More

    ಎಡ, ಪ್ರಜಾಸತ್ತಾತ್ಮಕ ಪಕ್ಷಗಳ ಪ್ರತಿಭಟನೆ

    ವಿಜಯಪುರ: ಕರೊನಾ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಏಳು ಎಡ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳು ಮಂಗಳವಾರ ಆನ್‌ಲೈನ್ ಮೂಲಕ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಿದವು.

    ಜೀವ ಉಳಿಸಿ- ಜೀವನ ರಕ್ಷಿಸಿ, ಮೂರನೇ ಅಲೆಗೆ ಸನ್ನದ್ಧರಾಗಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ಪಕ್ಷಗಳ ಪದಾಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಕಳೆದ ವರ್ಷ ಬೇರೆ ಬೇರೆ ದೇಶಗಳಲ್ಲಿ ಕರೊನಾ ಕಾಣಿಸಿಕೊಂಡಾಗಲೇ ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದರು. ಭಾರತದಲ್ಲಿ ಕರೊನಾ ನಿರ್ವಹಣೆಗೆ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಲು ತಿಳಿಸಿದ್ದರು. ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತು. ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷೃದಿಂದಾಗಿ ಅನೇಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಪ್ರತಿಭಟನಾಕಾರರು ಆಪಾದಿಸಿದರು.

    ಎರಡನೇ ಅಲೆಯಲ್ಲಿ ದುಡಿಯುವ ವರ್ಗದ ಜನ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಸರ್ಕಾರ ಚುನಾವಣೆಗಳಲ್ಲಿ ತೋರಿದ ಉತ್ಸಾಹವನ್ನು ಜನರನ್ನು ಬದುಕಿಸುವುದರಲ್ಲಿ ತೋರಿಸದಿರುವುದು ದುರಂತವೇ ಸರಿ. ಕರೊನಾ ಪೀಡಿತರು ಜೀವ ಉಳಿಸಿಕೊಳ್ಳಲು ವೈದ್ಯಕೀಯ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್, ಔಷಧ ಸಿಗದೆ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನತೆ ಉದ್ಯೋಗ ಕಳೆದುಕೊಂಡಿದ್ದಾರೆ. ಬೀದಿ ಬದಿ ವ್ಯಾಪಾರಸ್ಥರು ಹಾಗೂ ದಿನಗೂಲಿ ನೌಕರರು, ಕಾರ್ಮಿಕರು, ಅತಿಥಿ ಉಪನ್ಯಾಸಕರು, ಖಾಸಗಿ ಶಾಲೆ ಶಿಕ್ಷಕರು ಜೀವನೋಪಾಯಕ್ಕೆ ಹಣ ಇಲ್ಲದೆ, ಹೊಟ್ಟೆ ತುಂಬ ಊಟವಿಲ್ಲದೆ ಹಸಿವೆಯಿಂದ ನರಳುವಂತಾಗಿದೆ. ಕರ್ತವ್ಯನಿರತ ಸಿಬ್ಬಂದಿ ಸೂಕ್ತ ರಕ್ಷಣೆಯಿಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಜೀವರಕ್ಷಕ ಲಸಿಕೆ ಸಿಗದೆ ಜನತೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪರದಾಡುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಮುಖಂಡ ಪ್ರಕಾಶ ಹಿಟ್ನಳ್ಳಿ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ, ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್‌ರೆಡ್ಡಿ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ರಜಪೂತ, ಎಸ್‌ಯುಸಿಐ(ಸಿ) ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಎಚ್.ಟಿ., ಸಿದ್ದಲಿಂಗ ಬಾಗೇವಾಡಿ, ಎಚ್.ಟಿ. ಭರತ್‌ಕುಮಾರ, ಬಾಳು ಜೇವೂರ, ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಈರಣ್ಣ ಬೆಳ್ಳುಂಡಗಿ, ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹುಲಿಗೆಪ್ಪ ಚಲವಾದಿ, ರೈತ ಸಂಘದ ಸಿದ್ದರಾಮ ಬಂಗಾರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts