More

    ಎಲ್ಲ ಆರೋಪಿಗಳ ಬಂಧನಕ್ಕೆ ಆಗ್ರಹ

    ಶೃಂಗೇರಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಟ್ಟಣ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್, ವಿವಿಧ ಸಂಘಟನೆಗಳು ಪ್ರತ್ಯೇಕ ಪ್ರತಿಭಟನೆ ನಡೆಸಿದವು.

    ಶುಕ್ರವಾರ ಪಟ್ಟಣ ಠಾಣೆ ಎದುರು ತಾಲೂಕು ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಆರೋಪಿಗಳನ್ನು ಬಿಜೆಪಿ ರಕ್ಷಿಸುತ್ತಿದೆ. ಬೇಟಿ ಪಡಾವೋ ಬೇಟಿ ಬಜಾವೋ ಎಂಬ ಎಂದು ಬಿಜೆಪಿ ಸರ್ಕಾರ ಮಾಡಿದ ಯೋಜನೆ ಪ್ರಚಾರಕ್ಕೆ ಸೀಮಿತವಾಗಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ ಎಂದು ಆರೋಪಿಸಿದರು.

    ಬಿಜೆಪಿ ಉತ್ತಮವಾಗಿ ಆಡಳಿತ ನಡೆಸುವುದಾದರೆ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು. ಜತೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

    ತನಿಖೆ ನ್ಯಾಯಯುತವಾಗಿ ನಡೆಯದಿದ್ದಲ್ಲಿ ರಾಜ್ಯಪಾಲರ ಭವನ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಪ್ರಕರಣದ ಕುರಿತು ಮೌನವಾಗಿದ್ದಾರೆ. ಹಾಗಾಗಿ ಸಂಸದೆ ಮತ್ತು ಜೀವರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, ಡಿ.ಎನ್.ಜೀವರಾಜ್ ಬೆಂಬಲಿಗರು ಇಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ತಂದ ಕಾರಣ ಅತ್ಯಾಚಾರ ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆ. ಎಲ್ಲ ವಿಚಾರಕ್ಕೆ ಪ್ರತಿಕ್ರಿಯೆ ನೀಡುವ ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ ಲೇವಡಿ ಮಾಡಿದರು.

    ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್​ಕುಮಾರ್ ಮುರೊಳ್ಳಿ ಮಾತನಾಡಿ, ಶೃಂಗೇರಿ ಪೊಲೀಸ್ ಠಾಣೆ ಬಿಜೆಪಿ ಕಚೇರಿಯಾಗಿದೆ. ಗುಪ್ತಚರ ಇಲಾಖೆ ತನ್ನ ವ್ಯಕ್ತಿತ್ವ, ಅಸ್ತಿತ್ವ ಹಾಗೂ ಘನತೆ ಕಳೆದುಕೊಂಡಿದೆ. ಮಹಿಳಾ ಕಲ್ಯಾಣ ಇಲಾಖೆ ಬಾಲಕಿ ಮೇಲೆ ದೌರ್ಜನ್ಯದ ಕುರಿತು ದೂರು ಸಲ್ಲಿಸಿದ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಠಾಣೆಯಲ್ಲಿ ಪ್ರಕರಣ ಮುಚ್ಚಿಹಾಕಲು ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.

    ಎಐಸಿಸಿ ಕಾರ್ಯದರ್ಶಿ ಸಂದೀಪ್, ಕಾಂಗ್ರೆಸ್ ಮುಖಂಡರಾದ ರೇಖಾ ಹುಲಿಯಪ್ಪ ಗೌಡ, ಪುಷ್ಪಾ ರಾಜೇಗೌಡ, ವನಮಾಲಾ, ಎಚ್.ಎಂ.ಸತೀಶ್, ಕೆ.ಆರ್.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೂಡಿಗೆ ನಟರಾಜ್, ತಾಲೂಕು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಕೀಲಾ ಗುಂಡಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts