More

    ಜನರ ಅಭಿವೃದ್ಧಿಗಾಗಿ ಶ್ರಮಿಸಿ

    ವಿಜಯಪುರ: ಜನಪ್ರತಿನಿಧಿಗಳಿಗೆ ಅಧಿಕಾರದ ಅವಕಾಶ ಕೊಟ್ಟಾಗ ಇಚ್ಛಾಶಕ್ತಿ ಪ್ರದರ್ಶನ ಮಾಡಿ ಜನರ ಅಭಿವೃದ್ಧಿಗಾಗಿ ಶ್ರಮಿಸಲು ಮುಂದಾಗಬೇಕು ಎಂದು ಮಾಜಿ ಸಚಿವ, ಶಾಸಕ ಎಂ.ಬಿ. ಪಾಟೀಲ ಹೇಳಿದರು.

    ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ 54 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬ್ರಿಡ್ಜ್-ಕಂ-ಬಾಂದಾರ ತುಂಬಿ ನಿಂತಿರುವ ಹಿನ್ನೆಲೆ ಬುಧವಾರ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಮಾತನಾಡಿದರು.

    2013-18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ನನಗೆ ಅಧಿಕಾರ ದೊರೆತಾಗ ಹಲವಾರು ನೀರಾವರಿ ಕಾಮಗಾರಿಗಳನ್ನು ಮಾಡಿದ್ದೇನೆ. 2014ರಲ್ಲಿ ಈ ಭಾಗದ ರೈತ, ಮುಖಂಡರು ಇಲ್ಲಿ ಹೊಸ ಬ್ಯಾರೇಜ್ ನಿರ್ಮಿಸಲು ಬೇಡಿಕೆ ತಂದಿದ್ದರು. ಆದರೆ ಹೊಸ ಬ್ಯಾರೇಜ್ ನಿರ್ಮಿಸುವುದು ಅಸಾಧ್ಯವಾಗಿತ್ತು. 50 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಬ್ಯಾರೇಜ್ ಸುಸ್ಥಿತಿಯಲ್ಲಿ ಇರಲಿಲ್ಲ. ಅದನ್ನು ಎತ್ತರಿಸಲು ತಾಂತ್ರಿಕ ತೊಂದರೆಯೂ ಕೂಡ ಇತ್ತು. ಪಕ್ಕದ ತೆಲಂಗಾಣದಲ್ಲಿ ಜಾಕೆಟಿಂಗ್ ಮಾದರಿಯಲ್ಲಿ ಬ್ಯಾರೇಜ್ ಬಲಪಡಿಸಿ ಎತ್ತರಿಸುವ ಕಾಮಗಾರಿ ಮಾಡಿದ್ದರು. ಅದೇ ಮಾದರಿಯನ್ನು ಇಲ್ಲಿ ಪ್ರಯೋಗಿಸಿ 50 ವರ್ಷಗಳ ಹಿಂದಿನ ಬ್ಯಾರೇಜ್‌ನ್ನು ಜಾಕೆಟಿಂಗ್ ಮಾದರಿಯಲ್ಲಿ ಬಲಪಡಿಸಿ ಎತ್ತರಿಸಲಾಗಿದೆ. ಇದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ ಎಂದರು.

    ಕೊರ್ತಿ-ಕೊಲ್ಹಾರ ಬಳಿ ಬ್ಯಾರೇಜ್ ನಿರ್ಮಾಣಕ್ಕೆ 32 ಕೋಟಿ ರೂ., ಗಲಗಲಿ ಬಳಿಯ ಬ್ಯಾರೇಜ್‌ಗೆ 34 ಕೋಟಿ ರೂ.ಸೇರಿ 66 ಕೋಟಿ ರೂ. ಆರಂಭದಲ್ಲಿ ಮಂಜೂರು ನೀಡಲಾಗಿತ್ತು. ವಿನ್ಯಾಸದಲ್ಲಿ ಬದಲಾವಣೆ, ಜಿಎಸ್‌ಟಿ ಹೆಚ್ಚಳ ಮತ್ತು ಹೆಚ್ಚುವರಿ ಕಾಮಗಾರಿ ಸೇರಿ ಗಲಗಲಿ ಬ್ಯಾರೇಜ್‌ಗೆ ಒಟ್ಟು 54 ಕೋಟಿ ರೂ. ವಿನಿಯೋಗವಾಗಿದೆ. ಗಲಗಲಿ ಬ್ಯಾರೇಜ್‌ನಿಂದ ಹಿಪ್ಪರಗಿ ಬ್ಯಾರೇಜ್‌ವರೆಗೆ ನೀರು ನಿಂತಿದೆ. ಇದರಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಮಹಾರಾಷ್ಟ್ರದ ಮುಂದೆ ಕೈಒಡ್ಡುವ ಬೇಡಿಕೆ ಕಡಿಮೆ ಆಗಲಿದೆ ಎಂದರು.

    ತುಬಚಿ-ಬಬಲೇಶ್ವರ ಯೋಜನೆಯಿಂದ ಈಗಾಗಲೇ ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನೀರು ಕೊಡಲಾಗುತ್ತಿದ್ದು, ಅದರ ಬದಲಾಗಿ ಮಹಾರಾಷ್ಟ್ರದಿಂದ ಬೇಸಿಗೆಯಲ್ಲಿ ನಮ್ಮ ಬ್ಯಾರೇಜ್‌ಗಳಿಗೆ ನೀರು ಪಡೆಯುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

    ನಂದಿ ಸಕ್ಕರೆ ಕಾರ್ಖಾನೆ ಭಾಗದಲ್ಲಿ ಆಸ್ಪತ್ರೆಗಳ ಕೊರತೆಯಿದ್ದು, ಪ್ರಾಥಮಿಕ ಆರೊಗ್ಯ ಕೇಂದ್ರ ಆರಂಭಿಸಬೇಕು ಎಂದು ಸ್ಥಳೀಯರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು, ನೀವು ಸ್ಥಳಾವಕಾಶ ಕೊಟ್ಟರೆ ಬಿಎಲ್‌ಡಿಇ ಸಂಸ್ಥೆಯಿಂದಲೇ ಆಸ್ಪತ್ರೆ ನಿರ್ಮಿಸುವುದಾಗಿ ಭರವಸೆ ನೀಡಿದರು.

    ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಹಿರಿಯ ಸಹಕಾರಿ ಧುರೀಣ ಎಚ್.ಎಸ್. ಕೋರಡ್ಡಿ, ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಶಿವನಗೌಡ ಪಾಟೀಲ ಯಡಹಳ್ಳಿ, ಮುತ್ತು ವಾಸಣ್ಣ ದೇಸಾಯಿ, ಎಚ್.ಆರ್.ಬಿರಾದಾರ, ಬಸನಗೌಡ ಪಾಟೀಲ, ರಾಮಣ್ಣ ಶೇಬಾನಿ ಸೇರಿದಂತೆ ಚಿಕ್ಕಗಲಗಲಿ, ಹೊಸೂರು, ಜಂಬಗಿ, ಬಬಲಾದ, ಶಿರಬೂರ, ಕಣಬೂರ ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts