More

    13 ರಿಂದ ಬಳ್ಳಾರಿ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆ

    ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ವಿಜಯ ಸಂಕಲ್ಪ ಯಾತ್ರೆ ಮಾ.13ರಿಂದ 15ರ ವರೆಗೆ ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಹೇಳಿದರು.

    ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಬಿಜೆಪಿಯಿಂದ ನಾಲ್ಕು ತಂಡಗಳಾಗಿ ಪ್ರಚಾರ ಮಾಡಲಾಗುತ್ತಿದೆ. ಬಳ್ಳಾರಿ ಜಿಲ್ಲೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದ ತಂಡ ಆಗಮಿಸಲಿದ್ದು, ಮೂರು ದಿನಗಳ ಕಾಲ ಸಿರಗುಪ್ಪ, ಬಳ್ಳಾರಿ ಗ್ರಾಮೀಣ ಹಾಗೂ ಸಂಡೂರು, ಬಳ್ಳಾರಿ ನಗರ ಕ್ಷೇತ್ರದಲ್ಲಿ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.

    ತಂಡದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಪ್ರಭು ಚೌವ್ಹಾಣ್, ಹಾಲಪ್ಪ ಆಚಾರ್, ಆನಂದಸಿಂಗ್, ಶಾಸಕ ಅರವಿಂದ ಲಿಂಬಾವಳಿ, ಮಾಜಿ ಚಿವ ಬಾಬುರಾವ್ ಚಿಂಚನಸೂರ್, ಮಾಲಿಕಯ್ಯ ಗುತ್ತೇದಾರ್, ಸಿದ್ಧರಾಜು, ಮಾರುತಿರಾವ್ ಮುಳೆ, ರಘುನಾಥರಾವ್ ಮಾಲ್ಕಾಪುರೆ, ಅಮರನಾಥ ಪಾಟೀಲ್, ಸಿದ್ದೇಶ್ ಯಾದವ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಕಾರ್ಯಕ್ರಮದ ವಿವರ :

    ಮಾ.13ರಂದು ಗಂಗಾವತಿಯಿಂದ ಸಿರಗುಪ್ಪಕ್ಕೆ ಸಂಕಲ್ಪಯಾತ್ರೆ ಆಗಮಿಸಲಿದ್ದು, ಸಂಜೆ 5 ಗಂಟೆಗೆ ಸಿರಗುಪ್ಪದ ನಿಟ್ಟೂರು ನರಸಿಂಹಮೂರ್ತಿ ಮೈದಾನದಲ್ಲಿ ಬೈಕ್ ರ‌್ಯಾಲಿ ಮೂಲಕ ಸ್ವಾಗತಿಸುವುದು. ಮಾ.14ರಂದು ಬೆಳಗ್ಗೆ 11 ಗಂಟೆಗೆ ಕುರುಗೋಡಿನಲ್ಲಿ ಬೈಕ್ ರ‌್ಯಾಲಿ, ದೊಡ್ಡ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ, ಮಧ್ಯಾಹ್ನ 3.30ಕ್ಕೆ ಕೊಳಗಲ್ಲು ಗ್ರಾಮದಲ್ಲಿ ರೋಡ್ ಶೋ, ಸಂಜೆ 5.30ಕ್ಕೆ ಬಳ್ಳಾರಿ ನಗರಕ್ಕೆ ಆಗಮನ, ದುರ್ಗಮ್ಮ ದೇವಸ್ಥಾನದಿಂದ ರಾಯಲ್ ವೃತ್ತ, ಮೀನಾಕ್ಷಿ ವೃತ್ತ, ಬ್ರೂಸ್‌ಪೇಟೆ ಪೊಲೀಸ್ ಠಾಣೆ, ಎಪಿಎಂಸಿ ವರೆಗೆ ರೋಡ್ ಶೋ, ಮಾ.15ರಂದು ಬೆಳಗ್ಗೆ 10 ಗಂಟೆಗೆ ಕುಡಿತಿನಿಗೆ ಭೇಟಿ, ತೋರಣಗಲ್‌ನಲ್ಲಿ ರೋಡ್ ಶೋ, ಮಧ್ಯಾಹ್ನ ಯಶವಂತನಗರದಿಂದ ವಿಜಯನಗರ ಜಿಲ್ಲೆಯ ಕೂಡ್ಲಿಗಿಗೆ ಪ್ರಯಾಣ ಬೆಳೆಸಲಿದೆ ಎಂದು ವಿವರಿಸಿದರು.

    17ರಿಂದ ವಿವಿಧ ಮೋರ್ಚಾಗಳ ಸಮಾವೇಶ

    ಬಿಜೆಪಿಯ ಮಹಿಳಾ ಮೋರ್ಚಾದಿಂದ ಮಾ.17ರಂದು ಬಳ್ಳಾರಿ ನಗರದಲ್ಲಿ ಜಿಲ್ಲಾಮಟ್ಟದ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. 19 ರಂದು ಬಳ್ಳಾರಿ ಗ್ರಾಮೀಣ ಭಾಗದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಸಮ್ಮೇಳನ ಆಯೋಜಿಸಲಾಗಿದೆ. ಮಾ.20ರಂದು ಬಳ್ಳಾರಿ ನಗರದಲ್ಲಿ ಎಸ್.ಸಿ ಮೋರ್ಚಾ ಹಾಗೂ ಸಂಡೂರಿನಲ್ಲಿ ಎಸ್.ಟಿ.ಮೋರ್ಚಾದಿಂದ ಸಮಾವೇಶ ನಡೆಯಲಿದೆ. ಮಾ.21ರಂದು ಸಿರಗುಪ್ಪದಲ್ಲಿ ರೈತ ಮೋರ್ಚಾದಿಂದ ರೈತರ ಸಮಾವೇಶ, ಕುರುಗೋಡಿನಲ್ಲಿ ಯುವಮೋರ್ಚಾದಿಂದ ಯುವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಕೆಆರ್‌ಪಿಪಿ ಅಭ್ಯರ್ಥಿ ನನಗೆ ಸ್ಪರ್ಧಿನೇ ಅಲ್ಲ

    ಬಳ್ಳಾರಿ ನಗರ ವಿಧಾನ ಸಭೆ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ಅವರನ್ನು ಘೋಷಣೆ ಮಾಡಲಾಗಿದ್ದು, ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ಕೆಆರ್‌ಪಿಪಿ ಅಭ್ಯರ್ಥಿ ನನಗೆ ಸ್ಪರ್ಧಿನೇ ಅಲ್ಲ. ಕಾಂಗ್ರೆಸ್ ನಿಂದ ಸ್ಪರ್ಧಿಸುವವರು ನನಗೆ ಸ್ಪರ್ಧಾಳು ಆಗುತ್ತಾರೆ ಎಂದರು.

    ನನಗೆ ಸಂಬಂಧವೇ ಮುಖ್ಯ ಹೊರತು ರಾಜಕೀಯ ಅಲ್ಲ. ಆದರೂ ಜನಾರ್ದನ ರೆಡ್ಡಿ ಅವರು ಅವರ ಪತ್ನಿ ಲಕ್ಷ್ಮೀ ಅರುಣಾ ಅವರನ್ನು ನನ್ನ ವಿರುದ್ಧ ಕಣಕ್ಕಿಳಿಸಿದ್ದಾರೆ. ನಮ್ಮನ್ನೆಲ್ಲ ಬಳಸಿಕೊಂಡು ಜನಾರ್ದನ ರೆಡ್ಡಿ ಬೆಳೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

    ರೆಡ್ಡಿ ಸಮ್ಮುಖದಲ್ಲೇ ಸ್ಪರ್ಧೆಗೆ ಇಂಗಿತ

    ಬುಡಾ ಮಾಜಿ ಅಧ್ಯಕ್ಷ ಕೆ.ರಾಮಲಿಂಗಪ್ಪ ಅವರು ಶಾಸಕ ಸೋಮಶೇಖರ ರೆಡ್ಡಿ ಸಮ್ಮುಖದಲ್ಲೇ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಬಲ ಆಕಾಂಕ್ಷಿ ಆಗಿದ್ದೇನೆ ಎಂದು ಇಂಗಿತ ವ್ಯಕ್ತಪಡಿಸಿದರು. ಜನಾರ್ದನರೆಡ್ಡಿ ಅವರು ನನ್ನನ್ನು ಬುಡಾ ಅಧ್ಯಕ್ಷರನ್ನಾಗಿ ಮಾಡಿ, ನಂತರ ಆ ಹುದ್ದೆಯನ್ನು ಕಸಿದುಕೊಂಡರು. ನನಗೆ ಈಗಲೂ ಬಳ್ಳಾರಿ ನಗರದಿಂದ ಟಿಕೆಟ್ ನೀಡಿದರೆ ಸ್ಪರ್ಧಿಸುವುದಾಗಿ ತಿಳಿಸಿದರು. ಅಥವಾ ಸೋಮಶೇಖರ ರೆಡ್ಡಿ ಅವರಿಗೆ ನೀಡಿದರೂ ಯಾವುದೇ ಸಮಸ್ಯೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ, ವೀರಶೇಖರ ರೆಡ್ಡಿ, ರಾಜೀವ್ ತೊಗರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts