More

    ರಾಜು ತಾಂಡೇಲ ಬಣಕ್ಕೆ ಜಯ

    ಕಾರವಾರ: ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಷನ್​ನ ಏಳು ನಿರ್ದೇಶಕ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹಾಲಿ ನಿರ್ದೇಶಕ ರಾಜು ತಾಂಡೇಲ ಬಣದ 6 ಸದಸ್ಯರು ಜಯಗಳಿಸಿದ್ದಾರೆ.

    ಬುಧವಾರ ಬೆಳಗಿನಿಂದ ಮತದಾನ ನಡೆದಿದ್ದು, 500 ಕ್ಕೂ ಅಧಿಕ ಜನ ಮತ ಚಲಾಯಿಸಿದರು. ಸಹಕಾರ ಸಂಘಗಳ ಉಪ ನಿಬಂಧಕಿ ಸುಜಾತಾ ಬಂಟ್ ನೇತೃತ್ವದಲ್ಲಿ ಮತ ಎಣಿಕೆ ನಡೆಸಿ ಸಾಯಂಕಾಲ ಫಲಿತಾಂಶ ಪ್ರಕಟಿಸಲಾಯಿತು.

    ಚುನಾವಣೆಯಲ್ಲಿ 2005 ರಿಂದ ಇದುವರೆಗೆ ಸತತ ಮೂರು ಅವಧಿಗೆ ಫೆಡರೇಷನ್ ಅಧ್ಯಕ್ಷರಾಗಿದ್ದ ಗಣಪತಿ ಮಾಂಗ್ರೆ ಹಾಗೂ ಅವರ ಸಹ ಸ್ಪರ್ಧಿಗಳು ಸೋಲು ಕಂಡಿದ್ದಾರೆ.

    ಒಟ್ಟು 17 ಸದಸ್ಯ ಬಲದ ಫೆಡರೇಷನ್​ನಲ್ಲಿ ಒಬ್ಬ ಕೆಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿದ್ದರೆ, ಇನ್ನೊಬ್ಬರು ಮೀನುಗಾರಿಕೆ ಇಲಾಖೆ ಅಧಿಕಾರಿ ಕಾಯಂ ನಿರ್ದೇಶಕರಾಗಿರುತ್ತಾರೆ. ಇನ್ನು 15 ಅಧಿಕಾರೇತರ ಸದಸ್ಯ ಸ್ಥಾನಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಸಲಾಗಿತ್ತು. ಅದರಲ್ಲಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ‘ಬ’ ವರ್ಗದ ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಒಬ್ಬ, ಮಹಿಳಾ ಕ್ಷೇತ್ರದಿಂದ ಇಬ್ಬರು, ಅಂಕೋಲಾ, ಹೊನ್ನಾವರ ಹಾಗೂ ಭಟ್ಕಳ ಮೀನುಗಾರರ ಸಹಕಾರಿ ಸಂಘಗಳ ಕ್ಷೇತ್ರದಿಂದ ತಲಾ ಒಬ್ಬರು ಸೇರಿ 6 ಜನ ಅವಿರೋಧವಾಗಿ ಆಯ್ಕೆಯಾಗಿದ್ದರು.

    ಬುಧವಾರ ಏಳು ಸ್ಥಾನಗಳಿಗಾಗಿ ಮತದಾನ ನಡೆದಿದ್ದು, 14 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಕ ವರ್ಗದ ಸಾಮಾನ್ಯ ಕ್ಷೇತ್ರದಿಂದ ಚಿತ್ತಾಕುಲಾದ ರಾಜು ಲೋಕಪ್ಪ ತಾಂಡೇಲ, ಬಿಣಗಾದ ವೆಂಕಟೇಶ ಈರಾ ತಾಂಡೇಲ, ಕುಮಟಾದ ಬೀರಪ್ಪಾ ಈರಾ ಹರಿಕಂತ್ರ, ಕ ವರ್ಗ ಹಿಂದುಳಿದ ವರ್ಗ ಅ ಮತ ಕ್ಷೇತ್ರದಿಂದ ಬೈತಖೋಲ್​ನ ಸುಧಾಕರ ಚಾರಾ ಹರಿಕಂತ್ರ, ಕಾರವಾರ ತಾಲೂಕಿನ ಸಹಕಾರಿ ಸಂಘಗಳ ಬ ವರ್ಗದ ಕ್ಷೇತ್ರದಿಂದ ದಿಲೀಪ ಹರಿಶ್ಚಂದ್ರ ಚಂಡೇಕರ್, ಶ್ರೀಧರ ಮಹಾಬಲೇಶ್ವರ ಹರಿಕಂತ್ರ ಹಾಗೂ ಕುಮಟಾ ತಾಲೂಕಿನ ಸಹಕಾರಿ ಸಂಘಗಳ ಬ ವರ್ಗದ ಕ್ಷೇತ್ರದಿಂದ ಮಹೇಶ ನಾರಾಯಣ ಮೂಡಂಗಿ ಜಯಗಳಿಸಿದರು.

    ನೂತನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಹಾಲಿ ನಿರ್ದೇಶಕ ರಾಜು ತಾಂಡೇಲ ಹಾಗೂ ಹಾಲಿ ಅಧ್ಯಕ್ಷ ಗಣಪತಿ ಮಾಂಗ್ರೆ ನಡುವೆ ಜಿದ್ದಿನ ಪೈಪೋಟಿ ಇತ್ತು. ಇದರಿಂದ ಡಿವೈಎಸ್​ಪಿ ಅರವಿಂದ ಕಲಗುಜ್ಜಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಚುನಾವಣೆ ಶೀಘ್ರದಲ್ಲೇ ನಡೆಯಬೇಕಿದೆ.

    ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಷನ್ ನಿರ್ದೇಶಕರ ಚುನಾವಣೆಯಲ್ಲಿ ನಾನು ಹಾಗೂ ನಮ್ಮ ಬೆಂಬಲಿಗರು ಗೆದ್ದಿರುವುದು ಸಂತಸ ತಂದಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಎಲ್ಲರ ಸಹಕಾರದಲ್ಲಿ ಫೆಡರೇಷನ್ ಅನ್ನು ಇನ್ನಷ್ಟು ಬೆಳೆಸಲಿದ್ದೇನೆ.

    ರಾಜು ತಾಂಡೇಲ, ಫೆಡರೇಷನ್ ನಿರ್ದೇಶಕ

    ಸೋಲು ಗೆಲುವು ಸಾಮಾನ್ಯ. ಉತ್ತರ ಕನ್ನಡ ಸಹಕಾರ ಮೀನು ಮಾರಾಟ ಫೆಡರೇಷನ್ ಅನ್ನು ಇಷ್ಟು ವರ್ಷ ಕಟ್ಟಿ ಬೆಳೆಸಿದ್ದೇನೆ. ಇನ್ನು ಮುಂದೆಯೂ ಸಲಹೆ, ಸಹಕಾರ ನೀಡಲಿದ್ದೇನೆ.

    ಗಣಪತಿ ಮಾಂಗ್ರೆ, ಫಿಶರೀಸ್ ಫೆಡರೇಷನ್ ಮಾಜಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts