More

    ಜೂ. 18ರಿಂದ ವಿದ್ಯುತ್ ಅದಾಲತ್: ಇಂಧನ ಇಲಾಖೆಯಿಂದ ಮತ್ತೊಂದು ಜನಪರ ಯೋಜನೆ ಜಾರಿ..

    ಬೆಂಗಳೂರು: ಗ್ರಾಮೀಣ ವಿದ್ಯುತ್ ಸಮಸ್ಯೆಗಳ ತಕ್ಷಣ ಪರಿಹಾರಕ್ಕೆ ಇಂಧನ ಇಲಾಖೆ ಮುಂದಾಗಿದ್ದು, ಪ್ರತಿ ತಿಂಗಳ ಮೂರನೇ ಶನಿವಾರ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ನಡೆಸುವ ವಿದ್ಯುತ್ ಅದಾಲತ್​ಗೆ ಜೂ. 18ರಂದು ಚಾಲನೆ ಸಿಗಲಿದೆ.

    ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮಹತ್ವಾಕಾಂಕ್ಷೆಯ ಜನಸ್ನೇಹಿ ಯೋಜನೆಗಳಲ್ಲಿ ಇದು ಒಂದಾಗಿದೆ. ಆಯಾ ತಾಲೂಕು ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರರು ಹಾಗೂ ಅಧಿಕಾರಿಗಳು ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

    ರಾಜ್ಯಾದ್ಯಂತ ನಡೆಯುವ ಈ ಅದಾಲತ್​ಗೆ ಎಲ್ಲ ಎಸ್ಕಾಂ ವ್ಯಾಪ್ತಿಯ ಸುಮಾರು 600 ಸ್ಥಳಗಳಲ್ಲಿ ಅದಾಲತ್ ಆಯೋಜಿಸಲಾಗುತ್ತದೆ. ಅಲ್ಲಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

    ಜನಸ್ನೇಹಿ ಅಭಿಯಾನ: ಸರ್ಕಾರಿ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಬೇಕು ಹಾಗೂ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂಬ ಉದ್ದೇಶದಿಂದ ಎಲ್ಲ ಇಲಾಖೆಗಳಲ್ಲೂ ಜನಸ್ನೇಹಿ ಕಾರ್ಯಕ್ರಮಗಳ ಜಾರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇಂಧನ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ. ಕಳೆದ ತಿಂಗಳು ನಡೆಸಿದ ಟ್ರಾನ್ಸಫಾರ್ಮ್ ದುರಸ್ತಿ ಅಭಿಯಾನದಲ್ಲಿ ಎರಡು ಲಕ್ಷಕ್ಕೂ ಮೇಲ್ಪಟ್ಟು ಟಿಸಿ ನಿರ್ವಹಣೆ ಮಾಡಲಾಗಿದೆ. ಈಗ ವಿದ್ಯುತ್ ಅದಾಲತ್ ಮೂಲಕ ಗ್ರಾಮೀಣ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

    ಜೂನ್ 5ರಂದೇ ಆದೇಶ: ಈ ಅದಾಲತ್ ಬಗ್ಗೆ ಜೂ. 5ರಂದೇ ಇಂಧನ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಪ್ರತಿ ತಿಂಗಳ ಮೂರನೇ ಶನಿವಾರ  ಕಾರ್ಯಪಾಲಕ ಅಭಿಯಂತರ​ ಸೇರಿದಂತೆ ಎಲ್ಲ ಅಧಿಕಾರಿಗಳು ತಾಲೂಕಿನ ಕೊನೆಯ ಹಳ್ಳಿವರೆಗೆ ಭೇಟಿ ನೀಡಬೇಕು. ವಿದ್ಯುತ್​ ಅದಾಲತ್​ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್​ ಸಮಸ್ಯೆಗಳ ಬಗ್ಗೆ ಅರಿತು, ತಕ್ಷಣ ಪರಿಹಾರ ಮಾಡಲು ಆಂದೋಲನ ರೀತಿಯ ಕಾರ್ಯಕ್ರಮ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ.

    ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರ ಮಟ್ಟದ ಅಧಿಕಾರಿಗಳಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರವರೆಗಿನ ಅಧಿಕಾರಿಗಳು ತಾಲೂಕಿನ ಕೊನೆಯ ಹಳ್ಳಿವರೆಗೆ ಹೋಗಿ, ಸಮಸ್ಯೆ ಆಲಿಸಿ, ಪರಿಹಾರ ನೀಡಬೇಕು. ಎಲ್ಲರೂ ಒಂದೇ ಹಳ್ಳಿಗೆ ಭೇಟಿ ನೀಡದೆ, ಬೇರೆ ಬೇರೆ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಆದ್ಯತೆ ಮೇರೆಗೆ ತಾಲೂಕಿನ ಗಡಿ ಭಾಗದ ಹಳ್ಳಿಗಳಿಂದ ಆರಂಭಿಸಿ, ಪ್ರತಿ ಹಳ್ಳಿಗೆ ಅಭಿಯಾನ ವಿಸ್ತರಿಸಬೇಕು ಎಂದು  ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

    ಅಭಿಯಾನದ ವಿವರಗಳನ್ನು ಪ್ರತಿ ತಿಂಗಳು ನಿಗದಿತ ನಮೂನೆಯಲ್ಲಿ ನಮೂದಿಸಿ, ಮಾಹಿತಿಯನ್ನು ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸಬೇಕು. ವ್ಯವಸ್ಥಾಪಕ ನಿರ್ದೇಶಕರು ಪ್ರತಿ ಮೂರನೇ ಸೋಮವಾರ ತಪ್ಪದೇ [email protected] ಇ-ಮೇಲ್​ ಮೂಲಕ ಸರ್ಕಾರಕ್ಕೆ ಕಳುಹಿಸಬೇಕೆಂದು ಆದೇಶಿಸಿದ್ದಾರೆ.

    ಪೊಲೀಸ್ ದಂಡ ವಿಧಿಸಿದ್ದಕ್ಕೆ ಸ್ಟೇಷನ್​ ಪವರ್​ ಕಟ್ ಮಾಡಿದ ಲೈನ್​ಮ್ಯಾನ್​; ಠಾಣೆಯಲ್ಲಿ ಮೀಟರೇ ಇರ್ಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts