More

    ಪ್ರತಿಭಟನೆಗೆ ಸೀಮಿತವಾದ ಬಂದ್ ಆಚರಣೆ

    ವಿಜಯಪುರ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ರಾಜ್ಯವ್ಯಾಪಿ ಬಂದ್ ಕರೆಗೆ ಗುಮ್ಮಟ ನಗರಿಯಲ್ಲಿ ಕನ್ನಡ ಪರ ಸಂಘಟನೆಗಳ ಹೊರತು ಪಡಿಸಿ ವಿವಿಧ ಸಂಘ ಸಂಸ್ಥೆಗಳು, ವ್ಯಾಪಾರಸ್ಥರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
    ಶನಿವಾರ ಬೆಳಗ್ಗೆ ಎಂದಿನಂತೆ ಬಸ್, ಆಟೋಗಳು ರಸ್ತೆಗಿಳಿದಿದ್ದವು. ಬೆರಳೆಣಿಕೆಯಷ್ಟು ಅಂಗಡಿ-ಮುಂಗಟ್ಟು ಹೊರತುಪಡಿಸಿದರೆ ಬಹುತೇಕ ವಹಿವಾಟು ಆರಂಭಗೊಂಡಿದ್ದವು. ನಗರದ ಲಾಲ್‌ಬಹಾದ್ದೂರ್ ಶಾಸ್ತ್ರೀ ಮಾರುಕಟ್ಟೆ, ರಾಮಮಂದಿರ ರಸ್ತೆ, ಆಶ್ರಮ ರಸ್ತೆಗಳಲ್ಲಿ ಕೆಲವು ಅಂಗಡಿ- ಮುಂಗಟ್ಟು ಬಂದ್ ಆಗಿದ್ದು ಬಿಟ್ಟರೆ ಎಲ್ಲವೂ ತೆರೆದುಕೊಂಡಿದ್ದವು. ಕೆಸಿ ಮಾರುಕಟ್ಟೆ, ಮನಗೂಳಿ ರಸ್ತೆ, ಸ್ಟೇಶನ್ ರಸ್ತೆ, ನವಬಾಗ ರಸ್ತೆ, ಮೀನಾಕ್ಷಿ ಚೌಕ್‌ನ ಸೀಮಿತ ವರ್ಗದ ಜನರು ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ಸೂಚಿಸಿದರು. ತರಕಾರಿ ವ್ಯಾಪಾರಸ್ಥರು ಬಂದ್‌ಗೆ ಬೆಂಬಲಿಸಿದ್ದರಿಂದ ತರಕಾರಿ ಮಾರಾಟ ಸ್ಥಗಿತಗೊಂಡಿತ್ತು.
    ಇನ್ನುಳಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಕರೆಯ ಮೇರೆಗೆ ಬಹುತೇಕರು ಅಂಗಡಿ ಮುಂಗಟ್ಟು ಮುಂಚಿತವಾಗಿಯೇ ತೆರೆದು ಬಂದ್ ವಿಫಲಗೊಳಿಸುವ ಕಾರ್ಯಕ್ಕೆ ಮುನ್ನುಡಿ ಬರೆದರು. ಕೆಲವು ಅಂಗಡಿಕಾರರು ಎಂದಿಗಿಂತ ಒಂದು ಗಂಟೆ ಹೆಚ್ಚಿನ ವಹಿವಾಟು ನಡೆಸಿ ಬಂದ್ ವಿಫಲಗೊಳಿಸುವುದಾಗಿ ವಾಗ್ದಾನ ಮಾಡಿದರು.

    ಪ್ರತಿಭಟನಾ ಮೆರವಣಿಗೆ

    ಮಧ್ಯಾಹ್ನ 12ರ ನಂತರ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಚುರುಕುಗೊಳಿಸಿದವು. ವಿವಿಧ ತಾಲೂಕು ಕೇಂದ್ರಗಳಿಂದ ಕ್ರೂಸರ್, ಮಿನಿ ಟೆಂಪೋಗಳಲ್ಲಿ ಬಂದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು. ಕನ್ನಡದ ಬಾವುಟಗಳನ್ನು ಹಿಡಿದು ರಾರಾಜಿಸಿದರು. ಕೆಲವು ಸಂಘಟನೆಗಳು ಪ್ರತ್ಯೇಕವಾಗಿ ಜಿಲ್ಲಾಡಳಿತ ಕಚೇರಿಗೆ ತೆರಳಿ ಮನವಿ ಸಲ್ಲಿಸಿದವು. ಕರವೇ ನಾರಾಯಣಗೌಡರ ಬಣದ ನೇತೃತ್ವ ವಿವಿಧ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಹೋರಾಟ ರೂಪಿಸಿದವು.

    ಪೊಲೀಸರೊಂದಿಗೆ ವಾಗ್ವಾದ

    ಟೈಯರ್‌ಗೆ ಬೆಂಕಿ ಹಚ್ಚುವ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಸಮಾವೇಶ ಮುಗಿಸಿ ಇನ್ನೇನು ಪ್ರತಿಭಟನಾ ಮೆರವಣಿಗೆ ನಡೆಸಬೇಕೆನ್ನುವ ವೇಳೆ ಕಾರ್ಯಕರ್ತರು ಟೈಯರ್ ಹಿಡಿದು ಮುಖ್ಯ ರಸ್ತೆಯತ್ತ ಧಾವಿಸಿದರು. ಕೂಡಲೇ ಪೊಲೀಸರು ಟೈಯರ್ ಕಸಿದುಕೊಂಡರು. ಇದರಿಂದ ಕರವೇ ಕಾರ್ಯಕರ್ತರು ಆಕ್ರೋಶಗೊಂಡರು. ಪೊಲೀಸರು ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
    ನಂತರ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಡಲು ಕರವೇ ಕಾರ್ಯಕರ್ತರು ತೀರ್ಮಾನಿಸಿದರು. ಅದಕ್ಕೂ ಪೊಲೀಸರು ತಡೆಯೊಡ್ಡಿದಾಗ ಮತ್ತಷ್ಟು ವಾಗ್ದಾದ ತಾರಕಕ್ಕೇರಿತು. ಮೆರವಣಿಗೆಗೆ ಪಟ್ಟು ಹಿಡಿದ ಹಿನ್ನೆಲೆ ಅನಿವಾರ್ಯವಾಗಿ ಬಸವೇಶ್ವರ ವೃತ್ತದವರೆಗೆ ಅವಕಾಶ ಕಲ್ಪಿಸಲಾಯಿತು. ಇದೇ ದಿಗ್ವಿಜಯ ಎಂಬಂತೆ ಕರವೇ ಕಾರ್ಯಕರ್ತರು ಘೋಷಣೆ ಮೊಳಗಿಸುತ್ತಾ ಬಸವೇಶ್ವರ ವೃತ್ತ ಸುತ್ತಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

    ಶಾಸಕ ಯತ್ನಾಳ ವಿರುದ್ಧ ಸೋಂಪುರೆ ವಾಗ್ದಾಳಿ

    ಕನ್ನಡ ಪರ ಸಂಘಟನೆಗಳಲ್ಲಿ ‘ಸಾಬರೇ’ ತುಂಬಿಕೊಂಡಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕರವೇ(ನಾರಾಯಣಗೌಡ ಬಣ) ಉಪಾಧ್ಯಕ್ಷ ಎಚ್.ಎಸ್. ಸೋಂಪುರೆ ತೀವ್ರ ವಾಗ್ದಾಳಿ ನಡೆಸಿದರು.
    ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮರಾಠರ ಓಲೈಕೆಗಾಗಿ ಶಾಸಕ ಯತ್ನಾಳ ನಾಡದ್ರೋಹ ಕೆಲಸ ಮಾಡುತ್ತಿದ್ದಾರೆ. ಕರವೇನಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ, ಜೈನ್ ಅನೇಕ ಸಮುದಾಯದವರಿದ್ದಾರೆ. ಸರ್ವಾಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ, ಹಿಂದು ಕ್ರೈಸ್ತ ಮುಸಲ್ಮಾನ್, ಪಾರಸಿಕ, ಜೈನರ ಉದ್ಯಾನ ಎಂಬ ಕುವೆಂಪು ಅವರ ಸಂದೇಶದಂತೆ ಕರವೇ ಹುಟ್ಟಿಕೊಂಡಿದೆ. ಯತ್ನಾಳರಂತೆ ಧರ್ಮ, ಜಾತಿ ಒಡೆದು ಆಳುವವರಿಗೆ ಇದೆಲ್ಲಾ ಗೊತ್ತಾಗಲ್ಲ ಎಂದರು.

    ಈ ದೇಶದ ಸ್ವಾತಂತ್ರೃ ಹೋರಾಟದಲ್ಲಿ ಬಲಿದಾನಗೈದ ಮುಸ್ಲಿಂರ ಸಂಖ್ಯೆಯನ್ನು ದೆಹಲಿಯ ಸ್ಮಾರಕದಲ್ಲಿ ಕೆತ್ತಲಾಗಿದ್ದು ಯತ್ನಾಳ ಒಮ್ಮೆ ಅವಲೋಕಿಸಬೇಕು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ರಮಜಾನ್ ಸಾಬ್ ಅಂಥವರ ಹೋರಾಟದ ಫಲವಾಗಿಯೇ ಬಳ್ಳಾರಿ ಕರ್ನಾಟಕದ ಪಾಲಾಯಿತು. ಟಿಪ್ಪು ಸುಲ್ತಾನ್‌ನಂಥ ಕನ್ನಡ ಹೋರಾಟಗಾರರಿಂದಲೇ ಕನ್ನಡ ನಾಡಿನ ಹಿರಿಮೆ ಹೆಚ್ಚಾಯಿತು. ಇದೆಲ್ಲಾ ಧರ್ಮ ಒಡೆದು ಆಳುವವರಿಗೆ ಕಾಣಲ್ಲ ಎಂದರು.

    ಶಿವಾಜಿ ಬಗ್ಗೆ ಮಾತನಾಡುವ ಶಾಸಕ ಯತ್ನಾಳಗೆ ಈ ನಾಡಿನ ವೀರ ರಾಣಿ ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣನವರ ಶೌರ್ಯ ಪರಾಕ್ರಮ ಕಾಣಿಸುವುದಿಲ್ಲ. ಆಫಘಾನಿಸ್ತಾನದವರೆಗೂ ಸಾಮ್ರಾಜ್ಯ ವಿಸ್ತರಿಸಿದ ಚಾಲುಕ್ಯರ ಇತಿಹಾಸ ಅರ್ಥವಾಗಲ್ಲ. ಬೆಳವಡಿ ಮಲ್ಲಮ್ಮನ ಹೊಡೆತಕ್ಕೆ ಹೆದರಿ ಓಡಿ ಹೋದ ಶಿವಾಜಿ ಮಾತ್ರ ಕಾಣಿಸುವುದು ದುರ್ದೈವ. ಯತ್ನಾಳರಂಥ ನಾಡದ್ರೋಹಿಗಳಿಂದಲೇ ಚನ್ನಮ್ಮ, ರಾಯಣ್ಣ ಸೆರೆಯಾಗಿದ್ದು. ಅವರನ್ನು ಸೆರೆ ಹಿಡಿದುಕೊಟ್ಟವರ ವಂಶಸ್ತರಿವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕರವೇ ಹೋರಾಟ ಕನ್ನಡ ನಾಡಿನ ಮರಾಠರ ವಿರುದ್ಧ ಅಲ್ಲ. ನಾಡಿನೊಳಗಿದ್ದುಕೊಂಡು ಎಂಇಎಸ್‌ನವರಿಗೆ ಬೆಂಬಲ ನೀಡುವವರ ವಿರುದ್ಧವಾಗಿದೆ. ಹೀಗಾಗಿ ಅಂಥವರ ಪರ ರೂಪಿಸಿದ ಪ್ರಾಧಿಕಾರ ರದ್ದಾಗಬೇಕು. ಸರ್ಕಾರ ರಾಜಕೀಯಕ್ಕಾಗಿ ಸಮುದಾಯಗಳನ್ನು ಓಲೈಸುವುದನ್ನು ಬಿಡಬೇಕು. ಕನ್ನಡಿಗರು ಕಟ್ಟಿದ ಜಿಎಸ್‌ಟಿ ಹಣ ಕೇಂದ್ರದಿಂದ ತರಬೇಕು. ನೆರೆ, ಮಳೆ ಹಾನಿಗೆ ತುತ್ತಾದವರಿಗೆ ಪರಿಹಾರ ಕೊಡಬೇಕು. ಅದನ್ನು ಬಿಟ್ಟು ಧರ್ಮ, ಜಾತಿಗಳನ್ನು ಒಡೆದು ಆಳುವ ಪ್ರವೃತ್ತಿ ಬಿಡಬೇಕೆಂದರು.
    ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ಮುಖಂಡರಾದ ಪ್ರಕಾಶ ಕುಂಬಾರ, ಫಯಾಜ್ ಕಲಾದಗಿ, ಬಾಳು ಮುಳಜಿ, ದಸ್ತಗೀರ ಸಾಲೋಟಗಿ ಮತ್ತಿತರರಿದ್ದರು.

    ಪ್ರಾಧಿಕಾರ ಹಿಂಪಡೆಯಲು ಆಗ್ರಹ

    ಮರಾಠಾ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯಲು ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಮಾತನಾಡಿ, ಗಡಿಭಾಗದಲ್ಲಿ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಉದ್ಧಟತನ ಮೆರೆಯುತ್ತಿದ್ದಾರೆ. ಗಲಭೆ ಮಾಡುತ್ತಿದ್ದಾರೆ. ಪ್ರಾಧಿಕಾರದಿಂದ ನಮ್ಮ ನಾಡಿನ ಕನ್ನಡ ಪ್ರೇಮ ಹೊಂದಿರುವ ಮರಾಠ ಸಮುದಾಯಗಳಿಗೆ ಸೌಲಭ್ಯಗಳು ಸಿಗುವುದಿಲ್ಲ. ಸರ್ಕಾರ ನಮ್ಮ ನಾಡಿನ ಮರಾಠ ಸಮುದಾಯದವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈಗಾಗಲೇ ಮರಾಠಾ ಸಮುದಾಯದವರು ನಮ್ಮ ಸಂಘಟನೆಯಲ್ಲಿಯೂ ಇದ್ದಾರೆ. ಅವರ ಸಮುದಾಯಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರೀತಿಯ ವಿರೋಧವಿಲ್ಲ, ಆದರೆ, ಸದರಿ ಪ್ರಾಧಿಕಾರ ಎಂಇಎಸ್ ಮತ್ತು ಶಿವಸೇನೆ ಪುಂಡರನ್ನು ಬೆಂಬಲಿಸದಂತಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಸದರಿ ಪ್ರಾಧಿಕಾರಿ ಹಿಂಪಡೆಯಲು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ, ಉಪಾಧ್ಯಕ್ಷ ರೇವಣಸಿದ್ದಗೌಡ ಗೋಡಕೆ ಮಾತನಾಡಿದರು. ಈರಣ್ಣ ಕಲ್ಲೂರ, ಅಶೋಕ ಭೂಸನೂರ, ಶಿವಾನಂದ ಮಲಕಗೊಂಡ, ಆನಂದ ಹಡಗಲಿ, ಸುನೀಲ ಮಾಗಿ, ದತ್ತು ತಳವಾರ, ಭೀಮಾಶಂಕರ ನಾಟಿಕಾರ, ಜಾವೀದ ಕೋಲಾರ, ಶ್ರೀಧರ ಬಿರಾದಾರ, ಚನ್ನು ಗುರಿಕಾರ, ಸಮೀರ ಮುಲ್ಲಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts