More

    ಖಾಸಗಿ ಶಾಲೆ ತೊರೆದ 4 ಸಾವಿರ ಮಕ್ಕಳು

    ಹೀರಾನಾಯ್ಕ ಟಿ. ವಿಜಯಪುರ

    ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ತರಗತಿಗಳು ಇನ್ನೂ ನಡೆಯುತ್ತಿಲ್ಲ. ಆದರೆ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗೆ ದಾಖಲಾಗುತ್ತಿರುವವರ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿದೆ.
    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ವಿದ್ಯಾಗಮ ಯೋಜನೆ ಜಾರಿಯಿಂದಾಗಿ ಖಾಸಗಿ ಶಾಲೆ ಮಕ್ಕಳು ಸರ್ಕಾರಿ ಶಾಲೆಗಳತ್ತ ಚಿತ್ತ ಹರಿಸಿದ್ದಾರೆ. ವಿಜಯಪುರ ಜಿಲ್ಲೆಯೊಂದರಲ್ಲಿಯೇ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಅಚ್ಚರಿ ಮೂಡಿಸಿದೆ.

    ಸರ್ಕಾರಿ ಶಾಲೆಯತ್ತ ಚಿತ್ತ

    ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ವಿಳಂಬವಾದ ಹಿನ್ನೆಲೆ ಸರ್ಕಾರಿ ಶಾಲೆಯತ್ತ ವಿದ್ಯಾರ್ಥಿಗಳು ಮುಖಮಾಡಿದ್ದಾರೆ. ಜಿಲ್ಲೆಯಲ್ಲಿ 4241 ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಬಸವನಬಾಗೇವಾಡಿ ತಾಲೂಕಿನಲ್ಲಿ 750, ಮುದ್ದೇಬಿಹಾಳ 525, ವಿಜಯಪುರ ನಗರ 608, ಸಿಂದಗಿ 835, ಚಡಚಣ 320, ವಿಜಯಪುರ ಗ್ರಾಮೀಣ 775, ಇಂಡಿ ತಾಲೂಕಿನ 428 ಮಕ್ಕಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ.
    ಜಿಲ್ಲೆಯಲ್ಲಿ ಒಟ್ಟು 1238 ಖಾಸಗಿ ಹಾಗೂ 2011 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿವೆ. 2.75 ಲಕ್ಷ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದಿದ್ದಾರೆ. ಹೊಸದಾಗಿ ಒಟ್ಟು 7 ಸಾವಿರ ಮಕ್ಕಳು ನೋಂದಣಿ ಮಾಡಿಸಿಕೊಂಡಿದ್ದು, ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಶೇ.80 ರಷ್ಟು ದಾಖಲೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಖಾಸಗಿ ಶಾಲೆಗಳಲ್ಲಿ ಸೆ.5ರಿಂದ ದಾಖಲೆ ಪ್ರಕ್ರಿಯೆ ಆರಂಭವಾಗಿದೆ ಎಂದು ಡಿಡಿಪಿಐ ಸಿ. ಪ್ರಸನ್ನಕುಮಾರ ಮಾಹಿತಿ ನೀಡಿದ್ದಾರೆ.

    ಹಳ್ಳಿ ಹಳ್ಳಿಗೂ ತಲುಪಿದ ‘ವಿದ್ಯಾಗಮ’

    ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ವಿದ್ಯಾಗಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದೆ.
    ಇಂಟಲಿಜೆನ್ಸ್, ಬ್ರಿಲಿಯಂಟ್ ಹಾಗೂ ಜೀನಿಯಸ್ ಹೀಗೆ ಮೂರು ವಿಭಾಗಗಳಾಗಿ ಮಕ್ಕಳನ್ನು ವಿಭಜಿಸಿ ಅವರಿಗೆ ಇಂಟರ್‌ನೆಟ್‌ನಲ್ಲಿ ಆನ್‌ಲೈನ್ ಕೋಚಿಂಗ್, ವಾಟ್ಸ್ ಆ್ಯಪ್, ಎಸ್‌ಎಂಎಸ್ ಮೂಲಕ ಹಾಗೂ ಗುಂಪು ರಚನೆ ಮಾಡಿ ನೇರವಾಗಿ ಪಾಠ ಬೋಧನೆ ಮಾಡಲಾಗುತ್ತಿದೆ. ನಗರ, ಪಟ್ಟಣ, ಗ್ರಾಮಗಳಲ್ಲಿ ಮಾರ್ಗದರ್ಶಿ ಶಿಕ್ಷಕರು ತಮಗೆ ನಿಯೋಜಿತ ಪ್ರದೇಶದ ವಿದ್ಯಾರ್ಥಿಗಳನ್ನು ಅವರ ಮನೆ ಸಮೀಪ ಇರುವ ದೇವಾಲಯಗಳ ಆವರಣ, ಅರಳಿಕಟ್ಟೆ, ಮನೆಗಳ ಮುಂದೆ ಇರುವ ಜಗುಲಿ ಹೀಗೆ ಸ್ಥಳಗಳನ್ನು ಗುರುತಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದು ಕೂಡ ದಾಖಲಾತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts