More

    ತರಕಾರಿಗೆ ಹಳ್ಳಿಯೇ ಆಧಾರ!

    ರಾಮದುರ್ಗ: ದೇಶದಲ್ಲಿ ಕರೊನಾ ಭೀತಿ ಹಾಗೂ ಲಾಕ್‌ಡೌನ್‌ನಿಂದ ಬಹುತೇಕ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಸೂಕ್ತ ಬೆಲೆ ದೊರೆಯದ್ದರಿಂದ ಹಣ್ಣು ಮತ್ತು ತರಕಾರಿಯನ್ನು ಹೊಲದಲ್ಲೇ ನಾಶಪಡಿಸುತ್ತಿದ್ದಾರೆ. ಆದರೆ, ರಾಮದುರ್ಗ ತಾಲೂಕಿನ ನೂರಾರು ರೈತರು ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಹಳ್ಳಿಗಳಲ್ಲಿ ಸಂಚರಿಸಿ ಮನೆ ಮನೆಗೆ ಮಾರಾಟ ಮಾಡುತ್ತಿದ್ದಾರೆ.

    ನೇರವಾಗಿ ತಲುಪಿಸಲು ಮುಂದಡಿ: ಲಾಕ್‌ಡೌನ್‌ನಿಂದ ಕೈಕಟ್ಟಿ ಕುಳಿತುಕೊಳ್ಳದ ರಾಮದುರ್ಗ ತಾಲೂಕಿನ ರೈತರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಗ್ರಾಮೀಣ ಭಾಗದಲ್ಲಿ ಫಸಲು ಮಾರಾಟ ಮಾಡಿ ಆದಾಯ ಕಂಡುಕೊಳ್ಳುತ್ತಿದ್ದಾರೆ. ಸರ್ಕಾರ ಏಕಾಏಕಿ ಲಾಕ್‌ಡೌನ್ ಆದೇಶ ಹೊರಡಿಸಿತು. ಆದರೆ, ರಾಮದುರ್ಗ ತಾಲೂಕಿನ ರೈತರು ಎದೆಗುಂದದೆ ಸಮೀಪದ ತೋಟಗಾರಿಕೆ ಇಲಾಖೆ ಕಚೇರಿ ಭೇಟಿ ನೀಡಿ ಅಧಿಕಾರಿಗಳಿಂದ ಸಲಹೆ, ಸೂಚನೆ ಪಡೆದರು. ಬಳಿಕ ವಿವಿಧ ಗ್ರಾಮಗಳ ಚಿಲ್ಲರೆ ವ್ಯಾಪಾರಸ್ಥರು, ಗ್ರಾಹಕರಿಗೆ ನೇರವಾಗಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಿದ ರೈತರು ಈಗ ನಿವ್ವಳ ಆದಾಯ ಪಡೆಯಲಾರಂಭಿಸಿದ್ದಾರೆ.

    ರೈತರಿಗೆ ಅಧಿಕಾರಿಗಳು ಆಸರೆ: ರಾಮದುರ್ಗ ತಾಲೂಕಿನ ರೈತರು ಕರೊನಾ ಭೀತಿ ಹಾಗೂ ಲಾಕ್‌ಡೌನ್‌ನಿಂದ ಕೃಷಿ ಉತ್ಪನ್ನ ಸಾಗಣೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದಾಗ ಅಧಿಕಾರಿಗಳ ಮಾರ್ಗದರ್ಶನದಿಂದ ತಾಲೂಕಿನ ವಿವಿಧ ಹಳ್ಳಿಗಳಲ್ಲೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ವೆಚ್ಚವಾದರೂ ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ದೂರದ ಮಾರುಕಟ್ಟೆಗೆ ಸಾಗಣೆ ಮಾಡಿದ ಹಣ್ಣು ಮತ್ತು ತರಕಾರಿಗಳನ್ನು ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು. ಕಟಾವು ಹಾಗೂ ಸಾಗಣೆ ಮಾಡಿದ ಖರ್ಚು ಕೂಡ ನೀಗುತ್ತಿರಲಿಲ್ಲ. ಏಕಾಏಕಿ ಮಾರುಕಟ್ಟೆ ಸ್ಥಗಿತಗೊಂಡಾಗ ನಾವು ಪರ್ಯಾಯ ದಾರಿ ಬಗ್ಗೆ ಚಿಂತಿಸದಿದ್ದರೆ ಹೊಲದಲ್ಲೇ ಹಣ್ಣು, ತರಕಾರಿ ಕೊಳೆಯುತ್ತಿತ್ತು. ಆದರೆ, ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಣ್ಣು-ಹಂಪಲು, ತರಕಾರಿ ಮಾರಾಟ ಮಾಡುವ ಮೂಲಕ ಲಾಕ್‌ಡೌನ್ ನಡುವೆಯೂ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ರಾಮದುರ್ಗ ತಾಲೂಕಿನ ಹಲವು ತೋಟಗಾರಿಕೆ ಬೆಳೆಗಾರರು.

    ರೈತರು ಮಾರುಕಟ್ಟೆ ಬಂದ್ ಆಗಿದೆ, ಸೂಕ್ತ ದರ ಸಿಗುತ್ತಿಲ್ಲವೆಂದು ಕಷ್ಟಪಟ್ಟು ಬೆಳೆದ ಹಣ್ಣು ಮತ್ತು ತರಕಾರಿಯನ್ನು ಹೊಲದಲ್ಲೇ ನಾಶಪಡಿಸುವ ಬದಲು ಸ್ಥಳೀಯವಾಗಿ ಮಾರಾಟಕ್ಕೆ ಪರ್ಯಾಯ ದಾರಿ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಮದುರ್ಗ ತಾಲೂಕಿನ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ.
    | ಪ್ರಕಾಶ ಭೀ. ಮುಗಳಖೋಡ ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ, ರಾಮದುರ್ಗ

    ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಪಡೆದು ಲಾಕ್‌ಡೌನ್ ನಡುವೆಯೂ ಎರಡು ಎಕರೆಯಲ್ಲಿ ಬೆಳೆದ 40 ಟನ್ ಕಲ್ಲಂಗಡಿ ಹಣ್ಣು ಮನೆ ಮನೆಗೆ ತೆರಳಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದೇನೆ.
    | ಚಂದ್ರಕಾಂತ ಹಕಾಟಿ ಮುದೇನೂರ ಗ್ರಾಮದ ರೈತ

    | ಡಾ.ರೇವಣಸಿದ್ಧಪ್ಪ ಕುಳ್ಳೂರ ರಾಮದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts