More

    ಮಿಂಚಿನ ನೋಂದಣಿಗೆ ಸೂಚನೆ

    ವಿಜಯಪುರ: ರಾಜ್ಯಾದ್ಯಂತ ಜ.6, 7 ಹಾಗೂ 8 ರಂದು ಯುವ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯ ಪ್ರತಿಯೊಂದು ಕಾಲೇಜುಗಳ ಅರ್ಹ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
    ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಮಿಂಚಿನ ನೋಂದಣಿ ಅಂಗವಾಗಿ ಜಿಲ್ಲೆ ತಹಸೀಲ್ದಾರರು ಹಾಗೂ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
    18 ರಿಂದ 19 ವಯೋಮಾನದ ಪ್ರತಿಯೊಬ್ಬ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಅರ್ಹ ಮತದಾರರ ನೋಂದಣಿ ಕಾರ್ಯ ತಕ್ಷಣ ಆರಂಭಿಸುವಂತೆ ಸೂಚನೆ ನೀಡಿದರು.
    ಚುನಾವಣೆ ಆಯೋಗದ ನಿರ್ದೇಶನದಂತೆ ಅಂದಾಜು 43,924 ಅರ್ಹ ಯುವ ಮತದಾರರು ಜಿಲ್ಲೆಯಲ್ಲಿ ನೋಂದಣಿಯಾಗಬೇಕಾಗಿದ್ದು, ಪ್ರತಿ ಕಾಲೇಜು, ಪ್ರಾಂಶುಪಾಲರು, ಆಯಾ ತಾಲೂಕು ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತದಾರರ ನೋಂದಣಿ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಕನಿಷ್ಠ ತಲಾ 6 ಸಾವಿರ ಮತದಾರರು, ಮತದಾರರ ಪಟ್ಟಿಯಿಂದ ಹೊರಗುಳಿದಿದ್ದು, ಅಂತಹ ಯುವ ಮತದಾರರ ತಕ್ಷಣ ನೋಂದಣಿ ಕಾರ್ಯ ಮಾಡುವಂತೆ ಸೂಚನೆ ನೀಡಿದರು.
    ಜಿಲ್ಲೆಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಮಹಾವಿದ್ಯಾಲಯ, ಪದವಿ, ಪಿಯು ಕಾಲೇಜುಗಳ ವ್ಯಾಪ್ತಿಯ ಪ್ರತಿ ವಿದ್ಯಾರ್ಥಿ ಮತದಾರರಾಗಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಅದಕ್ಕೆ ಆಯಾ ಕಾಲೇಜು ಪ್ರಾಂಶುಪಾಲರು ಒಬ್ಬ ಉಪನ್ಯಾಸಕರನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಬೇಕು ಎಂದು ತಿಳಿಸಿದರು.
    ಸಂವಾದದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲೆಯ ತಹಸೀಲ್ದಾರರು, ಕಾಲೇಜು ಪ್ರಾಂಶುಪಾಲರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts