More

    ಕಾರ್ಯವೈಖರಿಗೆ ಬೇಸರ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

    ವಿಜಯಪುರ: ಕರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಡಿಎಚ್‌ಒ ರಾಜಕುಮಾರ ಯರಗಲ್ಲ ಸಹಿತ ಹಲವರ ಕಾರ್ಯವೈಖರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎರಡ್ಮೂರು ಪ್ರಕರಣಗಳಲ್ಲಿ ಶೋಕಾಸ್ ನೋಟಿಸ್ ನೀಡಲು ತಿಳಿಸಲಾಗಿದೆ. ಮೊದಲು ನೋಟಿಸ್‌ಗೆ ಉತ್ತರ ನೀಡಲಿ. ಬಳಿಕ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾಳಸಂತೆಯಲ್ಲಿ ರೆಮಿಡಿಸಿವಿಯರ್
    ರೆಮ್‌ಡಿಸಿವಿರ್ ಔಷಧ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ವಿಷಯ ಈವರೆಗೂ ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ ಪ್ರಕರಣ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವೆ ಜೊಲ್ಲೆ, ಜಿಲ್ಲಾಸ್ಪತ್ರೆಯಲ್ಲಿ 84 ಹಾಗೂ ಬಿಎಲ್ಡಿಇ ಆಸ್ಪತ್ರೆಯಲ್ಲಿ 1000 ಸೇರಿ ವಿವಿಧೆಡೆ ರೆಮ್‌ಡಿಸಿವಿರ್ ಸಂಗ್ರಹವಿದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುವುದೆಂದರು.

    ಕೋವಿಡ್ ಕೇರ್ ಸೆಂಟರ್
    ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಜಿಲ್ಲೆಯಲ್ಲಿ 6 ಕೋವಿಡ್ ಕೇರ್ ಸೆಂಟರ್ ಇಂದಿನಿಂದಲೇ ಪ್ರಾರಂಭಿಸಲಾಗುತ್ತಿದೆ. ವಿಜಯಪುರ ನಗರದಲ್ಲಿ ಎರಡು ಮತ್ತು ತಾಲೂಕಿಗೆ ಒಂದರಂತೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

    ಪ್ರತಿ ವಾರ್ಡ್‌ಗೆ ಲಸಿಕೆ
    ಕರೊನಾ ಲಸಿಕೆ ಕಾರ್ಯಕ್ರಮ ಸಮರೋಪಾದಿಯಲ್ಲಿ ಸಾಗಿದೆ. ಮೊದಲ ಹಂತದಲ್ಲಿ 1.94 ಲಕ್ಷಕ್ಕೂ ಅಧಿಕ ಜನ ಲಸಿಕೆ ಪಡೆದಿದ್ದಾರೆ. ಎರಡನೇ ಹಂತದಲ್ಲಿ 15 ಸಾವಿರಕ್ಕೂ ಅಧಿಕ ಜನ ಲಸಿಕೆ ಪಡೆದಿದ್ದು, ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರತಿ ಹಳ್ಳಿ ಮತ್ತು ವಾರ್ಡ್‌ಗೆ ಕರೊನಾ ಲಸಿಕೆ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಬೆಡ್ ಮತ್ತು ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜೊಲ್ಲೆ ಹೇಳಿದರು.

    ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಸಮಿತಿ ರಚಿಸಲಾಗಿದೆ. ಅದಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಬೆಂಗಳೂರು, ಜಿಂದಾಲ್ ಮತ್ತು ಹುಬ್ಬಳ್ಳಿಯಿಂದ ಆಕ್ಸಿಜನ್ ತರಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಸಹ ಮಾತಕತೆ ನಡೆಸಲಾಗಿದೆ ಎಂದರು.

    ವಿಪ ಸದಸ್ಯ ಅರುಣ ಶಹಾಪುರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಪಂ ಸಿಇಒ ಗೋವಿಂದ ರೆಡ್ಡಿ, ಎಎಸ್‌ಪಿ ರಾಮ ಅರಸಿದ್ದಿ ಮತ್ತಿತರರಿದ್ದರು.

    ಜಿಲ್ಲೆಯಲ್ಲಿ ಠಿಕಾಣಿ ಹೂಡಲ್ಲ
    ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಸ್ತುವಾರಿ ಮಂತ್ರಿಗಳು ಜಿಲ್ಲೆಯಲ್ಲಿಯೇ ಠಿಕಾಣಿ ಹೂಡಬೇಕೆಂಬ ಮುಖ್ಯಮಂತ್ರಿ ಸೂಚನೆ ಗಮನಕ್ಕಿದೆ ಎಂದ ಸಚಿವೆ ಶಶಿಕಲಾ ಜೊಲ್ಲೆ, ಸದ್ಯಕ್ಕೆ ಠಿಕಾಣಿ ಹೂಡುತ್ತಿಲ್ಲ. ಯಾವಾಗ ಏನು ನಿರ್ಧಾರ ಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳುವುದಾಗಿ ಪ್ರತಿಕ್ರಿಯಿಸಿದರು.

    ಉಸ್ತುವಾರಿ ಮಂತ್ರಿಯಾಗಿ ಜಿಲ್ಲೆಯ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವೆ. ವೈಯಕ್ತಿಕ ಕಾರಣದಿಂದ ಸ್ವಲ್ಪ ದಿನ ಜಿಲ್ಲೆಗೆ ಭೇಟಿ ನೀಡುವುದು ವಿಳಂಬವಾಗಿದೆ. ಅದಾಗ್ಯೂ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಭೆ ಹೊರತಾಗಿ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡದಿದ್ದರೂ ಸಮಸ್ಯೆ ಬಗ್ಗೆ ಗಮನ ಹರಿಸಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ದೂರು ಬಾರದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ ಎಂದರಲ್ಲದೆ, ನನ್ನ ಜವಾಬ್ದಾರಿ ಅಚ್ಟುಕಟ್ಟಾಗಿ ನಿಭಾಯಿಸುತ್ತಿದ್ದು, ಆರೋಪಗಳಿಗೆ ಕಿವಿಗೊಡಲ್ಲ ಎಂದು ವಿಪ ಸದಸ್ಯ ಪ್ರಕಾಶ ರಾಠೋಡ ಅವರ ಹೇಳಿಕೆಗೆ ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts