More

    ಕೆರೆ ಒತ್ತುವರಿ ಕುರಿತು ದೂರು ಸಲ್ಲಿಸಿ

    ವಿಜಯಪುರ: ಅತಿಕ್ರಮಣಗೊಂಡಿರುವ ಸಣ್ಣ ನೀರಾವರಿ ಹಾಗೂ ಜಿಪಂ ವ್ಯಾಪ್ತಿಯ ಕೆರೆಗಳ ಕುರಿತು ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆರೆಯ ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳ ಮತ್ತು ದಾಖಲೀಕರಣಗೊಂಡಿರುವ ಮತ್ತು ದಾಖಲಿಕರಣಗೊಳ್ಳದೇ ಇರುವ ಜಿಪಂ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಕುರಿತಂತೆ ಆಯಾ ತಾಲೂಕು ತಹಸೀಲ್ದಾರ್ ಅವರಿಂದ ದೂರು ಸಲ್ಲಿಸಬೇಕು ಎಂದರು.
    ರಾಜ್ಯದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿಯ ಹಿತದೃಷ್ಟಿಯಿಂದ, ಕೃಷಿ, ಕುಡಿಯುವ ನೀರು, ಗ್ರಾಮೀಣ ಕೈಗಾರಿಕೆಗಳಿಗೆ ಮುಖ್ಯ ಮೂಲವಾಗಿರುವುದರಿಂದ ಜಲ ಮೂಲಗಳ ರಕ್ಷಣೆ ಮತ್ತು ಪುನರ್‌ಶ್ಚೇತನ ತುರ್ತಾಗಿ ಕೈಗೊಳ್ಳುವ ಕೆರೆ ಸಂರಕ್ಷಣೆ-ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸರ್ವೊಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕೆರೆ ಸಂರಕ್ಷಣೆ- ಅಭಿವೃದ್ಧಿ ಕಾಯ್ದೆ ಕೂಡಾ ಜಾರಿಯಲ್ಲಿರುವುದರಿಂದ ಸಂಬಂಧಿದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಲು ಸೂಚಿಸಿದರು.
    ಜಿಲ್ಲೆಯಲ್ಲಿರುವ ಕೆರೆಗಳ ನಿಖರ ಅಂಕಿ ಅಂಶಗಳನ್ನು ಒಳಗೊಂಡ ಸಮಗ್ರ ಮಾಹಿತಿಯನ್ನು ತಕ್ಷಣ ಪರಿಶೀಲಿಸಿ ಸಂಗ್ರಹಿಸಬೇಕು. ಸಣ್ಣ ನೀರಾವರಿ ವ್ಯಾಪ್ತಿಯ 156 ಹಾಗೂ ಜಿಪಂ ವ್ಯಾಪ್ತಿಯ 113 ಕೆರೆಗಳ ಸಮಗ್ರ ಮಾಹಿತಿ, ಒತ್ತುವರಿ ಕುರಿತಂತೆ ತಕ್ಷಣ ಸಮೀಕ್ಷೆ ಕೈಗೊಳ್ಳಬೇಕು. ಜಿಪಂ ಕೆರೆಗಳಿಗೆ ಸಂಬಂಧಪಟ್ಟಂತೆ ಆಯಾ ಪಂಚಾಯಿತಿ ಅಭಿವೃದ್ಧ್ದಿ ಅಧಿಕಾರಿಗಳನ್ನು ಗೊತ್ತುಪಡಿಸಿದ ಅಧಿಕಾರಿಗಳಾಗಿ ನಿಯೋಜಿಸಿ ಅಧಿಕೃತ ಕೆರೆಗಳ ಸಮಗ್ರ ಮಾಹಿತಿ ಸಂಗ್ರಹಿಸಬೇಕು ಎಂದರು.
    ಸರ್ಕಾರದ ಮಟ್ಟದಿಂದ ಸಕ್ಷಮ ಪ್ರಾಧಿಕಾರಿ ಅಧಿಕಾರಿಗಳನ್ನು ಸಹ ನಿಯೋಜನೆ ಮಾಡಲಾಗುತ್ತಿದೆ. ಕಾರಣ ಸಣ್ಣ ನೀರಾವರಿ, ಜಿಪಂಗೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಒತ್ತುವರಿ ಕುರಿತು ಮಾಹಿತಿ ಜೊತೆಗೆ ಆಯಾ ಕೆರೆಗಳ ನಿಗದಿತ ಜಮೀನು, ನೀರಾವರಿ ವ್ಯಾಪ್ತಿಯ ಕ್ಷೇತ್ರ ಸೇರಿದಂತೆ ಗಡಿ ದೃಢಪಡಿಸುವುದು, ಆಯಾ ಕೆರೆಗಳ ವ್ಯಾಪ್ತಿಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಬೆಳವಣಿಗೆಗೂ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಇರುವ ಕೆರೆಗಳ ಸಮಗ್ರ ಅಂಕಿ ಅಂಶಗಳು ಸೇರಿದಂತೆ ಇನ್ನಿತರ ಮಾಹಿತಿಯನ್ನು ನೀಡುವಲ್ಲಿ ವಿಲರಾಗಿರುವುದಕ್ಕೆ ಸಣ್ಣ ನೀರಾವರಿ ಅಧಿಕಾರಿಗಳ ಕಾರ್ಯ ವೈಖರಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಕಾರಣ ಕೇಳಿ ನೀಡಿ ನೋಟಿಸ್ ಜಾರಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
    ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಜಿಪಂ ಯೋಜನಾಧಿಕಾರಿ ನಿಂಗಪ್ಪ ಗೋಠೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts