More

    ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

    ವಿಜಯಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರೈತರು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದು ಜಿಪಂ ಸಿಇಒ ಗೊವಿಂದ ರೆಡ್ಡಿ ಹೇಳಿದರು.

    ಇಲ್ಲಿನ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಜಿಲ್ಲಾ ಜಲಾನಯನ ಅಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಆತ್ಮ ಯೋಜನೆಯ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೃಷಿ ಇಲಾಖೆಯು ಕೇವಲ ರೈತರಿಗೆ ಬೇಕಾದ ಬೀಜ, ಗೊಬ್ಬರ ಮುಂತಾದ ಕೃಷಿ ಸಾಮಗ್ರಿಗಳನ್ನು ಪೂರೈಸದೆ, ಕೃಷಿಯನ್ನು ಲಾಭದಾಯಕವಾಗಿಸಲು ಅವರಿಗೆ ಬೇಕಾದ ತರಬೇತಿ, ಕ್ಷೇತ್ರ ಪಾಠಶಾಲೆ, ಬೆಳೆ ಪ್ರಾತ್ಯಕ್ಷಿಕೆ, ವಿಜ್ಞಾನಿಗಳ ಕ್ಷೇತ್ರ ಭೇಟಿ, ಕಿಸಾನ್ ಗೋಷ್ಠಿ, ಅಧ್ಯಯನ ಪ್ರವಾಸ ಹಾಗೂ ಮಾಹಿತಿ ಶಿಬಿರಗಳನ್ನೂ ಸಹ ಆತ್ಮ ಯೋಜನೆಯಡಿ ಕಾಲ ಕಾಲಕ್ಕೆ ಏರ್ಪಡಿಸುತ್ತಿದ್ದು, ಇವುಗಳಲ್ಲಿ ರೈತರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಕೃಷಿಯನ್ನು ಸುಧಾರಿಸಿ ಕೊಳ್ಳಬಹುದಾಗಿದೆ.

    ರೈತರು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸುಸ್ಥಿರ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

    ಇತ್ತೀಚೆಗೆ ಸರ್ಕಾರ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಕೃಷಿ ಮಾರುಕಟ್ಟೆ ಕ್ಷೇತ್ರಗಳಲ್ಲಿ ಹಲವಾರು ಮಹತ್ತರವಾದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ರೈತರು ಹೋಬಳಿಮಟ್ಟದಲ್ಲಿ ತಮ್ಮದೇ ಆದ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಿಕೊಂಡು, ತಮ್ಮ ಮೌಲ್ಯವರ್ಧನೆಗೊಂಡ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಬಹುದಾಗಿದ್ದು, ಇದರಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರೆಯುವುದರಲ್ಲಿ ಸಂಶಯವಿಲ್ಲ ಎಂದರು.

    ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರ ಗಣನೀಯವಾಗಿ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ, ಸೀತಾಲ, ಪೇರಲ ಮುಂತಾದ ಹಣ್ಣು ಹಂಪಲುಗಳನ್ನು ಮತ್ತು ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಇನ್ನಿತರ ಬೆಳೆ ಬೆಳೆಯಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿಯೇ ಆಹಾರ ಸಂಸ್ಕರಣೆ ಹಾಗೂ ಮೌಲವರ್ಧನೆಗೆ ವಿಪುಲ ಅವಕಾಶವಿದೆ ಎಂದರು.

    ಆತ್ಮಯೋಜನೆಯ ಉಪ ಯೋಜನಾ ನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ ಮಾತನಾಡಿದರು. ಕೃಷಿ ಇಲಾಖೆ ಉಪನಿರ್ದೇಶಕ ಪ್ರಕಾಶ ಚವಾಣ್, ರಾಘವೇಂದ್ರ ಎನ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಮದಾರ, ಪ್ರಗತಿಪರ ರೈತರಾದ ಸೀತಾ ದೊಡಮನಿ, ಅರವಿಂದ ಕೊಪ್ಪ, ರಶ್ಮಿ ಕೊಪ್ಪ, ಸಿದ್ದಪ್ಪ ಭೂಸಗೊಂಡ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts