಮಗುಪ್ತ, ಚಾಣಕ್ಯ, ಚಕ್ರಪಾಣಿದತ್ತ, ಮಾಧವ, ಪಾಣಿನಿ, ಪತಂಜಲಿ, ನಾಗಾರ್ಜುನ, ಗೌತಮ, ಪಿಂಗಳ, ಶಂಕರದೇವ, ಮೈತ್ರೇಯಿ, ಗಾರ್ಗಿ, ಶಂಕರಾಚಾರ್ಯ, ಬಸವೇಶ್ವರ, ತಿರುವಳ್ಳುವರ ಮತ್ತು ಸರ್ವಜ್ಞರಂತಹ ಶ್ರೇಷ್ಠ ವಿದ್ವಾಂಸರನ್ನು ರೂಪಿಸಿದೆ.
ಗಣಿತ, ಖಗೋಳವಿಜ್ಞಾನ ಲೋಹಶಾಸ್ತ್ರ, ಆಯುರ್ವೇದ, ಶಸ್ತ್ರಚಿಕಿತ್ಸೆ, ಯೋಗವಿಜ್ಞಾನ, ಕಟ್ಟಡ ತಂತ್ರಜ್ಞಾನ, ವಾಸ್ತುಶಾಸ್ತ್ರ, ಹಡಗು ನಿರ್ಮಾಣ, ಕೃಷಿ ವಿಜ್ಞಾನ, ಲಲಿತ ಕಲೆಗಳು, ಚದುರಂಗ, ಸಂಸ್ಕೃತ, ವ್ಯಾಕರಣ, ಭಾರತೀಯ ಭಾಷಾಶಾಸ್ತ್ರಗಳು ಮತ್ತು ಇನ್ನಿತರೆ ಕ್ಷೇತ್ರಗಳಲ್ಲಿ ಅವರು ಜ್ಞಾನ ಪ್ರಪಂಚಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರವು ಪ್ರಪಂಚದ ಮೇಲೆ ಬಲವಾದ ಪ್ರಭಾವ ಹೊಂದಿತ್ತು. ಈ ಎಲ್ಲ ಸಂಗತಿಗಳನ್ನು ಶಿಕ್ಷಣ ವ್ಯವಸ್ಥೆ ಮೂಲಕ ಜಾರಿಗೊಳಿಸಿ ಹೊಸ ರೀತಿಯಲ್ಲಿ ಉಪಯೋಗಿಸುತ್ತ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಿದೆ.
ಈ ನೀತಿಯು ನಮ್ಮ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮ, ಬೋಧನೆ ವಿಧಾನವು ವಿದ್ಯಾರ್ಥಿಗಳಲ್ಲಿ ಮೂಲ ಕರ್ತವ್ಯಗಳು ಮತ್ತು ಭಾರತದ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಅಪಾರ ಗೌರವ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ಪಾತ್ರಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಕೋನ ಹೊಂದಿದೆ. ಬೌದ್ಧಿಕ, ಸಾಮಾಜಿಕ, ಭೌತಿಕ, ನೈತಿಕ ಹಾಗೂ ಭಾವನಾತ್ಮಕವಾಗಿ ಮಗುವಿನ ಬೆಳವಣಿಗೆ ಆಗಬೇಕು ಎಂಬುದೇ ಈ ನೀತಿಯ ಉದ್ದೇಶವಾಗಿದೆ ಎಂದರು.
ಶಾಲಾ ಶಿಕ್ಷಣದ ಕ್ರಮ 10+2 ರಿಂದ 5+3+3+4 ರಂತೆ ಬದಲಾಗಿ ಬುನಾದಿ (3 ರಿಂದ 8 ವರ್ಷ), ಸಿದ್ಧತೆ (8 ರಿಂದ 11 ವರ್ಷ), ಮಧ್ಯಮ (11 ರಿಂದ 14 ವರ್ಷ) ಹಾಗೂ ಪ್ರೌಢ (14 ರಿಂದ 18ವರ್ಷ) ಎಂಬ ನಾಲ್ಕು ಹಂತಗಳಲ್ಲಿ ಬೋಧಿಸಲಾಗುತ್ತದೆ. 15 ವರ್ಷಗಳ ಶಿಕ್ಷಣವು ವಿದ್ಯಾರ್ಥಿಯನ್ನು ಭವಿಷ್ಯದ 30 ವರ್ಷಗಳಿಗೆ ತಯಾರು ಮಾಡುತ್ತದೆ. ಈ ನೀತಿ ಜಾರಿಗೊಳಿಸುವಲ್ಲಿ ಇಸ್ರೋ ಮಾಜಿ ಅಧ್ಯಕ್ಷ, ವಿಜ್ಞಾನಿ ಡಾ.ಕಸ್ತೂರಿ ರಂಗನ್ ಮತ್ತು ಕರ್ನಾಟಕ ಜ್ಞಾನ ಆಯೋಗದ ಮಾಜಿ ಕಾರ್ಯದರ್ಶಿ, ಯುಜಿಸಿ ಹಾಲಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್ ಮತ್ತು ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ವಿ.ಕಟ್ಟಿಮನಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಿಂದ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಈ ನೀತಿ ಉದ್ಯಮಿಯಾಗಿ ಉದ್ಯೋಗ ನೀಡು ಘೋಷ ವಾಕ್ಯಗೆ ಪೂರಕವಾಗಿದೆ. ಸ್ವಾವಲಂಬಿ ಬದುಕಿಗೆ ನಾಂದಿಯಾಗಿದೆ. ಭಾರತ 2050ರ ಹೊತ್ತಿಗೆ ಈ ನೀತಿಯ ಫಲ ಉಣ್ಣಲು ಸಾಧ್ಯ ಎಂದರು.
ನಂತರ ನಡೆದ ಸಂವಾದದಲ್ಲಿ ಪರೀಕ್ಷೆ ಪದ್ಧತಿಯಲ್ಲಿ ಸಮಸ್ಯೆ ಇದೆಯೇ? ಎಂಬ ಪ್ರಶ್ನೆಗೆ ಈಗಿರುವ ಪದ್ಧತಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಲಾರ್ಡ್ ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ಈ ದೇಶವನ್ನು ದಾಸ್ಯಕ್ಕೆ ದೂಡುವ ಹುನ್ನಾರವಿತ್ತು. ಸ್ವಾತಂತ್ರ್ಯ ನಂತರವೂ ಅದು ಮುಂದುವರಿದದ್ದು ಖೇದದ ಸಂಗತಿ. ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ಆಗಬೇಕು. ಪರೀಕ್ಷೆ ಪದ್ಧತಿ ಬಗ್ಗೆ ಉತ್ತಮ ವಿಧಾನ ಅಳವಡಿಸಲಾಗಿದೆ ಎಂದು ಶಹಾಪೂರ ಉತ್ತರಿಸಿದರು.
ಕೇಸರಿಕರಣ ಎಂಬ ಆರೋಪವಿದೆಯಲ್ಲ? ಎಂಬ ಪ್ರಶ್ನೆಗೆ ಇದು ರೆಡಿಮೇಡ್ ಆರೋಪ. ಕರಿಕ್ಯುಲಮ್ ನಿರ್ಮಾಣವೇ ಆಗದೆ ಇಂಥ ಆರೋಪ ಮಾಡುವುದು ಸರಿಯಲ್ಲ. ನಮ್ಮ ದೃಷ್ಟಿಕೋನ ಬದಲಾಗಬೇಕು ಎಂದು ಉತ್ತರಿಸಿದರು. ಪ್ರೊ.ಮಹಾಂತೇಶ ಮರಿಕಟ್ಟಿ, ಶರಣು ಸಬರದ ಮತ್ತಿತರರು ಸಂವಾದದಲ್ಲಿ ಪ್ರಶ್ನೆ ಕೇಳಿದರು.
ಖುಷಿಯಿಂದ ಓದುವ ರೂಢಿ ಬೆಳೆಸಿಕೊಳ್ಳಿ
‘ಸ್ಪರ್ಧಾತ್ಮ ಪರೀಕ್ಷೆಗೆ ತಯಾರಿ’ ವಿಷಯ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ ಮಾತನಾಡಿ, ಅಪರೂಪದ ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು 12 ಗಂಟೆ ಓದಲು ಸಿದ್ಧರಿರಬೇಕು. ಪರಿಶ್ರಮದ ಓದು ನಮ್ಮ ಐಕ್ಯು ಸುಧಾರಿಸುತ್ತದೆ. ಹಂತ ಹಂತವಾಗಿ ಮೇಲೇರುವ ಸಹನೆ ಇರಬೇಕು. ಪ್ರತಿ ಬಾರಿ ಫೇಲಾದಾಗ ನನ್ನ ಯಶಸ್ಸಿಗೆ ಇನ್ನೊಂದೇ ಹೆಜ್ಜೆ ಇದೆ ಎಂದು ಆತ್ಮವಿಶ್ವಾಸದಿಂದ ಮತ್ತೆ ಯತ್ನಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿ ದಿನ ಸಂತೋಷವಾಗಿ ಬದುಕುವುದನ್ನು ಖುಷಿಯಿಂದ ಅಧ್ಯಯನ ನಡೆಸುವುದನ್ನು ಕಲಿಯಬೇಕು. ಒತ್ತಡದಲ್ಲಿ ಓದಿದ್ದು ಪರಿಣಾಮಕಾರಿ ಆಗಲು ಸಾಧ್ಯವಿಲ್ಲ ಎಂದರು.
ಉತ್ತಮ ಸರ್ಕಾರಿ ನೌಕರಿ ಪಡೆದು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಕನಸು ನಮಗಿರುವಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವವರಿಗೂ ಒಂದು ನಿರೀಕ್ಷೆ ಇರುತ್ತದೆ. ಸೇವೆಗೆ ಆಯ್ಕೆಯಾಗುವ ಅಭ್ಯರ್ಥಿ ಐಕ್ಯು (ಇಂಟಲಿಜಂಟ್ ಕೋಷಂಟ್), ಇಕ್ಯು (ಎಮೋಷನ್ ಕೋಷಂಟ್) ಎಷ್ಟಿದೆ ಹಾಗೂ ಸೇವೆ ಸಲ್ಲಿಸಲು ನಿಮ್ಮ ಮನಸ್ಸು ಎಷ್ಟು ಸಿದ್ಧವಾಗಿದೆ, ಎಷ್ಟು ಪರಿಶ್ರಮದಿಂದ ನೀವು ಸೇವೆ ಸಲ್ಲಿಸಬಹುದು ಎಂಬುದನ್ನು ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆಗಳು ಪರೀಕ್ಷಿಸುತ್ತವೆ.
ಪ್ರತಿ ವರ್ಷ ಭಾರತದಲ್ಲಿ 8 ರಿಂದ 10 ಲಕ್ಷ ಜನ ಭಾರತದಲ್ಲಿ ಐಎಎಸ್ ಪ್ರಾಥಮಿಕ ಪರೀಕ್ಷೆ ಬರೆಯುತ್ತಾರೆ. ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶವಿರುತ್ತವೆ. ಈ ಪರೀಕ್ಷೆ ಬರೆಯುವವರ ವಯಸ್ಸು, ಜಾತಿ ಹಾಗೂ ತಯಾರಿ ಹೇಗೆ ನಡೆಸಬೇಕು ಎಂಬುದರ ಬಗ್ಗೆ ವಿಸ್ತೃತವಾಗಿ ತಿಳಿಸಿದರು.