More

    ಶ್ರೀಗಂಧ ಬೆಳೆದರೆ ಆರ್ಥಿಕ ಲಾಭ: ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್ ಸಲಹೆ

    ಮಂಡ್ಯ: ಮಂಡ್ಯದ ರೈತರು ಭತ್ತ ಕಬ್ಬು ಬೆಳೆದು ಶ್ರೀಮಂತರಾಗಿರೋದು ಬಹಳ ಕಡಿಮೆ. ಆದ್ದರಿಂದ ಶ್ರೀಗಂಧ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಿ ಎಂದು ನಿವೃತ್ತ ಐಎಎಸ್ ಅಧಿಕಾರಿಯೂ ಆದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘದ ಅಧ್ಯಕ್ಷ ಅಮರನಾರಾಯಣ್ ಸಲಹೆ ನೀಡಿದರು. ರೈತರಿಗೆ ಸಲಹೆ ನೀಡಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘ, ಬೆಂಗಳೂರು ಮತ್ತು ಒಐಎಸ್‌ಸಿಎ ಇಂಟರ್ ನ್ಯಾಷನಲ್ ಕರ್ನಾಟಕ ವಲಯದ ಸಹಯೋಗದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಆತ್ಮ ಯೋಜನೆಯಡಿ ಶ್ರೀಗಂಧ, ವನಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು ತರಬೇತಿ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
    ಮಂಡ್ಯದಲ್ಲಿ ಶೇ.51ರಷ್ಟು ಭಾಗ ನೀರಾವರಿ ಜಮೀನು ಇದೆ. ಅಂತೆಯೇ 42 ಸಾವಿರ ಹೆಕ್ಟೇರ್ ಖುಷ್ಕಿ ಭೂಮಿ ಇದೆ. ರೈತರು ನೀರಾವರಿ ಇಲ್ಲದ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆ ಬೆಳೆದು ಆರ್ಥಿಕವಾಗಿ ಲಾಭ ಪಡೆದುಕೊಳ್ಳಬಹುದು. ಮೈಸೂರಿನ ಮಹಾರಾಜರು ಹೆಚ್ಚಾಗಿ ಸಿಗುತ್ತಿದ್ದ ಶ್ರೀಗಂಧ ಬೆಳೆಯನ್ನು ಕಂಡು ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ ಕಾರ್ಖಾನೆಗೆ ಬುನಾದಿ ಹಾಕಿದರು. ಅದರ ಪರಿಣಾಮ ಇಂದು ದೇಶ ವಿದೇಶದೆಲ್ಲೆಲ್ಲ ಶ್ರೀಗಂಧದ ಬೆಳೆ ಹೆಚ್ಚಾಗಿದೆ. ಇಡೀ ಭಾರತದಲ್ಲೇ ಕರ್ನಾಟಕ ಶೇ.71ರಷ್ಟು ಶ್ರೀಗಂಧ ಪೂರೈಸುತ್ತಿದೆ. ಈ ನಿಟ್ಟಿನಲ್ಲಿ ರೈತರು ಬೆಳೆಯ ಬಗ್ಗೆ ತಿಳಿದುಕೊಂಡು ಬೆಳೆಯಬೇಕಿದೆ ಎಂದರು.
    ನಮ್ಮ ಸಂಘ ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಸಂಚರಿಸಿ ಬೆಳೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸರ್ಕಾರ ಶ್ರೀಗಂಧ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸಬೇಕು. ಅಂತೆಯೇ ಇದನ್ನು ಪರಿಣಾಮಕಾರಿಯಾಗಿಸಲು ತೋಟಗಾರಿಕೆ ಇಲಾಖೆಯಿಂದ ಸಾಲ, ವಿಮೆ ಹಾಗೂ ಇನ್ನಿತರೆ ಸೌಲಭ್ಯ ಸಿಗುವಂತೆ ಮಾಡಬೇಕು. ಶ್ರೀಗಂಧದ ಕೃಷಿಯಲ್ಲಿ ಅತಿಥಿ ಸಸ್ಯ ಉಪಯೋಗಿಸುವ ಗೊಬ್ಬರ, ಗಿಡಗಳ ನಡುವೆ ಅಂತರ, ರೋಗ ನಿಗ್ರಾಹ ಕುರಿತಂತೆ ರೈತರಿಗೆ ಮಾಹಿತಿ ಕೈಪಿಡಿ ಒದಗಿಸಬೇಕು ಎಂದರು.
    ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಪ್ರಗತಿಪರ ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಧಾನ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆ ಕುರಿತ ಯಶೋಗಾಥೆಗಳನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳಿ. ರೈತರಿಗೆ ಹೆಚ್ಚು ಕಾರ್ಯಾಗಾರಗಳನ್ನು ಆಯೋಜಿಸಿ ಕೃಷಿಯಲ್ಲಿ ಖುದ್ದು ತಮ್ಮ ಅನುಭವ, ತೊಂದರೆಗಳು ಮತ್ತು ಸುಧಾರಣೆ ಅಂಶಗಳನ್ನು ಹಂಚಿಕೊಳ್ಳುವಂತಾಗಬೇಕು. ಇಲ್ಲಿ ಮೂಡುವ ಅಭಿಪ್ರಾಯಗಳು ಸರ್ಕಾರದ ಹಂತಕ್ಕೆ ತಲುಪಿದರೆ ರೈತರ ಪರವಾಗಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಗ್ರಾಮೀಣ ಭಾಗದಲ್ಲಿ ಮನರೇಗಾ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ 1200 ಆಟದ ಮೈದಾನ ನಿರ್ಮಾಣ ಕೆಲಸ ಕೈಗೊಳ್ಳಲಾಗುತ್ತಿದೆ. ಸಶ್ಮಾನದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಎಂ.ಬಾಬು, ಸಂಜೀವಪ್ಪ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ, ವಿಷಯ ತಜ್ಞೆ ಕೆ.ಪಿ.ಸುಚಿತ್ರಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts