More

    ವಿದ್ಯಾರ್ಥಿಗಳು ಸುರಕ್ಷಿತ ಕ್ರಮ ಅನುಸರಿಸಲಿ

    ವಿಜಯಪುರ: ಕರೊನಾ ವಿರುದ್ಧ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಶೈಕ್ಷಣಿಕ ವರ್ಷದ ಅವಧಿಯನ್ನು ಯಶಸ್ವಿಯಾಗಿ ವಿದ್ಯಾರ್ಥಿಗಳು ಪೂರೈಸಬೇಕು ಎಂದು ಗಾಂಧಿಚೌಕ್ ವೃತ್ತ ಪೊಲೀಸ್ ನಿರೀಕ್ಷಕ ರವೀಂದ್ರ ನಾಯ್ಕೋಡಿ ಹೇಳಿದರು.
    ಇಲ್ಲಿನ ಅಥಣಿ ರಸ್ತೆಯಲ್ಲಿರುವ ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಪಿಯು ತರಗತಿಗಳ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
    ಕರೊನಾದಿಂದಾಗಿ ಎಂಟು ತಿಂಗಳಿನಿಂದ ಶಾಲೆ-ಕಾಲೇಜುಗಳು ಮುಚ್ಚಿದ್ದವು. ಆನ್‌ಲೈನ್ ತರಗತಿಗಳು ಗ್ರಾಮೀಣ ಭಾಗದ ಮಕ್ಕಳಿಗೆ ಸರಿಯಾಗಿ ತಲುಪದೆ ಕಲಿಕೆ ಅಸ್ತವ್ಯಸ್ತವಾಗಿತ್ತು. ದ್ವಿತೀಯ ಪಿಯುಸಿ ಶೈಕ್ಷಣಿಕ ಬದುಕಿನ ಮುಖ್ಯ ಘಟ್ಟವಾಗಿದ್ದು, ಹಿಂದಿನ ನಷ್ಟವನ್ನು ಮುಂದಿನ ನಾಲ್ಕಾರು ತಿಂಗಳ ಭೌತಿಕ ಕಲಿಕೆಯಿಂದ ತುಂಬಿಕೊಳ್ಳಬೇಕು. ಉಳಿದಿರುವ ಸಮಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.

    ಆಕ್ಸರ್ಡ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಕರೊನಾ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ, ಈ ವೈರಸ್ ಜತೆಗೆ ಬದುಕಿ ಎಲ್ಲರೂ ಯಶಸ್ವಿಯಾಗಬೇಕಿದೆ. ಎಕ್ಸಲಂಟ್ ಕಾಲೇಜಿನ ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುವುದರಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸಬೇಕು. ಕರೊನಾ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಪಾಠ ಕಲಿಸಿದ್ದು, ಮನೆಯಲ್ಲಿ ಹಿರಿಯ ವಯೋಮಾನದವರನ್ನು ಕಾಳಜಿಯಿಂದ ತಾವೆಲ್ಲ ಕಾಣಬೇಕು. ಅದರೊಟ್ಟಿಗೆ ಶಿಕ್ಷಣದಲ್ಲಿ ಮಹತ್ತರ ಸಾಧನೆಗೈದು ಪಾಠ ಕಲಿಸಿದ ಗುರುಗಳಿಗೆ, ಪಾಲಕರಿಗೆ, ನಿಮ್ಮೂರಿಗೆ ಹಾಗೂ ಸಂಸ್ಥೆಗೆ ಗೌರವ ತರಬೇಕೆಂದು ತಿಳಿಸಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲಂಟ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಚೇರ್ಮನ್ ಬಸವರಾಜ ಕೌಲಗಿ ಮಾತನಾಡಿ, ಕರೊನಾ ನಿಯಮಗಳಂತೆ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಲೇಜು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ, ಭಯ ಪಡದೆ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
    ವೇದಮೂರ್ತಿ ನಾಗಯ್ಯ ಶಾಸಿ ಹಿರೇಮಠ, ಪ್ರಾಚಾರ್ಯ ಡಿ.ಎಲ್.ಬನಸೋಡೆ, ಸಂಸ್ಥೆಯ ನಿರ್ದೇಶಕ ಮಂಜುನಾಥ ಕೌಲಗಿ, ಕಾಲೇಜಿನ ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts