More

    ಅಧಿಕಾರ ಅವಧಿಯಲ್ಲಿ 59 ತಿಂಗಳು ಕೆಲಸ ಮಾಡೋಣ

    ವಿಜಯಪುರ: ನಮ್ಮ ಅಧಿಕಾರದ 60 ತಿಂಗಳ ಅವಧಿಯಲ್ಲಿ 59 ತಿಂಗಳು ಅಭಿವೃದ್ಧಿ ಕೆಲಸ ಮಾಡೋಣ. ಕೇವಲ ಒಂದು ತಿಂಗಳು ರಾಜಕಾರಣ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದರು.

    ಇಲ್ಲಿನ ಜಿಲ್ಲಾ ಪಂಚಾಯಿತಿ ಸಮೀಪ ಜಿಲ್ಲಾಡಳಿತ ಸಂಕೀರ್ಣಕ್ಕೆ ಅಡಿಗಲ್ಲು, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಪೂರ್ಣಗೊಂಡ ಯೋಜನೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಐದು ವರ್ಷ ಅಂದರೆ 60 ತಿಂಗಳ ಅಧಿಕಾರವಧಿಯಲ್ಲಿ 59 ತಿಂಗಳು ಕೆಲಸ ಮಾಡೋಣ. ಇನ್ನುಳಿದ ಅವಧಿ ರಾಜಕೀಯಕ್ಕೆ ಮೀಸಲಿಡೋಣ. ದಲಿತರು, ರೈತರ, ಯುವಕರು ಹಾಗೂ ಮಹಿಳೆಯರ ಬದುಕು ಹಸನಾಗಬೇಕು. ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ. ಇಲ್ಲವಾದರೆ ಜನತೆಗೆ ದ್ರೋಹ ಬಗೆದಂತಾಗುತ್ತದೆ ಎಂದರು.

    ನಮ್ಮ ಮುಂದೆ ಎರಡು ಪ್ರಶ್ನೆಗಳಿವೆ. ಒಂದು ಜನರ ರಾಜಕಾರಣ ಮಾಡೋದು…. ಇನ್ನೊಂದು ಅಧಿಕಾರಕ್ಕಾಗಿ ರಾಜಕಾರಣ ಮಾಡೋದು. ಇದರಲ್ಲಿ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಯೋಚಿಸಬೇಕು. ಜನರ ಜೊತೆ ನಾವು ಪ್ರಾಮಾಣಿಕವಾಗಿ ಇರಬೇಕಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಒಳಿತಿಗಾಗಿ ಶ್ರಮಿಸಿದರೆ ಜನ ಬೆಂಬಲ ಕೊಡುತ್ತಾರೆ ಎಂದರು.

    ಉ-ಕ ಅಭಿವೃದ್ಧಿಗೆ ಬದ್ಧ
    ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೋರ್ಡ್‌ಗಳಾಗಿವೆ, ಸಾಕಷ್ಟು ಚರ್ಚೆಗಳಾಗಿವೆ, ಅನುದಾನ ಕೂಡ ಬಂದಿದೆ. ಆದರೆ, ಗ್ರಾಮೀಣ ಪ್ರದೇಶಗಳಿಗೆ ಹೋಗಿ ನೋಡಿದಾಗ ಸಮಸ್ಯೆಗಳು ತಾಂಡವಾಡುತ್ತಿವೆ. ಶಿಕ್ಷಣ, ಉದ್ಯೋಗ ಮೂಲ ಸೌಲಭ್ಯ ಇಲ್ಲದೆ ಇರುವುದನ್ನು ನೋಡಿದಾಗ ಮನಸ್ಸಿಗೆ ಘಾಸಿಯಾಗುತ್ತದೆ. ಇದು ನನ್ನಿಂದಲೇ ಬದಲಾಗಬೇಕೆಂದು ತೀರ್ಮಾನ ಮಾಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಯುಕೆಪಿ ಹಂತ-3
    ಉತ್ತರ ಕರ್ನಾಟಕ ಭಾಗದ ಭೂಮಿ ತಾಯಿಗೆ ಹಸಿರು ಸೀರೆ ಉಡಿಸಲು ಜನ ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ಆ ತ್ಯಾಗ ಬಲಿದಾನಕ್ಕೆ ಬೆಲೆ ಸಿಗಬೇಕು. ಬರದ ಹಣೆ ಪಟ್ಟಿ ಅಳಿಸಬೇಕು. ಅದಕ್ಕೆ ನೀರಾವರಿ ಯೋಜನೆ ಸಾಕಾರಗೊಳಿಸುವ ಸವಾಲು ನಮ್ಮ ಮುಂದಿದೆ. ಕರ್ನಾಟಕದ ನೆಲ, ಜಲ, ಅಭಿವೃದ್ಧಿಗೆ ಒಕ್ಕಟ್ಟಾಗಿ ಕೆಲಸ ಮಾಡಬೇಕು ಎಂದು ಸಿಎಂ ಹೇಳಿದರು.

    ಯುಕೆಪಿ ಹಂತ-3 ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ನ್ಯಾಯಾಧಿಕರಣದ ಆದೇಶ ಬರುವ ಮುಂಚೆ ನಾವು ಆಡಳಿತಾತ್ಮಕ ಅನುಮೋದನೆ ನೀಡಿ, ಟೆಂಡರ್ ಕರೆದು ಕೆಲಸ ಆರಂಭಿಸಿದೆವು. ಎಂ.ಬಿ. ಪಾಟೀಲರ ಅವಧಿಯಲ್ಲೂ ನ್ಯಾಯಾಧಿಕರಣ ಆದೇಶಕ್ಕೆ ಕಾಯದೆ ಈ ಭಾಗದಲ್ಲಿ ನೀರಾವರಿ ಯೋಜನೆ ಕೈಗೊಳ್ಳಲಾಗಿದೆ. ಮುಂದಿನ ಅವಧಿಯಲ್ಲಿ ಯೊಜನೆ ಪೂರ್ಣಗೊಳಿಸಲು, ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು, ಪುನರ್ವಸತಿ- ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ಕೆ 2500 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದರು.

    ಇನ್ನು ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 120 ಕೋಟಿ ರೂ. ಹಾಗೂ ವಿಜಯಪುರ 24*7 ಕುಡಿಯುವ ನೀರಿನ ಯೋಜನೆಗೆ ಮುಂದಿನ ಆರು ತಿಂಗಳಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದರು.

    ಶೀಘ್ರದಲ್ಲೇ ಬಡವರಿಗೆ ಮನೆ
    ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಬಡವರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಶ್ರಮಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಬಡವರಿಗೆ ಹಕ್ಕು ಪತ್ರ ಸಿಕ್ಕಿರಲಿಲ್ಲ. ಇದೀಗ ಮೋದಿ ಸರ್ಕಾರ ಬಡವರಿಗೆ ಆಶ್ರಯ ಕಲ್ಪಿಸುವುದರ ಜೊತೆಗೆ ಹಕ್ಕು ಪತ್ರ ನೀಡುತ್ತಿದೆ. ರಾಜೀವ ಗಾಂಧಿ ಅಭಿವೃದ್ಧಿ ನಿಗಮದಿಂದ ಐದು ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಶೀಘ್ರದಲ್ಲೇ ಬಡವರಿಗೆ ಮನೆ ಸಿಗಲಿವೆ ಎಂದರು.

    ಕೃಷ್ಣಾ ಕೊಳ್ಳದ ನೀರಾವರಿಗೆ ಆದ್ಯತೆ
    ಸಚಿವ ಗೋವಿಂದ ಕಾರಜೋಳ ಮಾತನಾಡಿ, ಉತ್ತರ ಕರ್ನಾಟಕದವರೇ ಸಿಎಂ ಆಗಿರುವುದು ನಮ್ಮ ಸೌಭಾಗ್ಯ. ಇದರ ಉಪಯೋಗ ನಾವು ಪಡೆಯಬೇಕು. ಬಸವರಾಜ ಬೊಮ್ಮಾಯಿ ಕೇವಲ ಆಡಳಿತಗಾರ ಮಾತ್ರವಲ್ಲ ನೀರಾವರಿ ತಜ್ಞರು ಕೂಡ. ನೀರಾವರಿ ಮಂತ್ರಿಯಾಗಿ ಅವರು ಈ ಭಾಗಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
    ಜುಲೈ ಕೊನೆಯಲ್ಲಿ ಸಿಎಂ ಆದ ಮೇಲೆ ಆಗಸ್ಟ್‌ನಲ್ಲಿ ಸಭೆ ಮಾಡಿ ಯುಕೆಪಿಗಾಗಿ 2500 ಕೋಟಿ ರೂ. ಅನುದಾನ ನೀಡಿದರು. ಆ ಹಣ ಸಂಪೂರ್ಣವಾಗಿ ಪುನರ್ವಸತಿ, ಪುನರ್ ನಿರ್ಮಾಣಕ್ಕೆ ಬಳಸಲು ಹೇಳಿ ಹೆಚ್ಚಿನ ಹಣ ಕೊಡುವ ಭರವಸೆ ಕೊಟ್ಟರು. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ದಾವೆ ಬಗೆಹರಿಸಿ 15 ಲಕ್ಷ ಎಕರೆ ನೀರಾವರಿ ಮಾಡುವ ಹಂಬಲದಲ್ಲಿದ್ದೇವೆ ಎಂದರು.

    ಕಂದಾಯ ಸಚಿವ ಆರ್. ಅಶೋಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಎಂ.ಬಿ. ಪಾಟೀಲ, ವಿಪ ಸದಸ್ಯರಾದ ಸುನೀಲಗೌಡ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮತ್ತಿತರರಿದ್ದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಹೆಚ್ಚುತ್ತಿರುವ ಒಮಿಕ್ರಾನ್-ಅಂತಿಮ ಮಾರ್ಗಸೂಚಿ
    ಹೆಚ್ಚುತ್ತಿರುವ ಕರೊನಾ ಹಾಗೂ ಒಮಿಕ್ರಾನ್ ಹಾವಳಿ ಹಿನ್ನೆಲೆ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ನಾಳೆ (ಡಿ.26)ಯೇ ಅಂತಿಮ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
    ಒಮಿಕ್ರಾನ್ ಹಾವಳಿ ಹೆಚ್ಚುತ್ತಿದೆ. ಮಹಾರಾಷ್ಟ್ರ, ಕೇರಳದಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುವುದು. ನೈಟ್ ಕರ್ಫ್ಯೂಗೆ ಸಂಬಂಧಿಸಿದಂತೆ ಡಿ. 26ರಂದು ಬೆಂಗಳೂರಿನಲ್ಲಿ ಸಭೆ ಕರೆದು ಅಂತಿಮ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

    ಹನುಮ ದೇವರಿಗೆ ಬೆಳ್ಳಿ ಗದೆ ಸಮರ್ಪಣೆ
    ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಸಿಎಂ ಬಸವರಾಜ ಬೊಮ್ಮಾಯಿಗೆ ಬೆಳ್ಳಿ ಗದೆ ಕಾಣಿಕೆಯಾಗಿ ನೀಡಿದರು. ಆದರೆ, ಬೊಮ್ಮಾಯಿ ಅದನ್ನು ಆಂಜನೇಯನಿಗೆ ಸಮರ್ಪಣೆ ಮಾಡಿದರು. ಸಾಮಾನ್ಯವಾಗಿ ಬೆಳ್ಳಿ ಖಡ್ಗ ನೀಡಿದರೆ ಅದನ್ನು ದೇವಿಗೆ ಮತ್ತು ಗದೆ ನೀಡಿದರೆ ಅದನ್ನು ಆಂಜನೇಯನಿಗೆ ಸಮರ್ಪಿಸುತ್ತೇನೆ. ಹೀಗಾಗಿ ವಿಜುಗೌಡ ಅವರು ನೀಡಿದ ಬೆಳ್ಳಿ ಗದೆಯನ್ನು ಆಂಜನೇಯ ದೇವಸ್ಥಾನಕ್ಕೆ ಸಮರ್ಪಿಸುವುದಾಗಿ ಬೊಮ್ಮಾಯಿ ತಿಳಿಸಿದರು. ಅದೇ ರೀತಿ ವಿಜುಗೌಡ ಪಾಟೀಲ ಅದನ್ನು ಮದುಲಾ ಮಾರುತಿ ದೇವಸ್ಥಾನಕ್ಕೆ ಸಮರ್ಪಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಬೊಮ್ಮಾಯಿ ಅವರಿಗೆ ಸಿದ್ಧೇಶ್ವರ ಮೂರ್ತಿ ಕಾಣಿಕೆಯಾಗಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts