More

    ತರಕಾರಿ ಹರಾಜು ಸಂಜೆ ಬದಲು ಬೆಳಗ್ಗೆ

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ತರಕಾರಿ ಹರಾಜು ಪ್ರಕಿಯೆಯನ್ನು ಬೆಳಗಿನ ವೇಳೆ ಮಾಡಬೇಕು ಎಂಬ ರೈತರ ಮತ್ತು ವ್ಯಾಪಾರಸ್ಥರ ಬೇಡಿಕೆಗೆ ಎಪಿಎಂಸಿ ಸ್ಪಂದಿಸಿದ್ದರಿಂದ ಮಂಗಳವಾರದಿಂದ ಎಪಿಎಂಸಿ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಹರಾಜು ಪ್ರಕ್ರಿಯೆ ನಡೆಯಿತು.

    ಕರೊನಾ ಹಿನ್ನೆಲೆಯಲ್ಲಿ ಜನಸಂದಣಿ ತಡೆಗಟ್ಟುವ ನಿಟ್ಟಿನಲ್ಲಿ ತರಕಾರಿ ಹರಾಜು ಮಾರುಕಟ್ಟೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸುವುದರ ಜತೆಗೆ ಹರಾಜು ಪ್ರಕ್ರಿಯೆಯನ್ನು ಸಂಜೆಗೆ ನಿಗದಿಪಡಿಸಲಾಗಿತ್ತು. ಇದರಿಂದ ಪಟ್ಟಣದ ಮಾರುಕಟ್ಟೆಗೆ ಬರುವ ಬೇರೆ ಊರಿನ ವ್ಯಾಪಾರಸ್ಥರಿಗೆ, ರೈತರಿಗೆ ಸಾಕಷ್ಟು ತೊಂದರೆ ಮತ್ತು ಹಾನಿ ಉಂಟಾಗುತ್ತಿತ್ತು. ಜನರಿಗೂ ಗುಣಮಟ್ಟದ ತರಕಾರಿ ಸಿಗದಂತಾಗಿತ್ತು ಈ ಎಲ್ಲ ಸಮಸ್ಯೆಗೆ ಪರಿಹಾರವೆಂಬಂತೆ ಬೆಳಗ್ಗೆ ತರಕಾರಿ ಹರಾಜು ಪ್ರಕ್ರಿಯೆಗೆ ಅವಕಾಶ ಕಲ್ಪಿಸಬೇಕು ಎಂಬುದು ಎಲ್ಲರ ಒತ್ತಾಸೆಯಾಗಿತ್ತು. ಅಲ್ಲದೆ, ಹುಬ್ಬಳ್ಳಿ, ಹಾವೇರಿ, ಸವಣೂರು, ಗದಗನಲ್ಲಿ ಬೆಳಗ್ಗೆ ತರಕಾರಿ ಹರಾಜು ನಡೆಯುತ್ತಿದೆ. ನಮ್ಮಲ್ಲಿಯೂ ದೇ ಮಾದರಿ ಅನುಸರಿಸಬೇಕು ಎಂದು ತಾಲೂಕಾಡಳಿತ ಮತ್ತು ಎಪಿಎಂಸಿಗೆ ಮನವಿ ಸಲ್ಲಿಸಿದ್ದರು.

    ರೈತರ ಅನುಕೂಲಕ್ಕಾಗಿ ಬೆಳಗ್ಗೆ ತರಕಾರಿ ಹರಾಜು ನಡೆಸಲು ಅನುಮತಿ ನೀಡಲಾಗಿದೆ. ಇನ್ನು ನಿತ್ಯ ತರಕಾರಿ ಹರಾಜು ಪ್ರಕ್ರಿಯೆ ಎಪಿಎಂಸಿ ಪ್ರಾಂಗಣದಲ್ಲಿ ನಡೆಸಲಾಗುತ್ತದೆ. ಯಾವುದೇ ವ್ಯಾಪಾರಸ್ಥರು ಸಂಜೆ ವೇಳೆಯಲ್ಲಿ ಹರಾಜು ನಡೆಸಬಾರದು ಮತ್ತು ಕರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಎನ್.ಎ. ಲಕ್ಕುಂಡಿ ಹೇಳಿದರು.

    ರೈತರ ಭಾವನೆಗಳಿಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಬೆಳಗ್ಗೆ ವೇಳೆಯಲ್ಲಿ ಹರಾಜು ಪ್ರಕ್ರಿಯೆ ಪ್ರಾರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರೈತರಿಗೆ ಉತ್ತಮ ಬೆಲೆ ದೊರಕಿದರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಂತೆ ಆಗುತ್ತದೆ, ಅದರ ಜೊತೆಗೆ ತರಕಾರಿ ಹರಾಜು ಸ್ಥಳದಲ್ಲಿ ರೈತರಿಗೆ ವ್ಯಾಪಾರಸ್ಥರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವತ್ತ ಎಪಿಎಂಸಿಯವರು ಗಮನ ಹರಿಸಬೇಕು.
    | ಮಹೇಶ ಹೊಗೆಸೊಪ್ಪಿನ, ಪಕ್ಷಾತೀತ ರೈತ ಪರ ಹೋರಾಟ ವೇದಿಕೆ ತಾಲೂಕು ಅಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts