More

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಂತ ಹಿರಿಯ ಪ್ರಚಾರಕರಲ್ಲಿ ಒಬ್ಬರಾದ ಕೇರಳದ ಪಿ.ಪರಮೇಶ್ವರನ್ ಅಸ್ತಂಗತ

    ಕೊಚ್ಚಿ: ರಾಷ್ಟ್ರೀಯ ಸ್ವಯಂ ಸೇವಕಸಂಘ(ಆರೆಸ್ಸೆಸ್​)ದ ಅತ್ಯಂತ ಹಿರಿಯ ಪ್ರಚಾರಕರಲ್ಲಿ ಒಬ್ಬರಾಗಿದ್ದ ಪಿ.ಪರಮೇಶ್ವರನ್​(91) ಭಾನುವಾರ ನಸುಕಿನಲ್ಲಿ ಅಸ್ತಂಗತರಾಗಿದ್ದಾರೆ.
    ಭಾರತೀಯ ವಿಚಾರ ಕೇಂದ್ರಮ್​ನ ಸಂಸ್ಥಾಪಕ ನಿರ್ದೇಶಕರಾಗಿದ್ದ ಅವರು, ಪಾಲಕ್ಕಾಡಿನ ಒಟ್ಟಪಾಲಂನಲ್ಲಿ ವಯೋಸಹಜ ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ನಸುಕಿನ 12.10ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆರೆಸ್ಸೆಸ್​ ಮೂಲಗಳು ತಿಳಿಸಿವೆ.

    ಪರಮೇಶ್ವರನ್​ ಅವರು ಜನಸಂಘದಲ್ಲಿ ಇದ್ದಾಗ ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್​.ಕೆ.ಆಡ್ವಾಣಿ ಮುಂತಾದವರೊಂದಿಗೆ ರಾಷ್ಟ್ರ ಸೇವೆ ಮಾಡಿದ್ದರು. ಸಂಘ ಪರಿವಾರ ಮತ್ತು ಭಾರತೀಯ ಜನತಾ ಪಾರ್ಟಿ ವಲಯದಲ್ಲಿ ಪ್ರೀತಿಯಿಂದ ಪರಮೇಶ್ವರ್ ಜೀ ಎಂದೇ ಗೌರವಿಸಲ್ಪಡುತ್ತಿದ್ದವರು. ಅವರು 1967-71ರ ತನಕ ಭಾರತೀಯ ಜನಸಂಘದ ಕಾರ್ಯದರ್ಶಿ, 1971-77ರ ತನಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಂತರ 1977-82ರ ತನಕ ದೀನ್​ದಯಾಳ್ ರೀಸರ್ಚ್​ ಇನ್​ಸ್ಟಿಟ್ಯೂಟ್​ನ ನಿರ್ದೇಶಕರಾಗಿ ದೆಹಲಿಯಲ್ಲಿ ಕೆಲಸ ಮಾಡಿದ್ದರು. 1982 ರಲ್ಲಿ ಭಾರತೀಯ ವಿಚಾರ ಕೇಂದ್ರಮ್ ಸ್ಥಾಪಿಸಿದ ಅವರು, ಅದರ ಮೂಲಕ ಕೇರಳೀಯರಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದ್ದರು. ಆಲಪ್ಪುಳ ಜಿಲ್ಲೆಯ ಮುಹಮ್ಮಾ ಎಂಬಲ್ಲಿ 1927ರಲ್ಲಿ ಅವರು ಜನಿಸಿದರು. ವಿದ್ಯಾರ್ಥಿ ದಿನಗಳಿಂದಲೇ ಆರೆಸ್ಸೆಸ್​ ಕಾರ್ಯಕರ್ತರಾಗಿದ್ದವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 16 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು ಕೂಡ. ಅವರು 2004ರಲ್ಲಿ ಪದ್ಮಶ್ರೀ, 2014ರಲ್ಲಿ ಪದ್ಮವಿಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದರು.

    ಅವರ ಅಂತ್ಯ ಸಂಸ್ಕಾರ ಹುಟ್ಟೂರು ಮುಹಮ್ಮಾದಲ್ಲೇ ಸಂಜೆ ನಡೆಯಲಿದ್ದು, ಅದಕ್ಕೂ ಮೊದಲು ಕೊಚ್ಚಿಯಲ್ಲಿರುವ ಆರಸ್ಸೆಸ್​ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ ಎಂದು ಸಂಘದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts