More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯುದ್ದೋಪಾದಿಯಲ್ಲಿ ಸಿದ್ಧತೆ

    ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ತಡವಾಗಿ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯುದ್ಧೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.
    ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 18ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
    ಡಿಡಿಪಿಐ ಎನ್.ಬಿ.ಹೊಸೂರ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ಸಾಲಿನಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ದತ್ತು ನೀಡಲಾಗುತ್ತಿದೆ. ಮೂವರು ಅಧಿಕಾರಿಗಳ ತಂಡ ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡಿ, ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

    15ದಿನ ಸಂಬಳ ಕಡಿತಕ್ಕೆ ಒತ್ತಾಯ

    ಕಳೆದ ಜಿಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳದ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನೀಲಮ್ಮ ಮೇಟಿ ಪ್ರತಿಕ್ರಿಯಿಸಿ, ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ತಿಂಗಳ ವೇತನದಲ್ಲಿ 15 ದಿನಗಳ ಸಂಬಳ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.
    ಜಿಪಂ ಸಿಇಒ ಲಕ್ಷ್ಮಿಕಾಂತ ರೆಡ್ಡಿ ಪ್ರತಿಕ್ರಿಯಿಸಿ, ಸಭೆಗೆ ಹಾಜರಾಗದ ಅಧಿಕಾರಿಗಳ ಕುರಿತು ಆಯಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

    ದುಡ್ಡಿನ ಆಸೆಗೆ ಬಿದ್ದ ಅಧಿಕಾರಿಗಳು

    ಕೊಣ್ಣೂರು ಗ್ರಾಪಂ ಪಿಡಿಒ ನರೇಗಾ ಯೋಜನೆಯಡಿ ಸತ್ತವರ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದು, ಅದೇ ರೀತಿ ಅಧಿಕಾರಿಗಳು ಹಣದ ಆಸೆಗೆ ಬಿದ್ದಿದ್ದಾರೆ ಎಂದು ಭೀಮರಾವ್ ಯಂಟಮಾನ ಆರೋಪಿಸಿದರು. ಜಿಪಂ ಸಿಇಒ ಲಕ್ಷ್ಮ್ಮಿಕಾಂತ ರೆಡ್ಡಿ ಪ್ರತಿಕ್ರಿಯಿಸಿ, ಲೋಪ ಕಂಡು ಬಂದ ಹಿನ್ನೆಲೆ ವಿವಿಧ ಇಲಾಖೆಯ ಮೂವರು ನೌಕರರನ್ನು ತೆಗೆದು ಹಾಕಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

    ಐದು ವರ್ಷವಾದ್ರೂ ಕೆಲ್ಸ ಆಗಿಲ್ರೀ..

    ನಮ್ಮ ಅಧಿಕಾರಾವಧಿ ಪೂರ್ಣಗೊಂಡರೂ ಗ್ರಾಮೀಣ ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಕಾಮಗಾರಿಗಳು ಮುಗಿದಿಲ್ಲ ಎಂದು ಬಸನಗೌಡ ವಣಕ್ಯಾಳ ಆಕ್ರೋಶ ವ್ಯಕ್ತಪಡಿಸಿದರು.
    2016-17ನೇ ಸಾಲಿನಲ್ಲಿ ನಿರ್ಮಿತಿ ಕೇಂದ್ರಕ್ಕೆ ನೀಡಿದ ಕಾಮಗಾರಿಗಳು ಪೂರ್ಣಗೊಂಡಿಲ್ಲ. ನಾವೂ ಮೊದಲು ಸದಸ್ಯರಾದಾಗ ಅನುಮೋದನೆ ದೊರಕಿದ್ದು, ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದರೆ ಜನರಿಗೆ ಏನು ಹೇಳಬೇಕು ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಹೊಲಿಗೆ ಯಂತ್ರಕ್ಕಾಗಿ ಜಟಾಪಟಿ

    ಹೊಲಿಗೆ ಯಂತ್ರ ಹಂಚಿಕೆ ವಿಚಾರದಲ್ಲಿ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಪ್ರತಿಭಾ ಪಾಟೀಲ ಮಾಹಿತಿ ನೀಡಿ, ಜಿಲ್ಲೆಗೆ ಒಟ್ಟು 489 ಹೊಲಿಗೆ ಯಂತ್ರಗಳು ಮಂಜೂರಾಗಿವೆ. ಸ್ಥಾಯಿ ಸಮಿತಿಯಲ್ಲಿರುವವರಿಗೆ 25 ಹೊಲಿಗೆ ಯಂತ್ರ, ಉಳಿದ ಸದಸ್ಯರಿಗೆ 8 ರಂತೆ ಹಂಚಿಕೆ ಮಾಡಿರುವುದಾಗಿ ತಿಳಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಭೀಮರಾವ್ ಯಂಟಮಾನ, ಎಲ್ಲರಿಗೂ ಒಂದೇ ರೀತಿಯಲ್ಲಿ ಹಂಚಿಕೆ ಆಗಬೇಕು ಎಂದು ಒತ್ತಾಯಿಸಿದರು. ಪ್ರತಿ ಸದಸ್ಯರಿಗೆ 12ರಂತೆ ಹೊಲಿಗೆ ಯಂತ್ರ ವಿತರಣೆ ಮಾಡುವಂತೆ ಪಟ್ಟು ಹಿಡಿದರು.

    ಅಧಿಕಾರಿ ವಿರುದ್ಧ ಲಂಚದ ಆರೋಪ

    ಅಕ್ಷರದಾಸೋಹ ಅಧಿಕಾರಿ ಎಸ್.ಎಸ್.ಮುಜಾವರ ವಿರುದ್ಧ ಸದಸ್ಯರು ಲಂಚದ ಆರೋಪವನ್ನು ಮಾಡಿದರು. ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವ ವೇಳೆ ಅಲ್ಲಿನ ಕಾರ್ಯಕರ್ತೆಯರಿಂದ ಲಂಚ ಸ್ವೀಕರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಪ್ರತಿಭಾ ಪಾಟೀಲ ಒತ್ತಾಯಿಸಿದರು.
    ತನಿಖಾ ತಂಡ ರಚಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.

    ದನದ ಕೊಟ್ಟಿಗೆಯಲ್ಲಿ ಭ್ರೂಣಲಿಂಗ ಪತ್ತೆ ಯಂತ್ರ !

    ದನದ ಕೊಟ್ಟಿಗೆಯಲ್ಲಿ ಭ್ರೂಣಲಿಂಗ ಪತ್ತೆ ಯಂತ್ರಗಳನ್ನು ಇಟ್ಟುಕೊಂಡು ವೈದ್ಯರು ಹಣ ಗಳಿಸುತ್ತಿದ್ದಾರೆ ಎಂದು ಭೀಮರಾವ್ ಯಂಟಮಾನ ಗಂಭೀರ ಆರೋಪ ಮಾಡಿದರು.
    ಆಲಮೇಲ ವ್ಯಾಪ್ತಿಯಲ್ಲಿ ವೈದ್ಯರೊಬ್ಬರು ದನದ ಕೊಟ್ಟಿಗೆಯಲ್ಲಿ ಭ್ರೂಣಲಿಂಗ ಪತ್ತೆ ಯಂತ್ರವನ್ನು ಇಟ್ಟುಕೊಂಡಿದ್ದಾರೆ ಎಂದಾಗ ಡಿಎಚ್‌ಒ ಡಾ.ರಾಜಕುಮಾರ ಯರಗಲ್, ತನಿಖಾ ತಂಡವನ್ನು ಸ್ಥಳಕ್ಕೆ ಕಳುಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
    ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಆರೋಗ್ಯ ಸಚಿವರು ಸಿಬ್ಬಂದಿ ನೇಮಕಕ್ಕೆ ಸೂಚನೆ ನೀಡಿದ್ದು, ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

    ಮೊಟ್ಟೆ ವಿತರಣೆಯಲ್ಲಿ ಅವ್ಯವಹಾರ

    ಜಿಲ್ಲೆಯ ದಿಂಡವಾರ ವ್ಯಾಪ್ತಿಯಲ್ಲಿ ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎಂದು ಕಲ್ಲಪ್ಪ ಮಟ್ಟಿ ಸಭೆಯ ಗಮನ ಸೆಳೆದರು.
    ಕರೊನಾ ಹಿನ್ನೆಲೆಯಲ್ಲಿ ಮಕ್ಕಳಿಗೆ ಏಪ್ರಿಲ್‌ನಿಂದ ಈವರೆಗೆ ಸರಿಯಾಗಿ ಮಕ್ಕಳಿಗೆ ಮೊಟ್ಟೆ ವಿತರಣೆ ಆಗಿಲ್ಲ. ಅದರಲ್ಲಿ ಅವ್ಯವಹಾರವಾಗಿದೆ ಎಂದರು. ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಅವ್ಯವಹಾರದ ಕುರಿತು ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬೀಜ ಉತ್ಪಾದನಾ ಕೇಂದ್ರ ನಿರುಪಯುಕ್ತ

    ವಿಜಯಪುರದ ಹೊರವಲಯದ ಹಿಟ್ನಳ್ಳಿಯಲ್ಲಿರುವ ಬೀಜ ಉತ್ಪಾದನಾ ಕೇಂದ್ರ ನಿರುಪಯುಕ್ತವಾಗಿದೆ ಎಂದು ಯಂಟಮಾನ ತಿಳಿಸಿದರು. ಬೀಜ ಉತ್ಪಾದನೆಗೆ 180 ಎಕರೆ ಜಾಗವನ್ನು ನೀಡಲಾಗಿದೆ. ಆದರೆ ಜಮೀನು ಸಂಪೂರ್ಣ ಬೀಳು ಬಿದ್ದಿದೆ. ಅಲ್ಲಿ ಯಾವುದೇ ರೀತಿಯಲ್ಲಿ ಬೀಜ ಉತ್ಪಾದನೆ ಆಗುತ್ತಿಲ್ಲ. ಅಲ್ಲಿರುವ ಯಂತ್ರೋಪಕರಣಗಳು ಮೂಲೆ ಸೇರಿವೆ. ಎತ್ತುಗಳಿಗೆ ಸರಿಯಾಗಿ ಮೇವು ಸಿಗುತ್ತಿಲ್ಲ. ಈ ಬಗ್ಗೆ ರಠಾವು ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
    ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts