ನವದೆಹಲಿ: ಗಡಿಯಲ್ಲಿ ಭಾರತ-ಚೀನಾ ಸಂಘರ್ಷ ಉಲ್ಬಣವಾದಾಗಿನಿಂದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಇದೀಗ ಮತ್ತೊಮ್ಮೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ದೂಷಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗಡಿ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಅದು ಬಿಟ್ಟು ದೇಶದೊಳಗೆ ಕಾಂಗ್ರೆಸ್ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.
ಈ ಬಾರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ. ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರ, ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾವನ್ನು ಟಾರ್ಗೆಟ್ ಮಾಡುವುದು ಬಿಟ್ಟು ಕಾಂಗ್ರೆಸ್ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಅಹ್ಮದ್ ಪಟೇಲ್ ಅವರಿಗೆ ನಿರಂತರವಾಗಿ ಕಿರುಕುಳ ಮಾಡುತ್ತ, ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಮನೀಶ್ ತಿವಾರಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೇ ರಾಹುಲ್ ಗಾಂಧಿಯವರೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣದ ಆರೋಪ ಹೊರೆಸಿದ್ದರು.