More

    ಮಳೆ ನಿಂತು ಹೋದ ಮೇಲೆ….!

    ಪರಶುರಾಮ ಭಾಸಗಿ
    ವಿಜಯಪುರ: ‘ಗಬ್ಬೆದ್ದು ನಾರುತ್ತಿರುವ ಗ್ರಾಮಗಳು, ಅಳಿದುಳಿದ ಅವಶೇಷಗಳು, ಬೇರು ಸಮೇತ ಕಿತ್ತುಕೊಂಡು ಹೋಗಿರುವ ಬೆಳೆಗಳು, ದಾಂಗುಡಿ ಇಡುತ್ತಿರುವ ಹುಳು-ಹುಪ್ಪಟೆಗಳು, ಭಯ ಹುಟ್ಟಿಸುತ್ತಿರುವ ವಿಷ ಜಂತುಗಳು, ಮೇವಿಗಾಗಿ ಘೀಳಿಡುತ್ತಿರುವ ಜಾನುವಾರು, ಪರಿಹಾರಕ್ಕಾಗಿ ಅಂಗಲಾಚುತ್ತಿರುವ ಸಂತ್ರಸ್ತರು…..’
    ಇದಿಷ್ಟು ರಣ ಭೀಕರ ಮಳೆ ಮತ್ತು ಪ್ರವಾಹಕ್ಕೆ ನಲುಗಿದ ಭೀಮಾ ಮತ್ತು ಡೋಣಿ ನದಿ ತೀರದ ಗ್ರಾಮಗಳಲ್ಲಿ ಕಂಡು ಬಂದ ಸದ್ಯದ ಚಿತ್ರಣ.

    ಮಹಾಪೂರಕ್ಕೆ ತುತ್ತಾದ ಗ್ರಾಮಗಳಲ್ಲಿ ಇದೀಗ ನೆರೆ ಸಂಪೂರ್ಣ ತಗ್ಗಿದ್ದು ಹಂತ ಹಂತವಾಗಿ ಜನಜೀವನ ಚೇತರಿಸಿಕೊಳ್ಳುತ್ತಿದೆ. ಪ್ರವಾಹಕ್ಕೆ ಕೊಚ್ಚಿ ಹೋದ ಬದುಕು ಪುನಃ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಂತ್ರಸ್ತರು ಕಾರ್ಯೋನ್ಮುಖರಾಗಿದ್ದಾರೆ. ಆದರೆ, ಆರ್ಥಿಕವಾಗಿ ಸಂಪೂರ್ಣ ಕುಸಿದಿರುವ ಬಡ ಕುಟುಂಬಗಳು ಮಾತ್ರ ಇನ್ನೂ ನೆರೆ ನೀರಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಲೇ ಇದ್ದಾರೆ.

    ಅವಶೇಷಗಳಡಿ ಸಿಲುಕಿರುವ ಸಾಮಾನು- ಸರಂಜಾಮು, ಕೃಷಿ ಸಲಕರಣೆಗಳು, ಜಮೀನಿನ ದಾಖಲೆಗಳು, ಮಕ್ಕಳ ಶೈಕ್ಷಣಿಕ ಸಾಮಗ್ರಿಗಳನ್ನು ಸಂತ್ರಸ್ತರು ಹೆಕ್ಕಿ ತೆಗೆಯುತ್ತಿದ್ದಾರೆ. ಇನ್ನೊಂದೆಡೆ ನೆರೆಗೆ ಕೊಚ್ಚಿಕೊಂಡು ಹೋಗಿರುವ ವಿದ್ಯುತ್ ಸಲಕರಣೆಗಳು, ಕೃಷಿ ಯಂತ್ರೋಪಕರಣಗಳು, ಮೀನಿನ ಬಲೆ ಮತ್ತು ಬುಟ್ಟಿಗಳನ್ನು ಹುಡುಕುವ ಕಾಯಕದಲ್ಲಿ ನದಿ ತೀರದ ಜನ ತಲ್ಲೀನರಾಗಿದ್ದಾರೆ. ಇನ್ನೊಂದೆಡೆ ಪರಿಹಾರಕ್ಕಾಗಿ ಸ್ಥಳೀಯ ಸಂಸ್ಥೆಗಳತ್ತ ಹೆಜ್ಜೆ ಹಾಕುವುದು ದಿನಚರಿಯಾಗಿದೆ.

    ಕಾಳಜಿ ಕೇಂದ್ರಿಂದ ನಿರ್ಗಮನ
    ಇಂಡಿ, ಸಿಂದಗಿ ಹಾಗೂ ಚಡಚಣ ಭಾಗದಲ್ಲಿ ತೆರೆಯಲಾಗಿದ್ದ 42 ಕಾಳಜಿ ಕೇಂದ್ರಗಳಿಂದ ಹಂತ ಹಂತವಾಗಿ ಸಂತ್ರಸ್ತರು ನಿರ್ಗಮಿಸುತ್ತಿದ್ದಾರೆ. ಬಿದ್ದ ಮನೆಗಳಲ್ಲಿರುವ ಸಾಮಾನು- ಸರಂಜಾಮು ಹೊರ ತೆಗೆಯುತ್ತಿದ್ದಾರೆ. ಈವರೆಗೆ 1140 ಕುಟುಂಬಗಳಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಆ ಪೈಕಿ ಇಂಡಿ ತಾಲೂಕಿನಲ್ಲಿ 21 ಕಾಳಜಿ ಕೇಂದ್ರಗಳಲ್ಲಿ 378 ಕುಟುಂಬಗಳ 1758 ಸದಸ್ಯರು, ಚಡಚಣ ತಾಲೂಕಿನ 7 ಕಾಳಜಿ ಕೇಂದ್ರಗಳಲ್ಲಿ 175 ಕುಟುಂಬಗಳ 1042 ಸದಸ್ಯರು ಹಾಗೂ ಸಿಂದಗಿ ತಾಲೂಕಿನ 14 ಕಾಳಜಿ ಕೇಂದ್ರಗಳಲ್ಲಿ 587 ಕುಟುಂಬಗಳ 2517 ಸದಸ್ಯರಿದ್ದರು. ಇದೀಗ ಆರು ಕಾಳಜಿ ಕೇಂದ್ರಗಳಲ್ಲಿ ಮಾತ್ರ ಜನ ಆಶ್ರಯ ಪಡೆದಿದ್ದಾರೆ.

    ಭರದಿಂದ ಸಾಗಿದೆ ಸಮೀಕ್ಷೆ
    ಮನೆ ಮತ್ತು ಬೆಳೆ ಹಾನಿಗೆ ಸಂಬಂಧಿಸಿದಂತೆ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ. ಸಾಲದೆಂಬಂತೆ ಡ್ರೋನ್ ಸಹಾಯ ಪಡೆಯಲಾಗಿದೆ. ಪಿಡಬ್ಲೂಡಿ ಸಹಾಯಕ ಅಭಿಯಂತರ, ಪಿಆರ್‌ಇಡಿ ವಿಭಾಗದ ಕಿರಿಯ ಅಭಿಯಂತರ, ಗ್ರಾಮ ಲೆಕ್ಕಿಗ ಹಾಗೂ ಪಿಡಿಒ ಒಳಗೊಂಡ ತಂಡ ಸಮೀಕ್ಷೆ ಕೈಗೊಂಡಿದೆ.

    ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಕೆಲವೆಡೆ ವಿಳಂಬ ಧೋರಣೆ ಕಂಡು ಬಂದಿದೆ. ಈವರೆಗೆ ಒಟ್ಟು 14184 (ಅ.23ಕ್ಕೆ ತಂತ್ರಾಂಶದಲ್ಲಿದ್ದಂತೆ)ಜನರ ನೋಂದಣಿಯಾಗಿದೆ. ಇಂಡಿ- 6760, ದೇ. ಹಿಪ್ಪರಗಿ- 2454, ತಾಳಿಕೋಟಿ- 4059, ನಿಡಗುಂದಿ-10, ಬಬಲೇಶ್ವರ-367, ಮುದ್ದೇಬಿಹಾಳ-389, ಕೋಲ್ಹಾರ-9, ವಿಜಯಪುರ-0 ಫಲಾನುಭವಿಗಳ ನೋಂದಣಿಯಾಗಿದೆ. ಸಮೀಕ್ಷೆ ಕಾರ್ಯ ಭರದಿಂದ ಸಾಗಿದ್ದರೂ ಪರಿಹಾರ ಕಾರ್ಯ ಮಾತ್ರ ಮಂದಗತಿಯಲ್ಲಿರುವುದು ಕಂಡು ಬಂದಿದೆ.

    ಒಟ್ಟು ಹಾನಿ ವಿವರ
    ಜ. 1 ರಿಂದ ಅ. 19ರವರೆಗೆ ಒಟ್ಟು 12 ಜನ ಸತ್ತಿದ್ದಾರೆ. ದೊಡ್ಡ ಜಾನುವಾರು-33 ಹಾಗೂ ಸಣ್ಣ ಜಾನುವಾರು-21 ಅಸುನೀಗಿವೆ. ಒಟ್ಟು 4440 ಮನೆಗಳಿಗೆ ಹಾನಿಯಾಗಿದ್ದು ಅದರಲ್ಲಿ 21 ಮನೆಗಳು ಪೂರ್ಣ ಹಾಗೂ 4419 ಮನೆಗಳು ಭಾಗಶಃ ಬಿದ್ದಿವೆ. ಕೃಷಿ ಬೆಳೆ 221227.00 ಹೆಕ್ಟೇರ್ ಹಾಳಾಗಿದ್ದು ಹಾನಿ ಮೌಲ್ಯ 87649.39 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 6989 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು ಅದರ ಮೌಲ್ಯ 10567.46 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಒಟ್ಟು 228216.00 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಅದರ ಮೌಲ್ಯ 98216.85 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. 12153.07 ಲಕ್ಷ ರೂ. ಸಹಾಯ ಧನದ ಅವಶ್ಯಕತೆ ಕಂಡು ಬಂದಿದೆ.

    ಮೂಲ ಸೌಕರ್ಯಗಳಿಗೆ ಧಕ್ಕೆ
    ಮಳೆ ಮತ್ತು ನೆರೆಯಿಂದ ಮೂಲ ಸೌಕರ್ಯಗಳಿಗೂ ಹಾನಿಯಾಗಿದ್ದು ರಸ್ತೆಗಳು ಹದಗೆಟ್ಟಿವೆ. ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾಗಿದೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಕುಡಿಯುವ ನೀರಿನ ಯಂತ್ರೋಪಕರಣಗಳು ಕೆಟ್ಟಿವೆ. ಈವರೆಗಿನ ಮಾಹಿತಿ ಪ್ರಕಾರ ಲೋಕೋಪಯೋಗಿ ಇಲಾಖೆ- 14571, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ-8748.18, ನಗರ ಮತ್ತು ಸ್ಥಳೀಯ ಸಂಸ್ಥೆ- 9943.90, ಹೆಸ್ಕಾಂ- 2.52, ಬೃಹತ್ ನೀರಾವರಿ- 1034, ಸಣ್ಣ ನೀರಾವರಿ- 3582 ಸೇರಿ ಒಟ್ಟು 37881.60 ಲಕ್ಷ ರೂ. ಮೌಲ್ಯದಷ್ಟು ಹಾನಿ ಸಂಭವಿಸಿದೆ. ಇದಕ್ಕೆ ಒಟ್ಟು 6366.82 ಲಕ್ಷ ರೂ.ಗಳ ಸಹಾಯಧನ ಅವಶ್ಯಕತೆ ಇದೆ.

    ನೆರೆ ಇಳಿದ ಬಳಿಕ ಅದರ ಬರೆ ಕಾಣಿಸುತ್ತಿದೆ. ಎರಡೇ ದಿನಕ್ಕೆ ಬದುಕು ಕೊಚ್ಚಿಕೊಂಡು ಹೋಗಿದೆ. ಮತ್ತೆ ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂಬ ಚಿಂತೆ ಕಾಡುತ್ತಿದೆ. ಅಳಿದುಳಿದ ಅವಶೇಷಗಳಡಿ ಸಂಸಾರ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದೇವೆ. ಸರ್ಕಾರದ ಸಹಾಯ ಧನ ಯಾವಾಗ ಬರುವುದೋ? ನಮ್ಮ ಕೈಗೆ ಯಾವಾಗ ಸೇರುವುದೋ? ನಮ್ಮ ಬದುಕು ಮತ್ತೆ ಯಥಾಸ್ಥಿತಿಗೆ ಯಾವಾಗ ಬರುವುದೋ? ದೇವನೇ ಬಲ್ಲ.
    ಹುಚ್ಚಪ್ಪ ತಳವಾರ, ಬಾಧಿತ ಪ್ರದೇಶದ (ಭುಯಾರ) ನಿವಾಸಿ

    ಮನೆ ಮತ್ತು ಬೆಳೆ ಹಾನಿ ಸಮೀಕ್ಷೆ ನಡೆದಿದೆ. ಅ. 27ರವರೆಗೆ ಕಾಲಾವಕಾಶ ಇದ್ದು ಅಷ್ಟರಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ತಾತ್ಕಾಲಿಕವಾಗಿ 474 ಕುಟುಂಬಗಳಿಗೆ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಪರಿಹಾರ ನೀಡಲಾಗುವುದು.
    ಪಿ.ಸುನೀಲಕುಮಾರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts