More

    ನಿರೂಪಕರಿಗೆ ಸಾಮಾನ್ಯ ಜ್ಞಾನವಿರಬೇಕು

    ವಿಜಯಪುರ: ಟಿವಿ ನಿರೂಪಕರಾಗುವುದು ಸುಲಭದ ಮಾತಲ್ಲ. ಕೇವಲ ಓದಲು ಬಂದರೆ ನಿರೂಪಣೆ ಮಾಡಲು ಸಾಧ್ಯವಿಲ್ಲ. ನಿರೂಪಣಾ ಕೌಶಲದ ಜೊತೆಗೆ ಸಾಮಾನ್ಯ ಜ್ಞಾನದ ಬಗೆಗೆ ಅರಿವಿರಬೇಕು ಎಂದು ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಎಸ್. ಬಾಲಸುಬ್ರಮಣ್ಯ ಹೇಳಿದರು.
    ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ‘ಟಿವಿ ನಿರೂಪಣಾ ಕೌಶಲ್ಯ’ ಕುರಿತ ನಾಲ್ಕು ದಿನದ ಕಾರ್ಯಾಗಾರಕ್ಕೆ ಗುರುವಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಟಿವಿ ನಿರೂಪಣೆ ಎಂದರೆ ಅದು ಬಹುಮುಖ ಸಾಮರ್ಥ್ಯದ ಕೆಲಸ. ಓದುವ, ಬರೆಯುವ, ಸಂವಹನ ನಡೆಸುವ ಹೀಗೆ ಎಲ್ಲ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ನಿರೂಪಕರಾಗಲು ಸಾಧ್ಯ. ಟಿವಿ ಮಾಧ್ಯಮಕ್ಕೆ ಹೋಗುವ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರಬೇಕು. ಯಾವುದೇ ತಯಾರಿ ಇಲ್ಲದೇ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಿಲ್ಲ ಎಂದರು.
    ಟಿವಿ ಅತೀ ಹೆಚ್ಚು ಜನರನ್ನು ತನ್ನತ್ತ ಸೆಳೆದುಕೊಳ್ಳುವ ಒಂದು ಬಲವಾದ ಸಂವಹನ ಮಾಧ್ಯಮ. ಪ್ರಸ್ತುತ ದಿನಮಾನದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವಂಥ ಮಾಧ್ಯಮ ಸಹ ಇದಾಗಿದೆ. ಈ ಮಾಧ್ಯಮ ಜಾಹೀರಾತನ್ನು ತನ್ನ ಆದಾಯದ ಮೂಲವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಜಾಹೀರಾತಿನ ಮೂಲಕ ವೀಕ್ಷಕರನ್ನು ಮತ್ತಷ್ಟು ಆಕರ್ಷಿಸುತ್ತಿದೆ ಎಂದರು.
    ಕಾಲದಿಂದ ಕಾಲಕ್ಕೆ ಟಿವಿ ಮಾಧ್ಯಮದಲ್ಲಿ ಸಾಕಷ್ಟು ತಾಂತ್ರಿಕ ಬದಲಾವಣೆಯಾಗಿದೆ. ಇದರಿಂದಾಗಿ ಪ್ರಸ್ತುತ ದಿನಮಾನದಲ್ಲಿ ಮಾಧ್ಯಮಗಳು ಡಿಜಿಟಲೀಕರಣವಾಗಿದ್ದು, ನಮ್ಮ ಅಂಗೈಯಲ್ಲೇ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ. ಡಿಜಿಟಲ್ ಮಾಧ್ಯಮವನ್ನು ಬಳಸುವುದು ಅತ್ಯಂತ ಸುಲಭವಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದರು.
    ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ. ತಡಸದ ಮಾತನಾಡಿ, ಹಳೆಯ ಕಾಲದಲ್ಲಿ ನಿರೂಪಣೆಯ ಶೈಲಿಯೂ ಶಾಸೀಯವಾಗಿತ್ತು. ಪತ್ರಿಯೊಬ್ಬ ನಿರೂಪಕರು ತನ್ನದೇ ಶೈಲಿಯ ಜೊತೆಗೆ ಕೆಲವು ಇತಿ-ಮಿತಿಗಳನ್ನು ಹೊಂದಿರುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಕಾಲ ಬದಲಾದಂತೆ ಶೈಲಿಯೂ ಬದಲಾಗಿದೆ. ಇನ್ನು ಕರ್ನಾಟಕದಲ್ಲಿಯೂ ಸಾಕಷ್ಟು ಅತ್ಯುತ್ತಮ ನಿರೂಪಕಿಯರನ್ನು ನಾವು ಕಾಣಬಹುದು ಎಂದರು.
    ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕ ಮಾತನಾಡಿದರು. ಸಂಶೋಧನಾ ಸಂಯೋಜಕಿ ದೀಪಾ ತಟ್ಟಿಮನಿ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ಜ್ಞಾನಜೋತಿ ಚಾಂದಕವಠೆ ನಿರೂಪಿಸಿದರು. ಸಹಾಯಕ ಸಂಶೋಧಕಿ ಸೃಷ್ಟಿ ಜವಳಕರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts