More

    ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ

    ವಿಜಯಪುರ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಪ್ರತಿಭಟನೆ ಮಾತ್ರ ಜೋರಾಗಿತ್ತು.

    ಮಂಗಳವಾರ ಬೆಳಗ್ಗೆಯಿಂದಲೇ ಬಸ್, ಆಟೋ ಮತ್ತಿತರ ವಾಹನಗಳು ಎಂದಿನಂತೆ ರಸ್ತೆಗಿಳಿದವು. ಅಲ್ಲದೆ, ಅಂಗಡಿ ಮುಂಗಟ್ಟುಗಳು, ಹೋಟೆಲ್, ಬಾರ್‌ಗಳು ತೆರೆದಿದ್ದವು. ಬೆರಳೆಣಿಕೆ ಜನ ಮಾತ್ರ ಸ್ವಯಂ ಪ್ರೇರಿತವಾಗಿ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಸಾಥ್ ನೀಡಿದರು. ಜಿಲ್ಲಾದ್ಯಂತ ಎಲ್ಲೂ ಬಂದ್ ಪರಿಣಾಮ ಬೀರಲಿಲ್ಲ.

    ಬೈಕ್ ಜಾಥಾಗೆ ಅಡ್ಡಿ
    ನಗರದ ಕೇಂದ್ರ ಬಸ್ ನಿಲ್ದಾಣ ಎದುರು ಜಮಾಯಿಸಿದ ರೈತಪರ ಸಂಘಟನೆಗಳು ಹಾಗೂ ವಿವಿಧ ಸಾಮಾಜಿಕ, ರಾಜಕೀಯ ಸಂಘಟನೆಗಳ ಪದಾಧಿಕಾರಿಗಳು ಬೈಕ್ ಜಾಥಾಕ್ಕೆ ಸಜ್ಜಾದರು. ಈ ವೇಳೆ ಪೊಲೀಸರು ಜಾಥಾಗೆ ಅಡ್ಡಿಪಡಿಸಿದ್ದರಿಂದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ರೈತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಒಂದು ಗಂಟೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಎಪಿಎಂಸಿ ಕಾಯ್ದೆ ಹಿಂಪಡೆಯಿರಿ, ಭೂ ಸುಧಾರಣೆ ಕಾಯ್ದೆ ವಾಪಸ್ ಪಡೆಯಿರಿ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಹಿಂಪಡೆಯಿರಿ, ವಿದ್ಯುತ್ ಕಾಯ್ದೆ ಕೈಬಿಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ
    ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವ ಬಹಿರಂಗ ಸಭೆ ನಡೆಯಿತು. ಹಿರಿಯ ಹೋರಾಟಗಾರ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕಳೆದ 12 ದಿನಗಳಿಂದ ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಗಲು ರಾತ್ರಿ ಎನ್ನದೆ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕರಾಳ ಕಾನೂನು ಹಿಂಪಡೆಯಬೇಕು ಎಂಬುದು ರೈತರ ಬೇಡಿಕೆ. ಸರ್ಕಾರ 6 ಬಾರಿ ಮಾತುಕತೆ ನಡೆಸಿದರೂ ಒಮ್ಮತದ ನಿರ್ಧಾರ ಮೂಡಿ ಬರುತ್ತಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.

    ಆರ್‌ಕೆಎಸ್‌ನ ರಾಜ್ಯ ಉಪಾಧ್ಯಕ್ಷ ಭಿ. ಭಗವಾನರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಕರೊನಾ ಹೆಸರಲ್ಲಿ ಜನರನ್ನು ಬಂಧಿಯಾಗಿಟ್ಟು ತಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಬಂಡವಾಳಶಾಹಿ ಪರ ಕೆಲಸ ಮಾಡುತ್ತಿದೆ. ರೈತರು ಪ್ರಾಕೃತಿಕ ವಿಕೋಪದಿಂದ ನಲುಗಿದ್ದಾರೆ. ಸಂಕಷ್ಟದಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಮಾರಕವಾದ ಮಸೂದೆ ಜಾರಿ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಎಂದರು.

    ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ 2020 ಜಾರಿಗೊಳಿಸಲು ಹೊರಟಿರುವುದನ್ನು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
    ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚಂದ್ರೇಗೌಡ ಮಾತನಾಡಿ, ರೈತರು ಈ ದೇಶದ ಬೆನ್ನೆಲುಬು ಎನ್ನುವ ಸರ್ಕಾರವೇ ರೈತರ ಬೆನ್ನೆಲುಬು ಮುರಿಯುತ್ತಿದೆ ಎಂದರು.

    ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಖಿಲ ಭಾರತ ಕಿಸಾನ್ ಸಭಾ ಮುಖಂಡ ಪ್ರಕಾಶ ಹಿಟ್ನಳ್ಳಿ ಮಾತನಾಡಿ ಸರ್ಕಾರದ ಕ್ರಮ ಖಂಡಿಸಿದರು.

    ಆರ್‌ಕೆಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ, ಶ್ರೀನಾಥ ಪೂಜಾರಿ, ಭೀಮ್ ಆರ್ಮಿ ಮುಖಂಡ ರಿಜ್ವಾನ್ ಮುಲ್ಲಾ, ಮಹಿಳಾ ಪರ ಸಂಘಟನೆಗಳಿಂದ ಸುರೇಖಾ ರಜಪೂತ, ಕಾರ್ಮಿಕ ಸಂಘಟನೆಯಿಂದ ಲಕ್ಷ್ಮಣ ಹಂದ್ರಾಳ, ಪ್ರಗತಿಪರ ಸಂಘಟನೆ ಮುಖಂಡ ಅಕ್ರಂ ಮಾಶ್ಯಾಳಕರ, ಸದಾನಂದ ಮೋದಿ, ಕುರಿಗಾಹಿ ಸಂಘದ ಮಲ್ಲು ಬಿದರಿ ಇತರರು ಬೆಂಬಲ ಸೂಚಿಸಿದರು.

    ಮಲ್ಲಿಕಾರ್ಜುನ ಎಚ್.ಟಿ., ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ., ಸುನಂದಾ ನಾಯಕ, ರಾಮಣ್ಣ ಸಿರೆಗೋಳ, ಖಾಜಾಸಾಬ ಕೋಲಾರ, ಅನ್ವರಹುಸೇನ್ ಮುಲ್ಲಾ, ಕಾಳಮ್ಮ ಬಡಿಗೇರ ಮತ್ತಿತರರಿದ್ದರು.

    ಕಾಂಗ್ರೆಸ್ ಪ್ರತಿಭಟನೆ
    ಭಾರತ್ ಬಂದ್ ಬೆಂಬಲಿಸಿ ಕಾಂಗ್ರೆಸ್ ಕಾರ್ಯಕರ್ತರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
    ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್​ ಮಾತನಾಡಿ, ರೈತ ವಿರೋಧಿ ಕಾನೂನುಗಳನ್ನು ರಚನೆ ಮಾಡಿ ಕೇಂದ್ರ ಸರ್ಕಾರ ರೈತರ ಮರಣ ಶಾಸನ ಬರೆಯುತ್ತಿದೆ. ಅಂಬಾನಿ, ಅದಾನಿ ಪರ ಆಡಳಿತ ನಡೆಸುತ್ತಿದೆ ಎಂದು ದೂರಿದರು.

    ವೈಜನಾಥ್ ಕರ್ಪೂರಮಠ, ಡಿ.ಎಚ್. ಕಲಾಲ್, ಜಮೀರಅಹ್ಮದ ಬಕ್ಷಿ, ಅಬ್ದುಲ ಖಾದರ ಖಾದಿಮ, ಶಾಹಜಾನ ದಂಡಿಸಿ, ಬಡೇಪೀರ್ ಜುನೈದಿ, ಚನ್ನಬಸಪ್ಪ ನಂದರಗಿ, ವಿನೋದ್ ವ್ಯಾಸ, ರವೀಂದ್ರ ಜಾಧವ, ಹಾಜಿಲಾಲ ದಳವಾಯಿ, ಧನರಾಜ ಎ., ದಾವಲಸಾಬ ಬಾಗವಾನ, ಮಂಜುಳಾ ಗಾಯಕವಾಡ, ಮಂಜುಳಾ ಜಾಧವ, ಬಾಬು ಯಾಳವಾರ, ಮಹಾದೇವ ಜಾಧವ, ಪ್ರಕಾಶ ಕಟ್ಟಿಮನಿ, ಶಕುಂತಲಾ ಕಿಸೋರ, ಕಸ್ತೂರಿ ಪೂಜಾರಿ, ಅಲ್ಲಾಭಕ್ಷ ಬಾಗಲಕೋಟ, ಗಿರೀಶ ಕುಲಕರ್ಣಿ ಮತ್ತಿತರರಿದ್ದರು.


    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts