More

    ಬುಕ್ಕಾಪಟ್ಟಣದ ರಸ್ತೆಗಳಾಗಿವೆ ಒಕ್ಕಣೆ ಕಣ

    ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ವಿವಿಧೆಡೆ ರಸ್ತೆಯಲ್ಲಿ ರಾಗಿ ಹುಲ್ಲು, ಹುರುಳಿ ಹುಲ್ಲು, ತೊಗರಿ, ನವಣೆ, ಸಜ್ಜೆ ಹೀಗೆ ವಿವಿಧ ಧಾನ್ಯಗಳ ಬೆಳೆಗಳನ್ನು ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರು ತೊಂದರೆ ಅನುಭವಸುತ್ತಿದ್ದಾರೆ.

    ಈ ಹಿಂದೆಲ್ಲ ಹೊಲದಲ್ಲಿಯೇ ಕಣ ನಿರ್ಮಿಸಿ ಒಕ್ಕಣೆ ಮಾಡಲಾಗುತ್ತಿತ್ತು, ಆದರೆ ಇತ್ತೀಚೆಗೆ ರೈತರು ಕಣ ನಿರ್ಮಾಣ ಮಾಡುವುದನ್ನು ಬಿಟ್ಟು ರಸ್ತೆಗಳಿಗೆ ಧಾನ್ಯಗಳನ್ನು ಸುರಿದು ಒಕ್ಕಣೆ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ರೈತರು ಯಂತ್ರಗಳ ಮೋರೆ ಹೋಗುತ್ತಿದ್ದಾರೆ.

    ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸವಾರರು ಸರ್ಕಸ್ ಮಾಡಿಕೊಂಡು ಹೋಗಬೇಕಿದ್ದು, ಹುಣಸೇಕಟ್ಟೆ, ಕುರುಬರಹಳ್ಳಿ, ಗಾಣದಹುಣಸೆ, ರಾಮಲಿಂಗಪುರ, ಮಾದೇನಹಳ್ಳಿ, ಸೋಲಾಪುರ ಹೊಸಪಾಳ್ಯ ಸೇರಿ ವಿವಿಧಡೆ ರಸ್ತೆಯನ್ನೇ ಕಣವನ್ನಾಗಿ ಪರಿವರ್ತಿಸಿಕೊಂಡಿರುವುದು ಕಂಡುಬಂದಿದೆ. ಕಳೆದ ವಾರ ಓಮ್ನಿ ಕಾರಿನ ಸೈಲೆನ್ಸರ್‌ಗೆ ಹುಲ್ಲುಸುತ್ತಿಕೊಂಡಿದ್ದರಿಂದ ಬೆಂಕಿ ಹತ್ತಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಕಳೆದ ವರ್ಷ ತಿಪಟೂರು ಬಸ್ ಕೂಡಾ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಹೆಚ್ಚಾಗಿ ಶಾಲಾ ವಾಹನ, ಮಕ್ಕಳು ಶಾಲೆಗೆ ಸೈಕಲ್‌ಗಳಲ್ಲಿ ಬರುವುದರಿಂದ ಅಪಾಯಕಟ್ಟಿಟ್ಟ ಬುತ್ತಿಯಾಗಿದೆ. ಇನ್ನು ಬೈಕ್ ಸವಾರರೂ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

    ರೈತರು ರಸ್ತೆಯನ್ನೇ ಕಣ ಮಾಡಿಕೊಂಡಿದ್ದು, ಹಲವು ಬಾರಿ ವಾಹನದ ಚಕ್ರಕ್ಕೆ ಹುಲ್ಲು ಸುತ್ತಿಕೊಂಡು ತೊಂದರೆಯಾಗಿತ್ತು. ಈ ಬಗ್ಗೆ ಹಲವು ಬಾರಿ ರೈತರಿಗೆ ರಸ್ತೆಯಲ್ಲಿ ಹುಲ್ಲು ಸುರಿಯದಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
    ಮಂಜುನಾಥ್,ಶಾಲಾ ವಾಹನ ಡ್ರೈವರ್ ಹುಣಸೇಕಟ್ಟೆ

    ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದು, ರಸ್ತೆಯಲ್ಲಿ ಹುಲ್ಲು ಸುರಿದ ರೈತರಿಗೆ ನೋಟಿಸ್ ನೀಡಿಲಾಗಿದೆ. ಇನ್ನು ಮುಂದೆ ಇದು ಹೀಗೆ ಮುಂದುವರಿದರೆ ಅಂತರವರ ವಿರುದ್ಧ ಕೇಸ್ ದಾಖಲಿಸಲಾಗುವುದು.
    ಜಗನ್ನಾಥ್, ಮುಖ್ಯಪೇದೆ ಬುಕ್ಕಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts