More

    ವಿಜಯನಗರಕ್ಕೆ ಬಲ ನೀಡುವುದೆ ರಾಜ್ಯ ಬಜೆಟ್, ಅಭಿವೃದ್ಧಿ ಗತಿ ಹೆಚ್ಚಿಸಲು ಬೇಕು ಸರ್ಕಾರದ ಒಲವು

    ವೀರೇಂದ್ರ ನಾಗಲದಿನ್ನಿ ಹೊಸಪೇಟೆ
    ಎರಡು ವರ್ಷಗಳ ಹಿಂದೆ ರಾಜ್ಯದ 31ನೇ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿರುವ ವಿಜಯನಗರ ಇನ್ನಷ್ಟೇ ಅಂಬೆಗಾಲಿಡುತ್ತಿದೆ. ಅಲ್ಲದೆ, ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಮೂಲಕ ಜನಪ್ರಿಯತೆ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶನಿವಾರ 14ನೇ ಬಾರಿಗೆ ಆಯವ್ಯಯ ಮಂಡಿಸಲಿದ್ದಾರೆ. ಹೀಗಾಗಿ ಸಹಜವಾಗಿ ಜಿಲ್ಲೆಯ ದಶಕಗಳ ಬೇಡಿಕೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

    ಇದನ್ನೂ ಓದಿ: ನೀರಾವರಿಗೆ ಶಾಶ್ವತ ಪರಿಹಾರ: 42 ಲಕ್ಷ ಹೆಕ್ಟೇರ್​ಗೆ ವಿಸ್ತರಣೆಯಾಗಲಿದೆ ಅಚ್ಚುಕಟ್ಟು ವ್ಯಾಪ್ತಿ

    ನೂತನ ಜಿಲ್ಲೆ ಘೋಷಣೆಯಾಗಿ ಎರಡು ವರ್ಷ ಕಳೆಯುತ್ತಿದ್ದರೂ ಹಲವು ಇಲಾಖೆಗಳು ಮಂಜೂರಾಗಿಲ್ಲ. ಮಂಜೂರಾದ ಇಲಾಖೆಗಳಿಗೆ ಸಿಬ್ಬಂದಿ, ಕಚೇರಿಯಿಲ್ಲದೆ ಬಳ್ಳಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾಗಶಃ ಇಲಾಖೆಗಳಿಗೆ ಪ್ರಭಾರಿಗಳೇ ಭಾರವಾಗಿದ್ದಾರೆ. ಸರ್ಕಾರದ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಜಿಲ್ಲೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಎಲ್ಲ ಇಲಾಖೆಗಳ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿ, ಸೂಕ್ತ ಕಟ್ಟಡ ಒದಗಿಸಲು ಸರ್ಕಾರ ಮುಂದಾಗಬೇಕಿದೆ.

    ಬೇಕಿದೆ ಸಮಾನಾಂತರ ಜಲಾಶಯ

    ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಹೂಳು ತುಂಬಿದ್ದರಿಂದ ಶೇ.30 ನೀರು ಸಂಗ್ರಹ ಇಲ್ಲದಂತಾಗುತ್ತಿದೆ. ಉತ್ತಮ ಮಳೆಯಾದರೆ ಕೆಲವೇ ದಿನಗಳಲ್ಲಿ ಭರ್ತಿಯಾಗುತ್ತದೆ. ಮಳೆ ವಿಳಂಬವಾದರೆ, ಅಷ್ಟೇ ಬೇಗ ಡ್ಯಾಂ ಬರಿದಾಗುತ್ತಿದ್ದು, ಕೆಳ ಭಾಗದ ಜನ, ಜಾನುವಾರು ಹಾಗೂ ಕೃಷಿಕರಿಗೆ ಜೀವಜಲ ಚಿಂತೆಯಾಗಿ ಕಾಡುತ್ತಿದೆ. ಹೀಗಾಗಿ ಜಲಾಶಯದಲ್ಲಿ ತುಂಬಿಸುವ ಹೂಳು ತೆಗೆಯಬೇಕು. ಇಲ್ಲವೇ ಸಮಾನಾಂತರ ಜಲಾಶಯ ನಿರ್ಮಿಸಬೇಕು ಎಂಬುದು ರೈತರ ದಶಕಗಳ ಬೇಡಿಕೆಯಾಗಿದೆ.

    ಕೆರೆಗಳಿಗೆ ನೀರು ತುಂಬಿಸಿ

    ತುಂಗಭದ್ರಾ ಜಲಾಶಯ ಹೊಸಪೇಟೆಯಲ್ಲಿದ್ದರೂ ಜಿಲ್ಲೆಯು ಮಳೆಯಾಶ್ರಿಯವಾಗಿದ್ದು, ಮಳೆ ಬಂದರೆ ಬೆಳೆ, ಇಲ್ಲವೆ ಗುಳೆ ಎನ್ನುವುದು ಪರಿಸ್ಥಿತಿ ಇಲ್ಲಿನದು. ಬೇಸಿಗೆಯಲ್ಲಿ ಹಲವು ಗ್ರಾಮಗಳಲ್ಲಿ ಕುಡಿವ ನೀರಿಗೂ ಬರ ಉಂಟಾಗುತ್ತದೆ. ನೀರಿನ ಬವಣೆ ತಪ್ಪಿಸಲು ಜಿಲ್ಲೆಯಲ್ಲಿರುವ 80ಕ್ಕೂ ಹೆಚ್ಚು ಕೆರೆಗಳಿಗೆ ನದಿ ನೀರು ತುಂಬಿಸಬೇಕು. ಇದರಿಂದ ಅಂರ್ತಜಲವೂ ವೃದ್ಧಿಯಾಗಲಿದ್ದು, ಕೊಳವೆಬಾವಿಗಳು ಪುನಶ್ಚೇತನಗೊಳ್ಳುತ್ತವೆ ಎಂಬುದು ಸ್ಥಳೀಯ ರೈತರ ಆಗ್ರಹ.

    ಸುಗಂಧಿ ಬಾಳೆಗೆ ಇರಲಿ ಪ್ರಾಧಾನ್ಯ

    ವಿಜಯನಗರ ಸಾಮ್ರಾಜ್ಯದಷ್ಟೇ ಸುಗಂಧಿ ಬಾಳೆಗೆ ಇತಿಹಾಸವಿದೆ. ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಸುಂಗಧಿ ಬಾಳೆ ಕ್ಷೇತ್ರ ವೃದ್ಧಿಗಾಗಿ ಬಾಳೆ ಸಂಶೋಧನಾ ಕೇಂದ್ರ ಮತ್ತು ಕೃಷಿ ಕಾಲೇಜು ಸ್ಥಾಪಿಸಬೇಕು. ಜಿಲ್ಲೆಯ ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದ್ದರಿಂದ ಒಣ ಬೇಸಾಯ ಸಂಶೋಧನಾ ಕೇಂದ್ರವೂ ಸ್ಥಾಪಿಸಬೇಕೆಂಬ ಕೂಗಿ ಇದೆ.

    ರೈಲ್ವೆ ಬೇಡಿಕೆ ಈಡೇರಲಿ

    ಜಿಲ್ಲೆಯ ಕೂಡ್ಲಿಗಿ, ಹಡಗಲಿ ತಾಲೂಕುಗಳಿಗೆ ರೈಲ್ವೆ ಸಂಪರ್ಕ ವಿಸ್ತರಣೆಯಾಗಬೇಕು ಜತೆಗೆ ಕೊಟ್ಟೂರು ರೈಲ್ವೆ ಮಾರ್ಗದಿಂದ ಬೆಂಗಳೂರು, ಹಾಸನ, ಅರಸಿಕೆರೆಗೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ.

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

    ನೂತನ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ವೈದ್ಯಕೀಯ ಸೇವೆಗಳ ಮೂಲ ಸೌಕರ್ಯ ಕಾಡುತ್ತಿವೆ. ಕೊಂಚ ಗಂಭೀರ ಕಾಯಿಲೆ, ಅಪಘಾತ ಸಂಭವಿಸಿದರೂ ಬಳ್ಳಾರಿ, ಕೊಪ್ಪಳ ಇಲ್ಲವೆ ದಾವಣಗೆರೆಗೆ ರೆಫರ್ ಮಾಡುವ ಅನವಾರ್ಯತೆ ತಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಹೊಸಪೇಟೆ ನಗರದ ಜಂಬುನಾಥ ಹಳ್ಳಿ ರಸ್ತೆಯಲ್ಲಿರುವ ಸರ್ಕಾರದ 50 ಎಕರೆ ಪ್ರದೇಶವನ್ನು ಮೆಡಿ ಸಿಟಿಗಾಗಿ ಮೀಸಲಿಡಲಾಗಿದೆ.

    ಈ ಪೈಕಿ ಸದ್ಯ 5 ಎಕರೆ ಪ್ರದೇಶದಲ್ಲಿ 250 ಹಾಸಿಗೆ ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿದೆ. ಇನ್ನುಳಿದ ಜಾಗೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗೂ ನರ್ಸಿಂಗ್ ಕಾಲೇಜು ಸ್ಥಾಪಿಸಬೇಕಿದೆ.

    ಉದ್ಯೋಗ ಸೃಷ್ಟಿಗೆ ಒತ್ತು ಕೊಡಿ

    ಬೆರಳಿಕೆಯ ಮೈನ್ಸ್ ಹಾಗೂ ಕೃಷಿ ಹೊರತಾಗಿ ಉದ್ಯೋಗ ನೀಡುವಂತ ದೊಡ್ಡ ಮಟ್ಟದ ಕೈಗಾರಿಕೆಗಳು ಜಿಲ್ಲೆಯಲ್ಲಿಲ್ಲ. ಪರಿಣಾಮ ವಿದ್ಯಾವಂತರೂ ದೂರದ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ವಿಶ್ವವಿಖ್ಯಾತ ಹಂಪಿ ಪ್ರವಾಸೋದ್ಯಮ ಉತ್ತೇಜಿಸುವ ಜತೆಗೆ ಸ್ಥಳೀಯರಿಗೆ ಉದ್ಯೋಗ ಒದಗಸುವ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂಬುದ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ.

    ಕಡತದಲ್ಲೇ ಉಳಿದ ಭರವಸೆ

    ಕಳೆದ ಬಾರಿ 2023-24ನೇ ಸಾಲಿಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ಚುನಾವಣಾ ಪ್ರೇರಿತ ಎನಿಸಿಕೊಂಡಿತು. ಬಜೆಟ್‌ನಲ್ಲಿ ನೂತನ ಜಿಲ್ಲೆಗೆ ಬೆರಳೆಣಿಕೆ ಯೋಜನೆಗಳು ಸಿಕ್ಕಿದ್ದವಾದರೂ, ಅವುಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

    ಈ ಬಾರಿ ಬಜೆಟ್‌ನಲ್ಲಿ ಸ್ಟೀಲ್, ಸೋಲಾರ್ ಪಾರ್ಕ್, ಕೃಷಿ ಮತ್ತು ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಈ ಭಾಗಕ್ಕೆ ಬರುವ ದೇಶ-ವಿದೇಶಿ ಪ್ರಯಾಣಿಕರ ಅನುಕೂಲಕ್ಕಾಗಿ ಏರ್‌ಪೋರ್ಟ್ ನಿರ್ಮಿಸಬೇಕು. ಮರಿಯಮ್ಮನಹಳ್ಳಿ ಬಳಿ ಹೊಸ ಕೈಗಾರಿಕಾ ಪ್ರದೇಶ ಘೋಷಿಸಬೇಕು.
    ಅಶ್ವಿನ್ ಕೋತಂಬರಿ

    ವಾಣಿಜ್ಯೋದ್ಯಮ ಸಂಸ್ಥೆಯ ಜಿಲ್ಲಾಧ್ಯಕ್ಷ

    ವಿಜಯನಗರಕ್ಕೆ ಬಲ ನೀಡುವುದೆ ರಾಜ್ಯ ಬಜೆಟ್, ಅಭಿವೃದ್ಧಿ ಗತಿ ಹೆಚ್ಚಿಸಲು ಬೇಕು ಸರ್ಕಾರದ ಒಲವು

    ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಕಚೇರಿ ಮತ್ತು ಸಿಬ್ಬಂದಿ ನೇಮಕ ಮಾಡಬೇಕು. ಹಿಂದಿನ ಸರ್ಕಾರ ಚಾಲನೆ ನೀಡಿದ್ದ ಕಾಮಗಾರಿಗಳು ರಾಜಕೀಯ ಕಾರಣಕ್ಕೆ ಸ್ಥಗಿತವಾಗಬಾರದು. ಈ ಭಾಗದ ಲಕ್ಷಾಂತರ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆಗೆ ಒತ್ತು ನೀಡಬೇಕು. ತುಂಗಭದ್ರಾ ನದಿ ಜಿಲ್ಲೆಯ ಪಶ್ಚಿಮ ತಾಲೂಕಿನಿಂದ ಹರಿದು ಬರುತ್ತಿದ್ದರೂ, ಆ ಭಾಗಕ್ಕೆ ನೀರಿಲ್ಲ. ಹೀಗಾಗಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು.
    ವೈ.ಯಮುನೇಶ
    ಅಧ್ಯಕ್ಷ, ವಿಜಯನಗರ ನಾಗರಿಕ ವೇದಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts