More

    ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಹೆಚ್ಚಿಸಿ

    ವಿಜಯಪುರ: ಮುಂಬರುವ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅಂದಾಜು 1.5 ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.
    ಸಫಾಯಿ ಕರ್ಮಚಾರಿಗಳು ಚರಂಡಿ ಸ್ವಚ್ಛತೆ, ಉದ್ಯೋಗದಿಂದ ಮುಕ್ತರನ್ನಾಗಿ ವಿವಿಧ ಉದ್ಯೋಗದಲ್ಲಿ ತೊಡಗಿಸುವಂತೆ ಮಾಡಲು ನಿಗಮದ ಉದ್ದೇಶವಾಗಿದೆ. ಅವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಕಳೆದ ವರ್ಷ ಸರ್ಕಾರ 66 ಕೋಟಿ ರೂ. ಅನುದಾನ ನೀಡಿದೆ. ಈಗ ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂ. ಅನುದಾನ ಮತ್ತು ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದಿಂದ 500 ಕೋಟಿ ರೂ. ಅನುದಾನ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
    ಸಮುದಾಯವಾಗಿರುವ ಸಫಾಯಿ ಕರ್ಮಚಾರಿಗಳನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಅವರನ್ನು ಇತರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು, ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ನಿಖರ ಅಂಕಿ-ಸಂಖ್ಯೆ ಗುರುತಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಪುನರ್ ಸಮೀಕ್ಷೆ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅವರಿಗೆ ಗುರುತಿನ ಚೀಟಿ ನೀಡಿ, ನಿಖರವಾಗಿ ಸಮೀಕ್ಷೆ ಮಾಡಿ ಗುರುತಿಸಲು ಈ ಸರ್ವೇ ಕಾರ್ಯ ನಡೆಯುತ್ತಿದ್ದು, ಸರ್ವೇ ಕಾರ್ಯ, ರಾಷ್ಟ್ರೀಯ ಕಾನೂನು ವಿವಿಯಿಂದ ನಡೆಯಲಿದೆ ಎಂದರು.

    2003 ರಲ್ಲಿ ನಡೆಸಿದ ಸಮೀಕ್ಷೆ ಅನುಸಾರ ರಾಜ್ಯದಲ್ಲಿ 1.42 ಲಕ್ಷ ಸಫಾಯಿ ಕರ್ಮಚಾರಿಗಳು ಇದ್ದಾರೆ. ಈ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಅನುದಾನ ನೀಡಲು ನಿರ್ಧರಿಸಿತ್ತು. ಆದರೆ, ಖಾಸಗಿ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳನ್ನು ಈ ಹಿಂದಿನ ಸಮೀಕ್ಷೆ ಒಳಗೊಂಡಿರಲಿಲ್ಲ. ಅಂದಾಜು 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಸಫಾಯಿ ಕರ್ಮಚಾರಿಗಳು ಇದ್ದಾರೆ. ಈ ಹಿನ್ನ್ನೆಲೆಯಲ್ಲಿ ಸಂಪೂರ್ಣ ಸಮೀಕ್ಷೆಗಾಗಿ ನಿರ್ಧರಿಸಲಾಗಿದೆ. ಈ ವರ್ಷಾಂತ್ಯಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಿ ಅದರ ವರದಿ ಆಧಾರದ ಮೇಲೆ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಮುಂದಿನ ಆರ್ಥಿಕ ವರ್ಷದ ಯೋಜನೆ ರೂಪಿಸಲಿದೆ ಎಂದರು.
    ಬಹುತೇಕ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಸ್ವಂತ ಮನೆಯಿಲ್ಲ, ಅವರಿಗೆ ಸ್ವಂತ ಸೂರು ಕಲ್ಪಿಸಲು ಉದ್ದೇಶಿಸಿದೆ. ಜತಗೆ ಸ್ವಯಂ ಉದ್ಯೋಗ ಯೋಜನೆ, ಉದ್ಯೋಗ ಶೀಲತ ಅಭಿವೃದ್ಧಿ ಯೋಜನೆ, ಗಂಗಾಕಲ್ಯಾಣಿ, ಐರಾವತ ಯೋಜನೆ ಸೇರಿ ಹಲವಾರು ಸ್ವ ಉದ್ಯೋಗ ಕೈಗೊಳ್ಳುವ ಯೋಜನೆಗಳಿಗೆ ಆದ್ಯತೆ ನೀಡಲಾಗುವುದೆಂದು ಅಧ್ಯಕ್ಷರು ತಿಳಿಸಿದರು.
    ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ರೇಣುಕಾ ಸಾತರಲೆ, ಮಲ್ಲಿಕಾರ್ಜುನ ಹಳ್ಳಿಮನೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts