More

    ಗೋಹತ್ಯೆ ನಿಷೇಧ ಕಾನೂನಿನಡಿ ನಿರ್ದೇಶನ ಪಾಲಿಸಿ

    ವಿಜಯಪುರ: ಗೋಹತ್ಯೆ ನಿಷೇಧ ಕಾನೂನು ಅಡಿಯ ನಿರ್ದೇಶನಗಳನ್ನು ಯಾವುದೇ ಲೋಪವಿಲ್ಲದೆ ಪಾಲಿಸುವ ಜತೆಗೆ ಯಾವುದೇ ಸಮುದಾಯಕ್ಕೆ ನೋವು ಆಗದ ರೀತಿಯಲ್ಲಿ ಕಾರ್ಯನಿರ್ವಹಿಸಿ, ತಪ್ಪು ಸಂದೇಶ ರವಾನೆಯಾಗದ ರೀತಿಯಲ್ಲಿ ಕರ್ತವ್ಯ ನಿಭಾಯಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಪಶುವೈದ್ಯರಿಗೆ ತಿಳಿಸಿದರು.
    ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಪಶುವೈದ್ಯರಿಗಾಗಿ ಆಯೋಜಿಸಿದ್ದ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
    ಗೋ ಹತ್ಯೆ ನಿಷೇಧ ಕಾನೂನಿನ ಪರಿಣಾಮಕಾರಿ ಅನುಷ್ಠಾನದಲ್ಲಿ ತಮ್ಮ ಕಡೆಯಿಂದ ಯಾವುದೇ ರೀತಿಯ ತಪ್ಪು ಮತ್ತು ವೈಷಮ್ಯ ಹುಟ್ಟಿಸುವಂತಹ ಕಾರ್ಯ ಆಗಬಾರದು. ಸಂವಿಧಾನದ ಆಶಯಗಳ ಅನುಗುಣವಾಗಿ ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸುವ ಜತೆಗೆ ಒಂದೇ ಒಂದು ತಪ್ಪು ಆಗದಂತೆ ಮತ್ತು ಸುಳ್ಳು ವದಂತಿ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರು.

    ಕರ್ತವ್ಯ ಕಾಳಜಿ ಇರಲಿ

    ಜಿಲ್ಲೆಯಲ್ಲಿ ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತಾಗಬೇಕು. ರೈತರು ಪಾರಂಪರಿಕ ವ್ಯವಸಾಯದಲ್ಲಿ ಹೆಚ್ಚು ಆಸಕ್ತಿ ತೋರುವುದರಿಂದ ರಾಸಾಯನಿಕಗಳ ಬಳಕೆ ಮಾಡದ ಬಗ್ಗೆ ಹಾಗೂ ಸಾವಯವ ಕೃಷಿ ಕೈಗೊಳ್ಳುವ ಬಗ್ಗೆ ಮತ್ತು ಪಶುಗಳ ಆರೈಕೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಅವರಿಗೆ ಮನವರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಪಶುವೈದ್ಯರೆಲ್ಲರೂ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಗೌರವ ದೊರೆಯುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಸಾಧನೆ ಮಾಡುವಂತೆ ತಿಳಿಸಿದರು.

    ಮಾಂಸದಿಂದ ಆದಾಯ

    ಪಶು ವಿಜ್ಞಾನಿ ಗಿರೀಶ ಪಾಟೀಲ ಮಾತನಾಡಿ, ದೇಶದ ಜಿಡಿಪಿಯಲ್ಲಿ ಡೇರಿ ಉದ್ಯಮ ಹಾಗೂ ಮಾಂಸ ಉದ್ಯಮದಿಂದ 7.2 ಲಕ್ಷ ಕೋಟಿ ರೂ. ಆದಾಯ ಬರುತ್ತಿದ್ದು, ಈ ಪೈಕಿ ಮಾಂಸ ಉದ್ಯಮದಿಂದ 2.2 ಲಕ್ಷ ಕೋಟಿ ರೂ. ಆದಾಯ ಬರುತ್ತಿದೆ. ಇತ್ತೀಚೆಗೆ ಮಾಂಸ ಉತ್ಪನ್ನ ಸರಬರಾಜು ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿದ್ದು, ಮಾಂಸ ಉತ್ಪನ್ನ ಮಾರಾಟ ಮತ್ತು ನಿರ್ವಹಣೆಯಲ್ಲಿ ವಿಶೇಷ ಗಮನ ನೀಡುವ ಅಗತ್ಯವಿದೆ ಎಂದರು. ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಪ್ರಾಣೇಶ ಜಹಾಗೀರದಾರ ಮಾತನಾಡಿ, ಜಿಲ್ಲೆಯಲ್ಲಿ 14 ಲಕ್ಷ ಜಾನುವಾರುಗಳಿವೆ. ತಮ್ಮ ಇಲಾಖೆಯಲ್ಲಿ 576 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ 263 ಹುದ್ದೆಗಳಲ್ಲಿ ವಿವಿಧ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಶೇ.50 ರಷ್ಟು ಸಿಬ್ಬಂದಿ ಕೊರತೆಯಿದೆ. ಕಾರಣ ಈ ಇಲಾಖೆ ಸಿಬ್ಬಂದಿ ಮತ್ತು ವಾಹನಗಳಿಗೆ ಅನ್ಯ ಕರ್ತವ್ಯಕ್ಕೆ ನಿಯೋಜಿಸದಂತೆ ಹಾಗೂ ಜಾನುವಾರುಗಳಿಗೆ ಕಿವಿಯೋಲೆ ಹಾಕಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಶೇ.82 ರಷ್ಟು ಸಾಧನೆ ಮಾಡಲಾಗಿದೆ. ಜಾನುವಾರುಗಳ ಕೃತಕ ಗರ್ಭಧಾರಣೆ ಕಾರ್ಯಕ್ರಮದಲ್ಲಿ 6ನೇ ಕ್ರಮಾಂಕದಲ್ಲಿದ್ದೇವೆ ಎಂದರು.
    ನಂತರ ನಡೆದ ಪಶುವೈದ್ಯರ ಜಿಲ್ಲಾ ಸಾಮಾನ್ಯ ಸಭೆಯಲ್ಲಿ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಡಾ. ಆನಂದ ದೇವರನಾವದಗಿ ಅವರು, ಮಾನವ ವೈದ್ಯರಿಗೆ ನೀಡುವ ಭತ್ಯೆಯ ಸರಿಸಮಾನವಾಗಿ ಪಶುವೈದ್ಯರಿಗೂ ವಿಸ್ತರಿಸಲು ಉಪನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಧಾರವಾಡ ವಲಯದ ಜಂಟಿ ನಿರ್ದೇಶಕ ಡಾ. ಪಂಪಾಪತಿ, ಡಾ. ಚೌಧರಿ, ಡಾ. ಸತೀಶ, ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಕನ್ನೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts