More

    ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾಗಿರಲಿ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಜಿಲ್ ತಂತ್ರಾಂಶದಲ್ಲಿ ಬರುವ ದೂರುಗಳನ್ನು ತಕ್ಷಣವೇ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಜತೆಗೆ, ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ಸಮರ್ಪಕವಾಗಿ ತಪಾಸಣೆ ನಡೆಸುವಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವೀಕ್ಷಕರಾದ ಗಾಯತ್ರಿ ರಾಥೋರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ನಗರದ ಮಲ್ಲೇಶ್ವರದ ಐಪಿಪಿ ತರಬೇತಿ ಕೇಂದ್ರದಲ್ಲಿ ಶನಿವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆಯಾಗದಂತೆ ಲೋಕಸಭಾ ಚುನಾವಣೆಯು ಸುಗಮವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆಗಳಿಲ್ಲದ ಹಣ, ಮಾದಕದ್ರವ್ಯ, ಮದ್ಯ ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.

    ಮನೆ ಬಾಗಿಲಿಗೆ ಮತದಾರರ ಗುರುತಿನ ಚೀಟಿ:

    ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರ ಮನೆಗೆ ಮತದಾರರ ಗುರುತಿನ ಚೀಟಿ, ಮತದಾನದ ಕೈಪಿಡಿ ಹಾಗೂ ಸ್ಟಿಕ್ಕರ್ ಗಳನ್ನು ವಿತರಣೆ ಮಾಡುವ ಕಾರ್ಯ ನಡೆಯುತ್ತಿದೆ. ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 2125 ಮತಗಟ್ಟೆಗಳಿದ್ದು, ಸಹಾಯಕ ಚುನಾವಣಾಧಿಕಾರಿಗಳು ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿದ್ದಾರೆ ಎಂದರು.

    ಈ ವೇಳೆ ಎಂಸಿಎಂಸಿ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್, ಪೊಲೀಸ್ ವೀಕ್ಷಕ ಡಾ. ತ್ರಿವಿಕ್ರಮ್ ವರ್ಮ, ಪೊಲೀಸ್ ನೋಡಲ್ ಅಧಿಕಾರಿ ಕುಲ್ದೀಪ್ ಜೈನ್, ಚುನಾವಣಾ ವೆಚ್ಚ ವೀಕ್ಷಕ ಶರವಣನ್, ಅಫಕ್ ಅಹ್ಮದ್ ಗಿರಿ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts