More

    ಲ್ಯಾಬ್ ಮಂಜೂರಿಗೆ ಸಕಾರಾತ್ಮಕ ಸ್ಪಂದನೆ

    ವಿಜಯಪುರ: ರಾಜ್ಯದ ವಿವಿಧೆಡೆ ಲ್ಯಾಬ್‌ಗಳನ್ನು ಮಂಜೂರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು ಶೀಘ್ರದಲ್ಲೇ ಜಿಲ್ಲೆಗೂ ಲ್ಯಾಬ್ ನೀಡಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
    ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಲ್ಯಾಬ್ ಮಂಜೂರಿಸಲು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಶೀಘ್ರದಲ್ಲೇ ಲ್ಯಾಬ್ ಮಂಜೂರಿಸುವ ಭರವಸೆಯೂ ಸಿಕ್ಕಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಮನೆ ಮನೆ ಸಮೀಕ್ಷೆ

    ಈಗಾಗಲೇ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ. ಅದಕ್ಕಾಗಿ 50 ತಂಡಗಳನ್ನು ರಚಿಸಲಾಗಿದೆ. ಸೀಲ್‌ಡೌನ್ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು 130-140 ಪೌರ ಕಾರ್ಮಿಕರನ್ನು ನೇಮಿಸಲಾಗಿದೆ. ಎಲ್ಲರಿಗೂ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಇನ್ಮುಂದೆ ಪ್ರತೀ ಮನೆ ಮನೆಗೂ ತೆರಳಿ ಸಮೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ. ಹಿರಿಯ ನಾಗರಿಕರು, ಗರ್ಭಿಣಿಯರು, ಡಯಾಲಿಸಿಸ್ ರೋಗಿಗಳು ಸೇರಿದಂತೆ ಹಲವರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಪ್ರತೀ ಮನೆ ಮನೆಗೆ ಭೇಟಿ ನೀಡಿ ಅಂಥವರ ಮಾಹಿತಿ ಕಲೆ ಹಾಕಲಾಗುತ್ತದೆ. ಅವರ ಸಮಸ್ಯೆ ಆಲಿಸುವ ಪ್ರಯತ್ನ ಮಾಡುವುದಾಗಿ ಸಚಿವೆ ಜೊಲ್ಲೆ ತಿಳಿಸಿದರು.

    ಪ್ರಕರಣಗಳ ವಿವರ

    ಜಿಲ್ಲೆಯಲ್ಲಿ ಈವರೆಗೆ 35 ಪಾಸಿಟಿವ್ ಪ್ರಕರಣಗಳು ಬಂದಿವೆ. ಅದರಲ್ಲಿ ಇಬ್ಬರು ಅಸುನೀಗಿದ್ದಾರೆ. ಬೇರೆ ದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ 1705 ಜನರ ಮೇಲೆ ನಿಗಾ ಇರಿಸಲಾಗಿದೆ. 1374 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 1084 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. 255 ಪರೀಕ್ಷಾ ವರದಿಗಳು ಬಾಕಿ ಇವೆ. 1325 ಜನರು 1 ರಿಂದ 28 ದಿನಗಳ ಗೃಹ ಬಂಧವನ ಅವಧಿ ಪೂರೈಸಿದ್ದಾರೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದ್ದು ಅದರಲ್ಲಿ 1033 ಪ್ರಥಮ ಸಂಪರ್ಕಿತರ ಮಾಹಿತಿ ದೊರೆತಿದೆ ಎಂದ ಸಚಿವೆ ಜೊಲ್ಲೆ ಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಲಿದೆ. ಆದಷ್ಟು ಬೇಗ ಕರೊನಾ ದೂರವಾಗಲಿ ಎಂದು ಎಲ್ಲರೂ ಆಶಿಸೋಣ ಎಂದರು.

    ವಿಪ ಸದಸ್ಯ ಅರುಣ ಶಹಾಪುರ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್‌ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ ಮತ್ತಿತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts