More

    ವೆಂಕಟಗಿರಿ ಆಸ್ಪತ್ರೆಗೆ ಅಂದ ತಂದ ಇಕೋ ಪಾರ್ಕ್: ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ

    ಗಂಗಾವತಿ: ತಾಲೂಕಿನ ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಖಾತರಿ ಯೋಜನೆಯಡಿ ಇಕೋ ಪಾರ್ಕ್ ನಿರ್ಮಾಣವಾಗಿದ್ದು, ಸಾರ್ವಜನಿಕರ ಗಮನಸೆಳೆಯುತ್ತಿದೆ.

    ವೆಂಕಟಗಿರಿ ಹೋಬಳಿ ವ್ಯಾಪ್ತಿಯ 10ಕ್ಕೂ ಹೆಚ್ಚು ಗ್ರಾಮಗಳಿಗೆ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದ್ದು, ನಿರ್ವಹಣೆ ಕೊರತೆಯಿಂದ ಆವರಣ ವಿಷ ಜಂತುಗಳ ತಾಣವಾಗಿತ್ತು. ವೈದ್ಯ ಮತ್ತು ವೈದ್ಯಕೇತರ ಸಿಬ್ಬಂದಿ ಸೇವೆ ಬಗ್ಗೆ ಜನರಿಗೆ ತೃಪ್ತಿಯಿದ್ದರೂ ಸ್ವಚ್ಛತೆ ಮತ್ತು ವ್ಯವಸ್ಥೆ ಕೊರತೆ ಬಗ್ಗೆ ಬೇಸರವಿತ್ತು.ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ಪರಣ್ಣ ಮುನವಳ್ಳಿ ಮತ್ತು ತಾಲೂಕು ವೈದ್ಯಾಧಿಕಾರಿಗಳು ಆವರಣದ ಅಭಿವೃದ್ಧಿ ಕುರಿತು ಭರವಸೆ ನೀಡಿದ್ದರು. ಅದರಂತೆ ಗ್ರಾಪಂ ಆಸಕ್ತಿವಹಿಸಿ ನರೇಗಾ ಯೋಜನೆಯಡಿ ಇಕೋಪಾರ್ಕ್ ನಿರ್ಮಿಸಿದ್ದು, ಇತರ ಪಂಚಾಯಿತಿಗಳಿಗೂ ಮಾದರಿಯಾಗಿದೆ.

    14 ಲಕ್ಷ ರೂ. ವೆಚ್ಚ: ಸರ್ಕಾರಿ ಶಾಲೆ ಮತ್ತು ಕ್ರೀಡಾ ಮೈದಾನಕ್ಕೆ ಮೀಸಲಿಟ್ಟಿದ್ದ ನರೇಗಾ ಯೋಜನೆಯನ್ನು ತಾಲೂಕಿನಲ್ಲಿ ಮೊದಲ ಬಾರಿಗೆ ಪಿಎಚ್‌ಸಿಗೆ ಬಳಸಿಕೊಳ್ಳಲಾಗಿದೆ. 2022-23ನೇ ಸಾಲಿನ ನರೇಗಾ ಯೋಜನೆಯಡಿ 14 ಲಕ್ಷ ರೂ. ವೆಚ್ಚದಲ್ಲಿ ಇಕೋ ಪಾರ್ಕ್ ಸಿದ್ಧಗೊಂಡಿದ್ದು, 1322 ಮಾನವದಿನಗಳನ್ನು ಸೃಜಿಸಲಾಗಿದೆ. ವಿವಿಧ ಬಗೆಯ ಔಷಧೀಯ ಸಸಿಗಳನ್ನು ಹಾಕಿದ್ದು, ಹುಲ್ಲು ಬೆಳೆಸಲಾಗಿದೆ. ಸ್ಪಿಂಕ್ಲರ್ ಮೂಲಕ ಸಸಿಗಳಿಗೆ ನೀರುಣಿಸಲಾಗುತ್ತಿದೆ. ಸಾರ್ವಜನಿಕರ ಸಂಚಾರಕ್ಕೆ ಪೇವರ್ಸ್‌ ಟ್ರ್ಯಾಕ್ಸ್ ನಿರ್ಮಿಸಿದ್ದು, ಗಣೇಶ ಮಂದಿರ ಅಲಂಕೃತಗೊಳಿಸಲಾಗಿದೆ. ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾತ್ರಕ್ಕೆ ಕೇಂದ್ರ ಸೀಮಿತಗೊಳ್ಳದೆ, ನೆಮ್ಮದಿ ತಾಣವನ್ನಾಗಿ ಪರಿವರ್ತಿಸಲಾಗಿದೆ.

    ರೋಗಿಗಳು ಮತ್ತು ಸಹಾಯಕರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ವೆಂಕಟಗಿರಿ ಆಸ್ಪತ್ರೆ ಆವರಣದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಸ್ವಚ್ಛತೆಯತ್ತ ಗ್ರಾಮಸ್ಥರು ಗಮನಹರಿಸಬೇಕು.
    | ಮಹಾಂತಗೌಡ ಪಾಟೀಲ್, ತಾಪಂ ಇಒ, ಗಂಗಾವತಿ

    ಆಸ್ಪತ್ರೆಯಲ್ಲಿ ಹಲವು ವರ್ಷದಿಂದ ಖಾಲಿ ಜಾಗವಿತ್ತು. ಇಕೋ ಪಾರ್ಕ್ ನಿರ್ಮಾಣದಿಂದ ಸ್ವಚ್ಛಂದ ವಾತಾವರಣ ನಿರ್ಮಿಸಿದಂತಾಗಿದೆ. ಇದರಿಂದ ರೋಗಿಗಳು, ಸಂಬಂಧಿಕರು, ಸಿಬ್ಬಂದಿ ವಿಶ್ರಾಂತಿ ಪಡೆಯಲು ಅನುಕೂಲವಾಗಿದೆ. ತಾಪಂ ಮತ್ತು ಗ್ರಾಪಂ ಸಹಕಾರದಿಂದ ಆಸ್ಪತ್ರೆ ಸೌಂದರ್ಯ ಹೆಚ್ಚಿದೆ.
    | ಡಾ.ಅಂಜುಮ್‌ತಾಜ್, ವೈದ್ಯಾಧಿಕಾರಿ, ಪಿಎಚ್‌ಸಿ, ವೆಂಕಟಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts