More

    ಕೋಮು ಆಧಾರದಲ್ಲಿ ತಂಡ ಆಯ್ಕೆ, ನಿರ್ಗಮನ ಕೋಚ್​ ವಾಸಿಂ ಜಾಫರ್ ವಿರುದ್ಧ ಉತ್ತರಾಖಂಡ ಆರೋಪ

    ಮುಂಬೈ: ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಇತ್ತೀಚೆಗೆ ತಂಡ ಆಯ್ಕೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಸ್ತಕ್ಷೇಪವಿದೆ ಎಂದು ದೂರಿ ಉತ್ತರಾಖಂಡ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ, ಮುಂಬೈ ಮಾಜಿ ಆಟಗಾರ ವಾಸಿಂ ಜಾಫರ್ ಮತೀಯ ಆಧಾರದಲ್ಲಿ ತಂಡದ ಆಯ್ಕೆ ನಡೆಸುತ್ತಿದ್ದರು ಮತ್ತು ಡ್ರೆಸ್ಸಿಂಗ್ ರೂಂಗೆ ಮೌಲ್ವಿಯನ್ನು ಕರೆಸಿ ನಮಾಜ್ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ 42 ವರ್ಷದ ವಾಸಿಂ ಜಾಫರ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

    ವಾಸಿಂ ಜಾಫರ್ ತಂಡದಲ್ಲಿ ಧರ್ಮದ ಆಧಾರದಲ್ಲಿ ಪಕ್ಷಪಾತ ಮಾಡುತ್ತಿದ್ದರು. ತಮ್ಮದೇ ಕೋಮಿನ ಇಕ್ಬಾಲ್ ಅಬ್ದುಲ್ಲಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿದ್ದರು. ತಂಡದ ಶಿಬಿರಕ್ಕೆ ಮೌಲ್ವಿಗಳನ್ನು ಕರೆತರುತ್ತಿದ್ದರು. ಬಳಿಕ ಜತೆಯಾಗಿ ನಜಾಮ್ ಮಾಡುತ್ತಿದ್ದರು. ಉತ್ತರಾಖಂಡ ತಂಡ ಈ ಹಿಂದೆ ‘ರಾಮ್ ಭಕ್ತ್ ಹನುಮಾನ್ ಕೀ ಜೈ’ ಎಂಬ ಘೋಷವಾಕ್ಯವನ್ನು ಹೊಂದಿತ್ತು. ಜಾಫರ್ ಅದನ್ನು ‘ಗೋ ಉತ್ತರಾಖಂಡ್’ ಎಂದು ಬದಲಾಯಿಸಿದ್ದರು. ‘ಉತ್ತರಾಖಂಡ್ ಕೀ ಜೈ’ ಎಂಬುದನ್ನು ಸೂಚಿಸಿದ್ದರೂ, ಅವರು ‘ಜೈ’ ಎಂಬ ಪದಕ್ಕೆ ಆಕ್ಷೇಪ ಎತ್ತಿದ್ದರು ಎಂದು ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮಹೀಮ್ ವರ್ಮ ಆರೋಪಿಸಿದ್ದಾರೆ.

    ಇದನ್ನೂ ಓದಿ: ಭಾರತ ತಂಡ 2ನೇ ಟೆಸ್ಟ್‌ನಲ್ಲೂ ಸೋತರೆ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ!?

    ಆದರೆ ವಾಸಿಂ ಜಾಫರ್ ಈ ಆರೋಪವನ್ನು ನಿರಾಕರಿಸಿದ್ದು, ತನ್ನ ಪದತ್ಯಾಗಕ್ಕೆ ಕೋಮು ಬಣ್ಣ ಹಚ್ಚಿದ್ದು ಬೇಸರ ತಂದಿದೆ ಎಂದಿದ್ದಾರೆ. ಇಕ್ಬಾಲ್ ಅಬ್ದುಲ್ಲಾರನ್ನು ನಾಯಕರಾಗಿಸಿದ್ದು ನನ್ನ ಆಯ್ಕೆಯಾಗಿರಲಿಲ್ಲ. ಆಯ್ಕೆಗಾರ ರಿಜ್ವಾನ್ ಶಂಶಡ್ ಹೆಸರು ಸೂಚಿಸಿದ್ದರು. ಐಪಿಎಲ್ ಆಡಿದ ಅನುಭವ ಹೊಂದಿದ್ದ ಕಾರಣ ಇಕ್ಬಾಲ್ ಅಬ್ದುಲ್ಲಾ ಆಯ್ಕೆಯನ್ನು ಒಪ್ಪಿದ್ದೆ. ತಂಡದ ಶಿಬಿರಕ್ಕೆ ಮೌಲ್ವಿಯನ್ನು ನಾನು ಕರೆತಂದಿರಲಿಲ್ಲ. ಅಲ್ಲದೆ ಅಭ್ಯಾಸದ ಬಳಿಕ ನಮಾಜ್ ಮಾಡಿದ್ದೆವು. ಇದನ್ನು ವಿವಾದವಾಗಿಸುವ ಅಗತ್ಯವಿಲ್ಲ. ನಾನು ಕೋಮುವಾದಿ ಆಗಿದ್ದರೆ, ತಂಡದ ಅಭ್ಯಾಸದ ಸಮಯವನ್ನೇ ಬದಲಿಸಬಹುದಿತ್ತು ಎಂದು ಜಾಫರ್ ಸ್ಪಷ್ಟನೆ ನೀಡಿದ್ದಾರೆ.

    ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಆರೋಪದ ಪ್ರಕಾರ, ಕುನಾಲ್ ಚಂಡೆಲಾ ಅವರನ್ನು ಕಡೆಗಣಿಸಿ ಇಕ್ಬಾಲ್ ಅಬ್ದುಲ್ಲಾರನ್ನು ನಾಯಕರನ್ನಾಗಿ ಆರಿಸಲಾಗಿತ್ತು. ಆದರೆ ಇಕ್ಬಾಲ್ ಅಬ್ದುಲ್ಲಾ ಸಾರಥ್ಯದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರಾಖಂಡ ತಂಡ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿತ್ತು. ಹೀಗಾಗಿ ಮುಂಬರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಕುನಾಲ್ ಚಂಡೆಲಾರನ್ನೇ ನಾಯಕರನ್ನಾಗಿ ಆರಿಸಲಾಗಿದೆ. ಇದರ ಬೆನ್ನಲ್ಲೇ ವಾಸಿಂ ಜಾಫರ್ ರಾಜೀನಾಮೆ ಸಲ್ಲಿಸಿದ್ದಾರೆ.

    ಇದಲ್ಲದೆ ಪಂದ್ಯಗಳಲ್ಲಿ ಕುನಾಲ್ ಚಂಡೆಲಾ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದರೂ, ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗುತ್ತಿತ್ತು. ಇಕ್ಬಾಲ್ ಅಬ್ದುಲ್ಲಾಗಿಂತಲೂ ಕೆಳಗಿನ ಕ್ರಮಾಂಕದಲ್ಲಿ ಚಂಡೆಲಾ ಕೆಲ ಪಂದ್ಯಗಳನ್ನು ಆಡಿದ್ದರು ಎಂದು ಮಹೀಮ್ ವರ್ಮ ಆರೋಪಿಸಿದ್ದಾರೆ. 2020ರ ಜೂನ್‌ನಲ್ಲಿ ವಾಸಿಂ ಜಾಫರ್ ಉತ್ತರಾಖಂಡ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು.

    ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts