More

    ಇಂದಿನಿಂದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ; ಕರ್ನಾಟಕ-ಪುದುಚೇರಿ ಮುಖಾಮುಖಿ 

    ಬೆಂಗಳೂರು: ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಬುಧವಾರ ಚಾಲನೆ ಸಿಗಲಿದೆ. ರಾಷ್ಟ್ರೀಯ ತಂಡದ ಪರ ಆಡಿರುವ ಸಂಜು ಸ್ಯಾಮ್ಸನ್, ಮನೀಷ್ ಪಾಂಡೆ, ಕರುಣ್ ನಾಯರ್ ದಿನೇಶ್ ಕಾರ್ತಿಕ್, ವಿಜಯ್ ಶಂಕರ್ ಸೇರಿದಂತೆ ಕೆಲ ಸ್ಟಾರ್ ಆಟಗಾರರು ಟೂರ್ನಿಯ ಕೇಂದ್ರ ಬಿಂದುವಾಗಲಿದ್ದಾರೆ. ಮುಂಬರುವ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳ ಗಮನಸೆಳೆಯಲು ಎರಡನೇ ಸ್ತರದ ಆಟಗಾರರಿಗೆ ಈ ಟೂರ್ನಿ ಉತ್ತಮ ವೇದಿಕೆಯಾಗಿದೆ. ಅಲ್ಲದೆ, ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ಆಯ್ಕೆಗೆ ಲಭ್ಯವಿರುವ ಸಂದೇಶವನ್ನು ರವಾನಿಸಬಹುದು. ಟೂರ್ನಿಯಲ್ಲಿ ಒಟ್ಟು 38 ತಂಡಗಳು ಸ್ಪರ್ಧಿಸುತ್ತಿದ್ದು, 5 ಎಲೈಟ್ ಹಾಗೂ ಒಂದು ಪ್ಲೇಟ್ ಸೇರಿದಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಕೇರಳದ ತಿರುವಂತನಪುರಂ, ಜಾರ್ಖಂಡ್‌ನ ರಾಂಚಿ, ಮುಂಬೈ, ಮೊಹಾಲಿ, ಚಂಢೀಗಢ, ರಾಜ್‌ಕೋಟ್, ಜೈಪುರದಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿವೆ.

    * ಕರ್ನಾಟಕಕ್ಕೆ ಪುದುಚೇರಿ ಎದುರಾಳಿ
    ಅನುಭವಿ ಹಾಗೂ ಸ್ಟಾರ್ ಆಟಗಾರರ ಅನುಪಸ್ಥಿತಿ ನಡುವೆಯೂ ಕಳೆದ ತಿಂಗಳು ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ 4 ಬಾರಿ ಚಾಂಪಿಯನ್ ಕರ್ನಾಟಕ ತಂಡ ಬುಧವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಪುದುಚೇರಿ ತಂಡವನ್ನು ಎದುರಿಸಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕಡೇ ಎಸೆತದಲ್ಲಿ ಸಿಕ್ಸರ್ ಬಿಟ್ಟು ಪ್ರಶಸ್ತಿ ಕೈಚೆಲ್ಲಿದ್ದ ಕರ್ನಾಟಕ ತಂಡ ಕೆಚ್ಚೆದೆಯ ನಿರ್ವಹಣೆಗೆ ಸಜ್ಜಾಗಿದೆ. ಸ್ಟಾರ್ ಹಾಗೂ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲೂ ಭರ್ಜರಿ ನಿರ್ವಹಣೆ ತೋರಲು ಯಶಸ್ವಿಯಾಗಿತ್ತು. 2019ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಕರ್ನಾಟಕ ತಂಡ, ಕಳೆದ ಆವೃತ್ತಿಯಲ್ಲಿ ಸೆಮಿೈನಲ್‌ನಲ್ಲಿ ಮುಗ್ಗರಿಸಿತ್ತು. ಇದೀಗ ಎರಡು ವರ್ಷಗಳ ಬಳಿಕ ಚಾಂಪಿಯನ್‌ಪಟ್ಟಕ್ಕೇರುವ ಕನಸಿನಲ್ಲಿದೆ.
    ಲೀಗ್ ಹಂತದಲ್ಲಿ ಪುದುಚೇರಿ ಹೊರತುಪಡಿಸಿ ಬಲಿಷ್ಠ ತಂಡಗಳಾದ ತಮಿಳುನಾಡು, ಹಾಲಿ ಚಾಂಪಿಯನ್ ಮುಂಬೈ, ಬರೋಡ ಹಾಗೂ ಬಂಗಾಳ ಎದುರಾಗಲಿವೆ. ನಾಯಕ ಮನೀಷ್ ಪಾಂಡೆ, ಅನುಭವಿ ಬ್ಯಾಟರ್‌ಗಳಾದ ಆರ್.ಸಮರ್ಥ್, ಕರುಣ್ ನಾಯರ್, ರೋಹನ್ ಕದಂ, ಸಿದ್ದಾರ್ಥ್ ಕೆವಿ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಅನುಭವಿ ವೇಗಿ ಎ.ಮಿಥುನ್ ದಿಢೀರ್ ನಿವೃತ್ತಿಯಿಂದಾಗಿ ಯುವ ಬೌಲರ್‌ಗಳೇ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಿದೆ. ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಜೆ. ಸುಚಿತ್, ಕೆಸಿ ಕಾರ್ಯಪ್ಪ ನಡುವಿನ ಆಯ್ಕೆಯೇ ನಾಯಕ ಮನೀಷ್ ಪಾಂಡೆಗೆ ತಲೆನೋವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸಮತೋಲನ ಹೊಂದಿರುವ ಕರ್ನಾಟಕ ತಂಡ 5ನೇ ಪ್ರಶಸ್ತಿಯ ಕನಸಿನಲ್ಲಿದೆ. ಮತ್ತೊಂದೆಡೆ, ದೇಶೀಯ ಕ್ರಿಕೆಟ್‌ನಲ್ಲಿ ಈಗಷ್ಟೇ ಕಣ್ಣುಬಿಡುತ್ತಿರುವ ಪುದುಚೇರಿ ತಂಡ ಬಲಿಷ್ಠ ತಂಡದ ಎದುರು ಪ್ರಬಲ ಹೋರಾಟಕ್ಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಬಲಿಷ್ಠ ತಂಡಗಳು ಎದುರಾಗುತ್ತಿದ್ದು, ಪ್ರತಿ ಹಣಾಹಣಿಯೂ ತಂಡದ ಪಾಲಿಗೆ ದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ಕರ್ನಾಟಕದ ಮಾಜಿ ಆಲ್ರೌಂಡರ್ ಪವನ್ ದೇಶಪಾಂಡೆ ಪುದುಚೇರಿ ಪರ ಕಣಕ್ಕಿಳಿಯಲಿದ್ದಾರೆ.

    ಎಲೈಟ್ ಎ ಗುಂಪು: ಆಂಧ್ರ, ಒಡಿಶಾ, ಗುಜರಾತ್, ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ವಿದರ್ಭ (ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ)
    * ಎಲೈಟ್ ಬಿ: ಕರ್ನಾಟಕ, ಮುಂಬೈ, ತಮಿಳುನಾಡು, ಬರೋಡ, ಬಂಗಾಳ, ಪುದುಚೇರಿ (ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ)
    * ಎಲೈಟ್ ಸಿ: ದೆಹಲಿ, ಜಾರ್ಖಂಡ್, ಹರಿಯಾಣ, ಹೈದರಾಬಾದ್, ಸೌರಾಷ್ಟ್ರ, ಉತ್ತರ ಪ್ರದೇಶ, (ಮೊಹಾಲಿ, ಚಂಢೀಗಡದಲ್ಲಿ ಪಂದ್ಯಗಳು ನಡೆಯಲಿವೆ)
    * ಎಲೈಟ್ ಡಿ: ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರಾಖಂಡ, ಚಂಢೀಗಡ, ಕೇರಳ (ರಾಜ್‌ಕೋಚ್‌ನಲ್ಲಿ ಪಂದ್ಯಗಳು ನಡೆಯಲಿವೆ)
    * ಎಲೈಟ್ ಇ: ಅಸ್ಸಾಂ, ಗೋವಾ, ಪಂಜಾಬ್, ರೈಲ್ವೇಸ್, ರಾಜಸ್ಥಾನ, ಸರ್ವೀಸಸ್ (ರಾಂಚಿಯಲ್ಲಿ ಪಂದ್ಯಗಳು ನಡೆಯಲಿವೆ)
    * ಪ್ಲೇಟ್ ಗುಂಪು: ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ, ಬಿಹಾರ (ಜೈಪುರದಲ್ಲಿ ಪಂದ್ಯಗಳು ನಡೆಯಲಿವೆ).

    * ಟೂರ್ನಿಯ ಮಾದರಿ
    ಎಲೈಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದ 5 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಎರಡನೇ ಸ್ಥಾನ ಪಡೆದ 5 ತಂಡಗಳು ಹಾಗೂ ಪ್ಲೇ ಗುಂಪಿನ ಅಗ್ರಸ್ಥಾನ ಪಡೆದ ತಂಡ, ಒಟ್ಟು 6 ತಂಡಗಳು ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಹೋರಾಡಲಿವೆ.

    * 5: ತಮಿಳುನಾಡು, ವಿಜಯ್ ಹಜಾರೆ ಟೂರ್ನಿಯಲ್ಲಿ ಅತಿಹೆಚ್ಚು ಬಾರಿ ಟ್ರೋಫಿ ಜಯಿಸಿರುವ ತಂಡ ಎನಿಸಿಕೊಂಡಿದೆ. ಕರ್ನಾಟಕ ಹಾಗೂ ಮುಂಬೈ ತಂಡಗಳು ತಲಾ 4 ಬಾರಿ ಈ ಸಾಧನೆ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿವೆ.

    ಕರ್ನಾಟಕದ ಪಂದ್ಯಗಳು
    ದಿನಾಂಕ, ಎದುರಾಳಿ
    ಡಿ.9, ತಮಿಳುನಾಡು
    ಡಿ.11, ಮುಂಬೈ
    ಡಿ.12, ಬರೋಡ
    ಡಿ.14, ಬಂಗಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts