More

    ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಚಾಲನೆ

    ವಿಜಯಪುರ: ಬಹುದಿನದ ಬೇಡಿಕೆಯಾಗಿದ್ದ ವಿಜಯಪುರ-ಹುಬ್ಬಳ್ಳಿ ಇಂಟರ್‌ಸಿಟಿ ಎಕ್ಸಪ್ರೆಸ್ ರೈಲು ಸೌಕರ್ಯಕ್ಕೆ ಸಂಸದರಾದ ರಮೇಶ ಜಿಗಜಿಣಗಿ ಹಾಗೂ ಪಿ.ಸಿ. ಗದ್ದಿಗೌಡರ ಸೋಮವಾರ ಜಂಟಿಯಾಗಿ ಚಾಲನೆ ನೀಡಿದರು.

    ನಗರದ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ರೈಲ್ವೆ ಸೌಲಭ್ಯಕ್ಕೆ ಚಾಲನೆ ನೀಡಿದರು.

    ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯ ಜನತೆಯ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಪ್ರವಾಸೋದ್ಯಮ ಉತ್ತೇಜನಕ್ಕೆ ಈ ರೈಲ್ವೆ ಸಂಪರ್ಕ ಸಹಕಾರಿಯಾಗಲಿದೆ. ಸದರಿ ರೈಲು ಸೌಕರ್ಯದಿಂದಾಗಿ ಅವಳಿ ಜಿಲ್ಲೆಗಳ ಪ್ರವಾಸೊದ್ಯಮ ಹಾಗೂ ವಾಣಿಜ್ಯ ಬೆಳವಣಿಗೆಗೆ ಉತ್ತೇಜನ ಸಿಕ್ಕಂತಾಗಲಿದೆ ಎಂದರು.

    ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಈ ರೈಲ್ವೆ ಸೌಕರ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಸದರಿ ರೈಲು ಸಕಾಲಕ್ಕೆ ಹುಬ್ಬಳ್ಳಿ ತಲುಪಲಿದ್ದು ಬಾಗಲಕೋಟೆ, ಬಾದಾಮಿ, ಆಲಮಟ್ಟಿ ಹಾಗೂ ಗದಗಗೆ ತೆರಳುವವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡ ವಿಜುಗೌಡ ಪಾಟೀಲ, ಎಡಿಎಂ ಪಿ.ಟಿ. ನಾಯಕ, ಲಲನ್ ಕುಮಾರ, ಸಿದ್ಧು ಭಂಟನೂರ, ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ವಿಜಯಕುಮಾರ ಪಾಟೀಲ, ಚಂದ್ರಶೇಖರ ಕವಟಗಿ, ಡಾ. ಸುರೇಶ ಬಿರಾದಾರ, ವಿಜಯಕುಮಾರ ಜೋಶಿ ಮತ್ತಿತರರಿದ್ದರು.

    ರೈಲ್ವೆ ಸಂಪರ್ಕ ತುಂಬಾ ಸಂತಸ ತಂದಿದೆ. ಇದಕ್ಕೆ ಸಹಕರಿಸಿದ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ನೈರುತ್ಯ ರೈಲ್ವೆ ಅಧಿಕಾರಿಕಾರಿಗಳು ಹಾಗೂ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.
    ರಮೇಶ ಜಿಗಜಿಣಗಿ, ಸಂಸದ

    ವೇಳಾಪಟ್ಟಿ
    ಪ್ರತಿದಿನ ಬೆಳಗ್ಗೆ 5.30ಕ್ಕೆ ವಿಜಯಪುರದಿಂದ ರೈಲು ನಿರ್ಗಮಿಸಲಿದ್ದು 11.05ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಸಂಜೆ 4.45ಕ್ಕೆ ಬಿಟ್ಟು ರಾತ್ರಿ 10.45ಕ್ಕೆ ವಿಜಯಪುರ ತಲುಪಲಿದೆ. 5 ದ್ವಿತೀಯ ದರ್ಜೆ ಸ್ಲೀಪರ್ ಬೋಗಿಗಳು, 7 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಲಗೇಜ್ ಕಮ್ ಬ್ರೇಕ್‌ವ್ಯಾನ್‌ಗಳನ್ನು ಹೊಂದಿದೆ. ಈ ರೈಲು ವಿಜಯಪುರದಿಂದ ಬಸವನಬಾಗೇವಾಡಿ ಮಾರ್ಗ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರ, ಮಲ್ಲಾಪುರ, ಗದಗ ಮಾರ್ಗವಾಗಿ ಹುಬ್ಬಳ್ಳಿ ತಲುಪಲಿದೆ.

    ಆಲಮಟ್ಟಿ-ಚಿತ್ರದುರ್ಗ ರೈಲು ಮಾರ್ಗ
    ಆಲಮಟ್ಟಿ-ಚಿತ್ರದುರ್ಗ ಹೊಸ ರೈಲು ಮಾರ್ಗ ಆರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿರುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.

    ಈ ಯೋಜನೆ ಕೈಗೂಡಿದರೆ ಉತ್ತರ ಕರ್ನಾಟಕ ಭಾಗದಿಂದ ಮಧ್ಯ ಕರ್ನಾಟಕಕ್ಕೆ ನೇರ ಸಂಪರ್ಕ ದೊರಕಲಿದೆ ಎಂದು ಸೋಮವಾರ ವಿಜಯಪುರ-ಹುಬ್ಬಳ್ಳಿ ಇಂಟರ್‌ಸಿಟಿ ರೈಲ್ವೆ ಸೌಕರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಮುಂತಾದವರು ಆಲಮಟ್ಟಿ-ಚಿತ್ರದುರ್ಗ ರೈಲ್ವೆ ಮಾರ್ಗ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಸಹ ಸಕಾರಾತ್ಮಾಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
    ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಐಎಸ್‌ಒ ಸ್ವಚ್ಛತಾ ಪ್ರಮಾಣಪತ್ರ ದೊರಕಿರುವುದು ಸಂತೋಷದ ಸಂಗತಿ. ಹೊಸ ರೈಲು ಸೇವೆಗಳ ಆರಂಭ, ರೈಲ್ವೆ ನಿಲ್ದಾಣದ ಭೌತಿಕ ಕಾಮಗಾರಿ ಜೊತೆಗೂ ರೈಲ್ವೆ ನಿಲ್ದಾಣಗಳ ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತಿದೆ ಎಂದರು.

    ನಾನು ಪ್ರಚಾರ ಪ್ರಿಯನಲ್ಲ
    ‘ಕೆಲವರು ಸಣ್ಣ ಕೆಲಸ ಮಾಡಿ ದೊಡ್ಡ ಬೋರ್ಡ್ ಹಾಕಿಸಿಕೊಳ್ಳುತ್ತಾರೆ, ದೊಡ್ಡ ದೊಡ್ಡ ಫೋಟೋ ಹಾಕಿಕೊಂಡು ಮೆರೆಯುತ್ತಾರೆ, ಆದರೆ ನಾನು ಪ್ರಚಾರ ಪ್ರಿಯನಲ್ಲ. ಮಾಡಿದ ಕೆಲಸಕ್ಕೆ ಬೋರ್ಡ್, ಫೋಟೋ ಹಾಕಿಕೊಳ್ಳುವುದಿಲ್ಲ, ನಾನು ಮಾಡಿರುವ ಕೆಲಸವನ್ನು ಗಾಂಧಿಚೌಕ್‌ನಲ್ಲಿ ಯಾರಿಗೆ ಬೇಕಾದರೂ ಕೇಳಿದರೆ ಹೇಳುತ್ತಾರೆ. ನನ್ನ ಆಯ್ಕೆ ಮಾಡಿದ ಪ್ರಜೆಗಳೇ ನನ್ನ ಪ್ರಭುಗಳು, ಈ ಪ್ರಜಾಪ್ರಭುಗಳ ಆದೇಶದಂತೆ ಕೆಲಸ ಮಾಡುತ್ತಿದ್ದೇನೆ, ನನ್ನ ಸೇವೆ ಅವರಿಗೆ ತೃಪ್ತಿ ದೊರಕಿದರೆ ಸಾಕು, ನಾನು ಯಾರಿಗೂ ಮೆಚ್ಚಿಸಬೇಕಾಗಿಲ್ಲ.
    ರಮೇಶ ಜಿಗಜಿಣಗಿ, ಸಂಸದ, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts