More

    ಇನ್ಶುರೆನ್ಸ್​ ಇಲ್ಲದ ಗಾಡಿ ಓಡಿಸಿ ಅಪಘಾತ ಮಾಡಿಕೊಂಡ್ರಾ? ಇನ್ನು ಸೀಜ್​ ಆದ ವಾಹನ ಬಿಡಿಸಿಕೊಳ್ಳಬಹುದು

    ಬೆಂಗಳೂರು: ನೀವು ಇನ್ಶುರೆನ್ಸ್​ ಇಲ್ಲದ ವಾಹನ ಓಡಿಸಿ ಅಪಘಾತ ಮಾಡಿಕೊಂಡಿದ್ರೆ ಇದೊಂದು ಗುಡ್​ ನ್ಯೂಸ್​. ನಿಮ್ಮ ವಾಹನ ಸೀಜ್​ ಆಗಲೇ ಬೇಕು ಎಂದಿಲ್ಲ.

    ಈ ಹಿಂದೆ ಅಪಘಾತ ನಡೆದಿದ್ದ ವಾಹನಕ್ಕೆ ಇನ್ಶುರೆನ್ಸ್ ಇಲ್ಲದ ಕಾರಣ ವಾಹನ ರಿಲೀಸ್ ಮಾಡದಂತೆ ಸೆಷನ್ಸ್ ಕೋರ್ಟ್ ತೀರ್ಪು‌ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಹೈಕೋರ್ಟ್, ವಾಹನಕ್ಕೆ ಇನ್ಶುರೆನ್ಸ್ ಇಲ್ಲದಿದ್ರೂ ವಾಹನ ರಿಲೀಸ್ ಮಾಡುವಂತೆ ಆದೇಶಿಸಿದೆ. ಈ ಮೂಲಕ ಹೈಕೋರ್ಟ್ ರಾಮನಗರ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನ ರದ್ದುಗೊಳಿಸಿದೆ.

    ಇನ್ನು ಮುಂದೆ ಇನ್ಶುರೆನ್ಸ್ ಇಲ್ಲದೇ ಇರೋ ವಾಹನಗಳನ್ನೂ ರಿಲೀಸ್ ಮಾಡಲು ಅವಕಾಶ ನೀಡಬೇಕು ಎಂದು ಹೈಕೋರ್ಟ್​ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಷರತ್ತು ಹಾಕಿ ವಾಹನ ರಿಲೀಸ್ ಮಾಡಬಹುದು ಎಂದಿದೆ.

    ಪ್ರಕರಣವೇನು?
    ಅರ್ಜಿದಾರರ ಮಾಲೀಕತ್ವದ ಐಚರ್ ಕ್ಯಾಂಟರ್ ವಾಹನ 2021ರ ಜ.22ರಂದು ಮೈಸೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಕೆಟ್ಟು ಹೋಗಿತ್ತು. ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೆಕ್ಯಾನಿಕ್‌ಗಾಗಿ ಕಾಯುತ್ತಿದ್ದ. ಈ ವೇಳೆ, ಬೆಂಗಳೂರಿನಿಂದ ಮೈಸೂರಿಗೆ ಮಾರುತಿ ಸುಜುಕಿ ಬ್ರೆಜಾ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅತಿವೇಗವಾಗಿ ಬಂದು ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದರು. ಕಾರ್‌ನ ಮುಂಭಾಗ ಜಖಂಗೊಂಡು, ಒಳಗಿದ್ದ ವ್ಯಕ್ತಿಗೆ ಗಾಯವಾಗಿತ್ತು.

    ಪ್ರಕರಣ ದಾಖಲಿಸಿಕೊಂಡಿದ್ದ ಬಿಡದಿ ಪೊಲೀಸರು ಎರಡೂ ವಾಹನಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು. ಕಾರು ಚಾಲಕ ತನ್ನ ತಪ್ಪು ಒಪ್ಪಿಕೊಂಡು, ದಂಡವನ್ನೂ ಪಾವತಿಸಿದ್ದ. ಈ ನಡುವೆ ಅರ್ಜಿದಾರರ ತಮ್ಮ ವಾಹನ ಬಿಡಗಡೆಗೆ ಕೋರಿ ರಾಮನಗರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರರು ತಮ್ಮ ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂದು ತಿಳಿಸಿ, ವಾಹನ ಬಿಡುಗಡೆಗೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

    ಹೈಕೋರ್ಟ್ ಆದೇಶದಲ್ಲೇನಿದೆ?
    ಅಪಘಾತ ನಡೆದ ಸಂದರ್ಭದಲ್ಲಿ ಅರ್ಜಿದಾರರ ವಾಹನಕ್ಕೆ ವಿಮೆ ಇರಲಿಲ್ಲ ಎನ್ನುವುದು ಸತ್ಯವಾದರೂ, ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವ ವ್ಯಕ್ತಿಗಳ ಹಿತದೃಷ್ಟಿಯಿಂದ ಅವರು ಪರಿಹಾರ ಕೋರಲು ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 232ಜಿ ಗೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ, ಅಪಘಾತದಲ್ಲಿ ಭಾಗಿಯಾದ ವಾಹನಗಳನ್ನು ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರೇ ಸಂತ್ರಸ್ತರಾಗಿದ್ದಾರೆ. ಘಟನೆಗೆ ಕಾರಣವಾದ ಕಾರ್‌ನ ಮಾಲೀಕ ಈಗಾಗಲೇ ತಪ್ಪು ಒಪ್ಪಿಕೊಂಡು, ಶಿಕ್ಷೆಗೆ ಗುರಿಯಾಗಿದ್ದು, ಅರ್ಜಿದಾರರಿಂದ ಯಾವುದೇ ಪರಿಹಾರ ವಸೂಲಿ ಮಾಡುವ ಅಗತ್ಯವಿಲ್ಲ. ಹೀಗಿರುವಾಗ, ಕೇವಲ ವಿಮೆ ಮಾಡಿಸಿಲ್ಲ ಎಂಬ ಕಾರಣಕ್ಕೆ ವಾಹನ ಬಿಡುಗಡೆ ಮಾಡಲು ನಿರಾಕರಿಸಲಾಗದು. ಕೋರ್ಟ್‌ಗಳು ಯಾವುದೇ ಷರತ್ತುಗಳನ್ನು ವಿಧಿಸಿ, ವಾಹನ ಬಿಡುಗಡೆಗೆ ಆದೇಶಿಸಬಹುದು ಎಂದು ಸೆಕ್ಷನ್ 232ಜಿ ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ, ಅರ್ಜಿದಾರರಿಗೆ ಅಗತ್ಯ ಷರತ್ತುಗಳನ್ನು ವಿಧಿಸಿ ವಾಹನ ಬಿಡುಗಡೆ ಮಾಡಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts