More

    ರಾಜಕೀಯ ಪ್ರಭಾವಕ್ಕೆ ಒಳಗಾಗಬೇಡಿ

    ವಿಜಯಪುರ: ರಾಜಕೀಯ ಪ್ರಭಾವಕ್ಕೆ ಒಳಗಾಗದೆ ದಕ್ಷ ಹಾಗೂ ಪ್ರಾಮಾಣಿಕ ಸೇವೆಗೆ ಮುಂದಾಗಬೇಕೆಂದು ಬೆಳಗಾವಿ ಉತ್ತರ ವಲಯದ ಐಜಿಪಿ ಎಚ್.ಜಿ. ರಾಘವೇಂದ್ರ ಸುಹಾಸ್ ಪ್ರಶಿಕ್ಷಣಾರ್ಥಿಗಳಿಗೆ ಹೇಳಿದರು.

    ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ವಿಜಯಪುರ ಮತ್ತು ಬಾಗಲಕೋಟೆ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 5ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ಮತ್ತು 1ನೇ ತಂಡದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಅವರು ಮಾತನಾಡಿದರು.

    ಪ್ರಶಿಕ್ಷಣಾರ್ಥಿಗಳ ತರಬೇತಿ ಪಡೆಯುವುದು ತಾತ್ಕಾಲಿಕವಾದರೂ ಅದು ಶಾಶ್ವತ. ಇಲ್ಲಿ ಬೋಧಿಸುವ ತರಬೇತಿ ಕಾರ್ಯರೂಪಕ್ಕೆ ತರಬೇಕು. ಕರ್ತವ್ಯದ ವೇಳೆ ದರ್ಪ, ದೌರ್ಜನ್ಯ ತೋರದೆ ನ್ಯಾಯಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ದ್ವೇಷವಿಲ್ಲದೆ ಉತ್ತಮ ಕೆಲಸ ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದರು.

    ಪೊಲೀಸ್ ಇಲಾಖೆಗೆ ಬಿಇ, ಬಿಎಸ್‌ಸಿ, ಡಿಪ್ಲೊಮಾ, ಎಂಬಿಎ ಓದಿದವರು ಸೇರ್ಪಡೆ ಯಾಗಿರುವುದು ಹೆಮ್ಮೆ ವಿಷಯವಾಗಿದೆ. ನಿಮ್ಮ ಶಿಕ್ಷಣ, ಅರ್ಹತೆಗೆ ತಕ್ಕಂತೆ ಇಲಾಖೆಯಲ್ಲಿ ಇನ್ನೂ ಉನ್ನತ ಹುದ್ದೆಗೆ ಆಯ್ಕೆಯಾಗಲು ಅವಕಾಶವಿದೆ. ಹೆಚ್ಚಿನ ಅಧ್ಯಯನಕ್ಕಾಗಿ ಇಲಾಖೆ ಸಹಕಾರ ನೀಡಲಿದ್ದು, ಅದರ ಸದುಪಯೋಗ ಪಡೆದು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.

    ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಶಾಲೆಯ ಪ್ರಾಂಶುಪಾಲ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಪ್ರತಿಜ್ಞೆ ಬೋಧಿಸಿದರು. ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದವರಿಗೆ ಬಹುಮಾನ ವಿತರಿಸಲಾಯಿತು.

    ಎಸ್‌ಪಿ ಅನುಪಮ ಅಗರವಾಲ್, ಟಿಪಿಟಿಎಸ್ ಪ್ರಾಂಶುಪಾಲ ಡಾ.ರಾಮ ಅರಸಿದ್ದಿ ಮತ್ತಿತರರಿದ್ದರು.
    ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಾಲಕರು, ಸಂಬಂಧಿಕರು ಪಥಸಂಚಲನ ನೋಡಿ ಸಂತಸಪಟ್ಟರು. ನಂತರ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

    ಭೀಮಾತೀರದ ಗುಂಡಿನ ದಾಳಿ ಪ್ರಕರಣ; ಕೋಕಾ ಕಾಯ್ದೆ ಜಾರಿ?
    ಭೀಮಾತೀರದ ರೌಡಿಶೀಟರ್ ಮಹಾದೇವ ಭೈರಗೊಂಡ ಹಾಗೂ ಸಹಚರರ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದ ಹಾಗೂ ದಾಳಿಗೊಳಗಾದ ಎರಡೂ ತಂಡಗಳ ಮೇಲೆ ಕೋಕಾ ಕಾಯ್ದೆ ಜಾರಿ ಮಾಡಲು ಚಿಂತನೆ ನಡೆದಿದೆ ಎಂದು ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್ ಹೇಳಿದರು.

    ಮಹಾದೇವ ಭೈರಗೊಂಡ ಮೇಲಿನ ದಾಳಿ ಮಾಡಿದವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಮಲ್ಲಿಕಾರ್ಜುನ ಚಡಚಣ ಹಾಗೂ ವಿಮಲಾಬಾಯಿ ಚಡಚಣ ಬಂಧನಕ್ಕೆ ಜಾಲ ಬೀಸಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಮಹಾರಾಷ್ಟ್ರದಲ್ಲಿ ನಮ್ಮ ಪೊಲೀಸರು ಜಾಲಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts