More

    ಅಮರಾವತಿ ಗೆಸ್ಟ್‌ಹೌಸ್‌ನಲ್ಲಿ ಡಿಸಿ ಕಚೇರಿ, ವಾಸ್ತವ್ಯಕ್ಕೆ ವೈಕುಂಠವೇ ಆಧಾರ

    ಪ್ರಭು ಹಂಪಾಪಟ್ಟಣ ಹೊಸಪೇಟೆ

    ನೂತನ ವಿಜಯನಗರ ಜಿಲ್ಲೆ ಕಾರ್ಯಾರಂಭವಾದ ಹಿನ್ನೆಲೆಯಲ್ಲಿ ನಗರದ ಅಮರಾವತಿ ಅತಿಥಿಗೃಹವನ್ನು ತಾತ್ಕಾಲಿಕ ಡಿಸಿ ಕಚೇರಿಯನ್ನಾಗಿ ಪರಿವರ್ತಿಸಲಾಗಿದ್ದು, ಅತಿಥಿಗಳಿಗೆ ಟಿ.ಬಿ.ಡ್ಯಾಂನ ವೈಕುಂಠ ಅತಿಥಿ ಗೃಹದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.

    ನೂತನ ವಿಜಯನಗರ ಜಿಲ್ಲೆ ಪ್ರವಾಸೋದ್ಯಮ ಕೇಂದ್ರಬಿಂದುವಾಗಿದೆ. ಹಂಪಿ, ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್, ದರೋಜಿ ಕರಡಿಧಾಮ, ಮೈಲಾರಲಿಂಗೇಶ್ವರ, ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಪಕ್ಷಿಧಾಮದಂತಹ ಪ್ರವಾಸಿ ತಾಣಗಳು ಇರುವುದರಿಂದ ಜಿಲ್ಲೆಗೆ ಸಚಿವರು, ನ್ಯಾಯಾಧೀಶರು ಸೇರಿ ಗಣ್ಯರು ಭೇಟಿ ನೀಡುತ್ತಲೇ ಇರುತ್ತಾರೆ. ಹಂಪಿಗೆ ಭೇಟಿ ನೀಡುತ್ತಿದ್ದ ವಿಐಪಿಗಳು ನಗರದ ಅಮರಾವತಿ ಸರ್ಕಾರಿ ಅತಿಥಿಗೃಹದಲ್ಲಿ ಉಳಿಯುತ್ತಿದ್ದರು. ಆದರೀಗ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ತುಂಗಭದ್ರಾ ಜಲಾಶಯದ ಬೆಟ್ಟದಲ್ಲಿನ ತುಂಗಭದ್ರಾ ಬೋರ್ಡ್‌ಗೆ ಸೇರಿದ ವೈಕುಂಠ ಅತಿಥಿಗೃಹದಲ್ಲಿ ಗಣ್ಯರು ಉಳಿಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖರು ಬಂದರೆ ಅಲ್ಲಿ ಉಳಿಯಲು ಸಮಸ್ಯೆ ಎದುರಾಗುತ್ತಿದ್ದು, ಜಿಲ್ಲಾಡಳಿತ ನಗರದ ಖಾಸಗಿ ಹೋಟೆಲ್‌ಗಳಾದ ಮಲ್ಲಿಗೆ ಸೇರಿದಂತೆ ನಾನಾ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲು ಮುಂದಾಗಿದೆ.

    ಕಟ್ಟಡ ನವೀಕರಣದವರೆಗೆ ಸಮಸ್ಯೆ: ಡ್ಯಾಂ ರಸ್ತೆಯ ಟಿಎಸ್ಪಿ ಕಾರ್ಖಾನೆ ಆವರಣದಲ್ಲಿನ ಹಳೇ ಕಟ್ಟಡ ನವೀಕರಣ ಕಾಮಗಾರಿ ಚುರುಕಿನಿಂದ ಸಾಗಿದೆ. ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆಗೆ ಸಚಿವರು ಸೂಚಿಸಿದ್ದಾರೆ. ಈ ಕಟ್ಟಡ ಸಿದ್ಧಗೊಂಡ ಕೂಡಲೇ ಜಿಲ್ಲಾಧಿಕಾರಿ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ವಿಶ್ವಪ್ರಸಿದ್ಧ ಹಂಪಿ ವೀಕ್ಷಿಸಲು ರಾಜ್ಯ, ಅಂತಾರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಐಪಿಗಳು ಬರುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ಬರುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಉಳಿಸಲು ಜಿಲ್ಲಾಡಳಿತಕ್ಕೆ ಸಮಸ್ಯೆ ಎದುರಾಗುತ್ತಿದೆ.

    ವಿಶ್ರಾಂತಿಗೆ ಇಲ್ಲ ಸ್ಥಳ: ನಾನಾ ಕೆಲಸಗಳ ನಿಮಿತ್ತ ಹೊಸಪೇಟೆ ನಗರಕ್ಕೆ ಬರುತ್ತಿದ್ದ ಸಚಿವರು ಇಲ್ಲಿನ ಅತಿಥಿಗೃಹಕ್ಕೆ ಬಂದು ಕೆಲ ಕಾಲ ವಿಶ್ರಾಂತಿ ಪಡೆಯುತ್ತಿದ್ದರು. ಸದ್ಯ ವಿಶ್ರಾಂತಿಗೂ ಸ್ಥಳವಿಲ್ಲವಾಗಿದೆ.

    ಬಹುತೇಕ ಕಚೇರಿಗಳಿಗೆ ತಾತ್ಕಾಲಿಕ ಕಟ್ಟಡ
    ಟಿಎಸ್ಪಿ ಆವರಣದಲ್ಲಿನ ಒಟ್ಟು 83 ಎಕರೆಯಲ್ಲಿ ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಪಂ ಸಿಇಒ ಕಚೇರಿ, ವಸತಿ ಗೃಹ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಲಾಗುತ್ತಿದೆ. ಈಗಾಗಲೇ ಎಡಿಸಿ, ಎಸ್ಪಿ, ಜಿಪಂ ಸಿಇಒ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸೇರಿ ಬಹುತೇಕ ಅಧಿಕಾರಿಗಳು ಬಂದಿದ್ದಾರೆ. ನೂತನ ಜಿಲ್ಲೆಯ ಜಿಲ್ಲಾ ಮಟ್ಟದ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಗೊಳ್ಳುವವರೆಗೆ ಬಹುತೇಕ ಕಚೇರಿಗಳನ್ನು ತಾತ್ಕಾಲಿಕ ಕಟ್ಟಡದಲ್ಲಿ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯನ್ನು ಅಮರಾವತಿ ಅತಿಥಿಗೃಹದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಜಗಜೀನರಾಮ್ ಸಮುದಾಯ ಭವನ ಹಾಗೂ ಜಿಪಂ ಸಿಇಒ ಅವರು ಸದ್ಯ ತಾಪಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸಚಿವರು, ಉನ್ನತ ಅಧಿಕಾರಿಗಳು, ವಿಐಪಿಗಳು ಬಂದರೆ ತುಂಗಭದ್ರಾ ಜಲಾಶಯ ಬಳಿಯ ವೈಕುಂಠ ಅತಿಥಿಗೃಹದಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗುತ್ತಿದೆ. ವಾರಾಂತ್ಯದಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದ್ದು, ಖಾಸಗಿ ಹೋಟೆಲ್‌ಗಳಾದ ಮಲ್ಲಿಗೆ, ರಾಯಲ್ ಆರ್ಕಿಡ್‌ನಲ್ಲಿ ತಂಗಲು ಏರ್ಪಾಟು ಮಾಡಲಾಗುತ್ತಿದೆ. ಟಿಎಸ್ಪಿ ಕಟ್ಟಡ ನವೀಕರಣ ಪೂರ್ಣಗೊಂಡ ತಕ್ಷಣ ಡಿಸಿ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿ, ಮತ್ತೆ ಈ ಕಟ್ಟಡವನ್ನು ಅತಿಥಿಗೃಹಕ್ಕೆ ನೀಡಲಾಗುವುದು.
    | ಅನಿರುದ್ಧ್ ಪಿ. ಶ್ರವಣ್ ಜಿಲ್ಲಾಧಿಕಾರಿ, ವಿಜಯನಗರ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts