More

    ಸಾಮಾಜಿಕ ನ್ಯಾಯದ ಹರಿಕಾರ ಅರಸು

    ವಿಜಯಪುರ: ಮೌನಕ್ರಾಂತಿ ಮೂಲಕ ಅನ್ಯಾಯದ ವಿರುದ್ಧ, ಶೋಷಣೆ ವಿರುದ್ಧ ಧ್ವನಿ ಎತ್ತಿದ ಅರಸು ಅವರು ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಸಾಕಾರಗೊಳಿಸಿದ್ದರು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಸ್.ಕೆ. ಮೆಲಕಾರ್ ಹೇಳಿದರು.

    ನಗರದ ಅಕ್ಕಮಹಾದೇವಿ ಮಹಿಳಾ ವಿವಿ ಸಮಾನ ಅವಕಾಶ ಘಟಕದ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ದಿ.ಡಿ.ದೇವರಾಜ ಅರಸು ಅವರ 106ನೇ ಜನ್ಮದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ಡಿ.ದೇವರಾಜ ಅರಸು ಮತ್ತು ಸಾಮಾಜಿಕ ನ್ಯಾಯ’ ಎಂಬ ವಿಷಯದ ಕುರಿತು ಆನ್‌ಲೈನ್ ಮೂಲಕ ವಿಶೇಷ ಉಪನ್ಯಾಸ ನೀಡಿದರು.

    ಪ್ರಜಾಪ್ರಭುತ್ವ ಸರ್ಕಾರವನ್ನು ರಚನೆ ಮಾಡುವಲ್ಲಿ ಪ್ರಮುಖಪಾತ್ರ ನಿರ್ವಹಿಸಿದ ಅರಸು ಅವರು, ಈ ವ್ಯವಸ್ಥೆ ಅಡಿಯಲ್ಲಿ ನಾವು ಯಾರನ್ನು ಆಯ್ಕೆ ಮಾಡಿ ನಮ್ಮ ಪ್ರತಿನಿಧಿಗಳನ್ನಾಗಿ ಮಾಡುತ್ತೇವೆಯೋ ಅವರ ಮೇಲೆ ನಮ್ಮ ದೇಶದ ಪ್ರಗತಿಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇರುತ್ತದೆ ಎಂಬುದನ್ನ ತೋರಿಸಿಕೊಟ್ಟರು. ಅವರ ವಿಚಾರಧಾರೆಗಳು, ಹೆಜ್ಜೆ ಗುರುತುಗಳು ಇಂದಿಗೂ ಚಿರಸ್ಮರಣೀಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಸಾಮಾಜಿಕ ನ್ಯಾಯದ ಪರವಾಗಿ ನಾವು ಇಂದು ಶಿಕ್ಷಣ, ಉದ್ಯೋಗ, ಅಧಿಕಾರ ಎಲ್ಲವನ್ನು ಪಡೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಅರಸು ಅವರ ಚಿಂತನೆಗಳನ್ನು, ವಿಚಾರಧಾರೆಗಳನ್ನು ಸಮಾಜಮುಖಿಯಾಗಿ ಬಿಂಬಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

    ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ. ಕೆ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ ಮತ್ತಿತರರಿದ್ದರು.
    ಸರಸ್ವತಿ ಸಬರದ ಪ್ರಾರ್ಥಿಸಿದರು. ಡಾ.ಅಶೋಕಕುಮಾರ ಸುರಪುರ ಸ್ವಾಗತಿಸಿದರು. ಡಾ.ತಹಮೀನಾ ಕೋಲಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts