More

    ಎಚ್ಚೆತ್ತ ಸರ್ಕಾರ, ಪ್ರವಾಸಿ ಬಾಡಿಗೆ ತೆರಿಗೆ ವಿನಾಯಿತಿ

    ಬೆಂಗಳೂರು: ಮೈಸೂರು ದಸರಾ ಪ್ರಯುಕ್ತ ಅನ್ಯ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರವು ಹೊರ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿ ಆದೇಶಿಸಿದೆ. ಅಕ್ಟೋಬರ್ 16ರಿಂದ ಅ.24ರ ವರೆಗೆ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
    ಮೈಸೂರು ಸೇರಿದಂತೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಕೆಆರ್‌ಎಸ್ ಜಲಾಶಯ ವೀಕ್ಷಿಸಲು ಬರುವ ಇತರೆ ರಾಜ್ಯಗಳಲ್ಲಿ ನೋಂದಾಯಿಸಲ್ಪಟ್ಟ ಆ ರಾಜ್ಯದಲ್ಲಿ ತೆರಿಗೆ ಪಾವತಿಸಿರುವ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ.
    ಪ್ರತಿ ವರ್ಷ ಮೈಸೂರು ದಸರಾ ಸಂದರ್ಭದಲ್ಲಿ ನೆರೆ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸಲು ಖಾಸಗಿ ಪ್ರವಾಸಿ ವಾಹನಗಳಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿಯನ್ನು ಈ ಸಾಲಿನಲ್ಲಿ ಮುಂದುವರಿಸುವುದು ಅನುಮಾನವಾಗಿತ್ತು. ವಿಜಯವಾಣಿ ಈ ಸಂಬಂಧ ಶನಿವಾರ ವರದಿ ಪ್ರಕಟಿಸಿತ್ತು.
    ಕೇರಳ, ತಮಿಳುನಾಡಿನಿಂದ ಮೈಸೂರು ದಸರಾ ವೀಕ್ಷಣೆಗೆಂದು ಬರುವವರಿಗಾಗಿ ಕೆಲವು ದಿನಗಳ ಮಟ್ಟಿಗೆ ಮೈಸೂರಿಗೆ ಮಾತ್ರ ಪ್ರಯಾಣಿಸಲು ಖಾಸಗಿ ಬಾಡಿಗೆ ಬಸ್, ಟೆಂಪೋ ಟ್ರಾವಲರ್, ಟ್ಯಾಕ್ಸಿಗಳಿಗೆ ತೆರಿಗೆ ವಿನಾಯಿತಿ ನೀಡುವ ಸಂಪ್ರದಾಯವಿತ್ತು. ಈ ರೀತಿ ರಿಯಾಯಿತಿ ಕೊಡುವುದರಿಂದ ಸಹಜವಾಗಿ ಈ ಭಾಗದ ಹೋಟೆಲ್, ಲಾಡ್ಜ್, ಬಟ್ಟೆ ಮಾರುಕಟ್ಟೆ, ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಾದವಿದೆ.
    ಈ ತೆರಿಗೆ ರಿಯಾಯಿತಿ ಪಡೆದುಕೊಂಡು ಪ್ರತಿ ನಿತ್ಯ 300ರಿಂದ 400 ಖಾಸಗಿ ಬಸ್‌ಗಳು ಮೈಸೂರು ಭಾಗಕ್ಕೆ ಪ್ರವಾಸಿಗರನ್ನು ಕರೆತರುತ್ತವೆ. ಟಿಟಿ, ಟ್ಯಾಕ್ಸಿ, ಇನ್ನೋವದಂತಹ ಒಂದು ಸಾವಿರಕ್ಕಿಂತ ಹೆಚ್ಚು ವಾಹನ ರಾಜ್ಯಕ್ಕೆ ಪ್ರತಿ ದಿನ ಬಂದು ಹೋಗುತ್ತವೆ ಎಂಬ ಅಂದಾಜಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts