More

    ಅಡಕತ್ತರಿಯಲ್ಲಿ ಕ್ಷೌರಿಕರ ಬದುಕು !

    ಹೀರಾನಾಯ್ಕ ಟಿ. ವಿಜಯಪುರ

    ಕರೊನಾ ಸೋಂಕಿನ ಭೀತಿ, ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಮಾ. 22 ರಂದು ಕ್ಷೌರದ ಅಂಗಡಿಗಳ ಬಾಗಿಲು ಮುಚ್ಚಿ ಮನೆ ಸೇರಿಕೊಂಡಿರುವ ಕ್ಷೌರಿಕರ ಬದುಕು ಅಡಕತ್ತರಿಯಲ್ಲಿ ಸಿಲುಕಿ ಸಂಕಷ್ಟದಲ್ಲಿ ದಿನದೂಡುವಂತಾಗಿದೆ.
    ಲಾಕ್‌ಡೌನ್‌ನಿಂದಾಗಿ ಕ್ಷೌರಿಕರ ಬದುಕು ದುಸ್ತರಗೊಂಡಿದ್ದರಿಂದ ರಾಜ್ಯ ಸರ್ಕಾರ 5 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಅದರ ಪ್ರಯೋಜನ ಹೇಗೆ ಪಡೆಯಬೇಕು ಎಂಬುದೇ ಗೊಂದಲವಾಗಿದೆ.

    ಬಿಡುಗಡೆಯಾಗದ ಮಾರ್ಗಸೂಚಿ

    ಪರಿಹಾರ ಅಂತೂ ಸರ್ಕಾರ ೋಷಣೆ ಮಾಡಿದೆ. ಆದರೆ ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿ ಸಲ್ಲಿಸಬೇಕು? ಎನ್ನುವ ಬಗ್ಗೆ ಇನ್ನು ಯಾವುದೇ ಮಾರ್ಗಸೂಚಿ ಬಂದಿಲ್ಲ. ಈಗಾಗಲೇ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಮೂಲಕ ಅರ್ಜಿಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಮೆಕ್ಕೆಜೋಳ ಬೆಳೆಗಾರರು ಪರಿಹಾರ ಪಡೆಯಲು ಕೃಷಿ ಇಲಾಖೆಗೆ ಸಂಪರ್ಕಿಸಲು ಸೂಚನೆ ನೀಡಿದೆ. ಆದರೆ ಕ್ಷೌರಿಕರಿಗೆ, ಮಡಿವಾಳ ಸಮುದಾಯದ ಜನರಿಗೆ ಪರಿಹಾರ ಪಡೆಯಲು ಇನ್ನೂ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಿಲ್ಲ.

    ಬದುಕು ಇನ್ನಷ್ಟು ದುಸ್ತರ

    ಕರೊನಾ ಭೀತಿ ಹೆಚ್ಚುತ್ತಲೇ ಕೇಂದ್ರ ಸರ್ಕಾರ ಘೋಷಿಸಿದ ಲಾಕ್‌ಡೌನ್‌ನಿಂದಾಗಿ ಕ್ಷೌರದ ಅಂಗಡಿಗಳೆಲ್ಲ ಬಾಗಿಲು ಬೀಗ ಹಾಕಿದ್ದು, ಇದೀಗ ತೆರೆಯಲಾಗಿದೆ. ಆದರೂ ದುಡಿಮೆ ನಂಬಿದವರ ಬದುಕು ಇನ್ನೂ ಅಸಹನೀಯವಾಗಿದೆ. ಸಾಮಾನ್ಯವಾಗಿ ನಿತ್ಯ ಕನಿಷ್ಠ 500 ರೂ. ನಿಂದ ಸಾವಿರಾರು ರೂ. ವರೆಗೆ ದುಡಿಯುತ್ತಿದ್ದ ಕ್ಷೌರಿಕರಿಗೆ ಲಾಕ್‌ಡೌನ್‌ನಿಂದ ದೊಡ್ಡ ಹೊಡೆತ ಬಿದ್ದಿದೆ. ನಿತ್ಯದ ಸಂಸಾರ ನಡೆಸಲು ಕಷ್ಟದಾಯಕವಾಗಿದೆ.
    ನಗರ ಪ್ರದೇಶ, ಪಟ್ಟಣ ಪ್ರದೇಶಗಳ ಒಂದೊಂದು ಅಂಗಡಿಯಲ್ಲಿ ಇಬ್ಬರಿಂದ ಮೂರು ಕಾರ್ಮಿಕರು ಕೆಲಸ ಮಾಡುತ್ತಾರೆ. ಬಹುತೇಕ ಮಳಿಗೆಗಳಲ್ಲಿ ಕಾರ್ಮಿಕರು ತಾವು ದುಡಿದ ಹಣದಲ್ಲಿ ಅರ್ಧದಷ್ಟು ಸಲೂನ್ ಮಾಲೀಕರಿಗೆ ನೀಡುತ್ತಿದ್ದಾರೆ. ಇದೀಗ ಲಾಕ್‌ಡೌನ್ ಮುಗಿದಿದೆ. ಆದರೆ ಅಂಗಡಿಗೆ ಆಗಮಿಸುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದಾಗಿ ಕೈಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವರು ಬದುಕಿನ ಬಂಡೆ ಎಳೆಯಲು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲಾಗದೆ ತರಕಾರಿ ಮಾರುವುದು, ಕೃಷಿ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ಷೌರಿಕರ ಪತ್ನಿಯರು ಕೂಲಿಗೆ ಹೋಗುತ್ತಿದ್ದಾರೆ.

    ಪರಿಹಾರದ ನಿರೀಕ್ಷೆಯಲ್ಲಿ ಕ್ಷೌರಿಕರು

    ಅನೇಕರಿಗೆ ಮನೆಗೆ ಬಂದು ಕಟಿಂಗ್ ಮಾಡುವಂತೆ ಗ್ರಾಹಕರಿಂದ ಕರೆ ಬರುತ್ತಿವೆ. ಆದರೆ, ಕರೊನಾ ಸೋಂಕು ತಗಲುವ ಭೀತಿಯಿಂದ ಕ್ಷೌರಿಕರು ಗ್ರಾಹಕರ ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಒಂದು ತಿಂಗಳಿಂದ ನಯಾಪೈಸೆ ದುಡಿಮೆ ಇಲ್ಲ. ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ನಮ್ಮನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಅವರಿಗೆ ನೀಡುವ ಯಾವ ಸೌಲಭ್ಯಗಳೂ ನಮಗೆ ಸಿಗುತ್ತಿಲ್ಲ. ಕಟ್ಟಡ ಕೂಲಿ ಕಾರ್ಮಿಕರಿಗೆ ಸರ್ಕಾರ 2 ಸಾವಿರ ರೂ. ನೀಡುತ್ತಿದೆ. ಅದರಂತೆ ಸರ್ಕಾರ ಕ್ಷೌರಿಕರಿಗಾಗಿ 5 ಸಾವಿರ ರೂ. ಪರಿಹಾರ ೋಷಣೆ ಮಾಡಿದೆ. ಅದನ್ನಾದರೂ ನೀಡಿದರೆ ಮನೆ ಬಾಡಿಗೆ ಕಟ್ಟಲು, ದಿನಬಳಕೆಗೆ ದಿನಸಿ ಖರೀದಿಗಾದರೂ ಅನುಕೂಲವಾಗಲಿದೆ ಎನ್ನುತ್ತಾರೆ ಕ್ಷೌರಿಕ ರವಿ ನಾವಿ.

    ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಹಾಗೂ ವಿಜಯಪುರ ಜಿಲ್ಲೆಯಲ್ಲಿ 16 ಸಾವಿರ ಜನರು ಕ್ಷೌರಿಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ 5 ಸಾವಿರ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈವರೆಗೆ ಯಾವುದೇ ಮಾರ್ಗಸೂಚಿಯನ್ನು ನೀಡಿಲ್ಲ. ಶೀಘ್ರ ಪರಿಹಾರ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
    ಬಸವರಾಜ ಹಡಪದ ಜಿಲ್ಲಾಧ್ಯಕ್ಷ, ಹಡಪದಪ್ಪಣ್ಣ ಸಮಾಜ ಸೇವಾ ಸಂಘ

    ಅಡಕತ್ತರಿಯಲ್ಲಿ ಕ್ಷೌರಿಕರ ಬದುಕು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts