More

    ಅಖಾಡಕ್ಕಿಳಿದ ಡಿಸಿ ಪಿ.ಸುನೀಲ್‌ಕುಮಾರ್

    ವಿಜಯಪುರ: ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆದಿದ್ದು ಈವರೆಗೆ ನಡೆದ ದಾಳಿಯಲ್ಲಿ ಒಟ್ಟು 3344 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಳ್ಳಲಾಗಿದೆ.

    ಭೀಮಾತೀರದ ಇಂಡಿ, ಚಚಣ ಹಾಗೂ ಸಿಂದಗಿ ಭಾಗದಲ್ಲಿ ಆಗಾಗ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು 8 ಪ್ರಕರಣಗಳನ್ನು ದಾಖಲಿಸಲಾಗಿದೆ. ಫೆಬ್ರವರಿಯಲ್ಲಿ 3 ಹಾಗೂ ಮೇ ನಲ್ಲಿ 5 ಪ್ರಕರಣಗಳು ದಾಖಲಾಗಿದ್ದು, 5 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲೇ ಹೆಚ್ಚಿನ ಪ್ರಕರಣಗಳು ಕಂಡು ಬಂದಿದ್ದು, ದಂಧೆಕೋರರು ಈ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಿರುವುದು ಕಂಡು ಬಂದಿದೆ.

    ಡಿಸಿ ಅನಿರೀಕ್ಷಿತ ಭೇಟಿ
    ಮಂಗಳವಾರ ಸಿಂದಗಿ ತಾಲೂಕಿನ ಮೋರಟಗಿ ಚೆಕ್ ಪೋಸ್ಟ್‌ಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹಾಗೂ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಅನಿರೀಕ್ಷಿತ ಭೇಟಿ ನೀಡಿದರು. ಚೆಕ್ ಪೋಸ್ಟ್‌ದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಅಕ್ರಮವಾಗಿ ಮರಳು ತುಂಬಿದ ವಾಹನಗಳು ಚೆಕ್ ಪೋಸ್ಟ್ ಮೂಲಕ ಹಾದು ಹೋಗದಂತೆ ತಡೆಯಲು ಕ್ರಮ ವಹಿಸಬೇಕೆಂದರು. ನಂತರ ಬಗಲೂರ ಗ್ರಾಮದ ಮೂಲಕ ಘತ್ತರಗಿ ಸೇತುವೆ ವೀಕ್ಷಿಸಿದರು. ದೇವಣಗಾಂವ ಗ್ರಾಮದ ಭೀಮಾ ನದಿ ದಂಡೆಯಲ್ಲಿ ಈಗಾಗಲೇ ವಶಪಡಿಸಿಕೊಂಡ ಅಕ್ರಮ ಮರಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿಗಳು ವಶಪಡಿಸಿಕೊಂಡ ಮರಳಿನ ಮೌಲ್ಯ ಐದು ಲಕ್ಷ ರೂ.ಗಳಷ್ಟಾಗಿದೆ. ಇದಲ್ಲದೆ, ಇಂಡಿ ತಾಲೂಕಿನಲ್ಲಿ ಈವರೆಗೆ ಹದಿನೇಳು ಲಕ್ಷ ರೂ. ಅಕ್ರಮ ಮರಳು ವಶಪಡಿಸಿಕೊಂಡಿದ್ದಾಗಿ ವಿವರಿಸಿದರು.

    ತಹಸೀಲ್ದಾರ್ ಸಂಜೀವಕುಮಾರ ದಾಸರ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಚಿದಂಬರ, ಸಿಂದಗಿ ಪಿಎಸ್‌ಐ ಸಂಗಮೇಶ ಹೊಸಮನಿ ಹಾಗೂ ಆಲಮೇಲ ಪಿಎಸ್‌ಐ ಸುರೇಶ ಗಡ್ಡಿ ಮತ್ತಿತರರಿದ್ದರು.

    ಕೃಷ್ಣಾತೀರದಲ್ಲೂ ಅಕ್ರಮ ದಂಧೆ
    ಇನ್ನು ಕೃಷ್ಣಾ ತೀರದಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಚಿಕ್ಕಗಲಗಲಿಯಿಂದ ಬಬಲೇಶ್ವರ ಮಾರ್ಗವಾಗಿ ಬರುತ್ತಿದ್ದ ಮೂರು ಟಿಪ್ಪರ್‌ಗಳನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ.

    ಮಮದಾಪುರ ಹೋಬಳಿ ವ್ಯಾಪ್ತಿಯ ಚಿಕ್ಕಗಲಗಲಿ ಗ್ರಾಮದಿಂದ ಮರಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್‌ಗಳನ್ನು ತಡೆದು ಪರಿಶೀಲಿಸಲಾಗಿ, ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಕಂಡು ಬಂದಿದೆ. ಒಟ್ಟು 5 ಬ್ರಾಸ್ ಮರಳು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts