More

    ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿ

    ಹುಕ್ಕೇರಿ: ರೈತರು ಬೆಳೆದ ತರಕಾರಿಯನ್ನು ಜನರಿಗೆ ತಲುಪಿಸಲು ಅವಕಾಶ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮ ಕೈಗೊಳ್ಳುವಂತೆ ಶಾಸಕ ಉಮೇಶ ಕತ್ತಿ ತಿಳಿಸಿದರು.

    ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಾ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.

    ರೋಗ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮದ ಅವಶ್ಯಕತೆ ಇದೆ. ಹಾಗಂತಾ ಜನರಿಗೆ ಜೀವನಾವಶ್ಯಕ ಸಾಮಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ನಮ್ಮದಾಗಿದೆ. ಅದಕ್ಕಾಗಿ ರೈತರು ತರಕಾರಿ ಮಾರಾಟ ಮಾಡಲು ಅನುಸರಿಸಬೇಕಾದ ನಿಯಮ ತಿಳಿಸಿಕೊಡುವಂತೆ ಸೂಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಹೆಚ್ಚಾಗಿದೆ. ಅದನ್ನು ನಿಯಂತ್ರಿಸುವಂತೆ ಅಬಕಾರಿ ಇಲಾಖೆಗೆ ಆದೇಶ ನೀಡಿದರು. ವಾರ್ಡ್ ವ್ಯಾಪ್ತಿಯಲ್ಲಿ ತಳ್ಳುವ ಗಾಡಿಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಟಂ-ಟಂ ವಾಹನಗಳ ಮೂಲಕ ನಿತ್ಯ ಬಳಕೆ ವಸ್ತುಗಳನ್ನು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಯಮಕನಮರಡಿ ಭಾಗದ ಗುಡ್ಡಗಾಡು ಪ್ರದೇಶದ ಜನರಿಗೆ ಆಹಾರ ಸಾಮಗ್ರಿ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಪಟ್ಟಣಗಳಲ್ಲಿರುವ ಹೋಟೆಲ್ ಪ್ರಾರಂಭಿಸಿ ಜನರಿಗೆ ಸಿದ್ಧ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮ ಹಾಗೂ ಸೋಂಕಿತರು ಸ್ವಯಂ ಗೃಹಬಂಧನ ಕೈಗೊಂಡಿದ್ದಾರೆ ಎಂಬುದನ್ನು ಪರೀಕ್ಷಿಸಲು ಶಿಕ್ಷಕರು ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳುವಂತೆ ತಿಳಿಸಿದರು.

    ವಾರಕ್ಕೊಮ್ಮೆ ಟಾಸ್ಕ್‌ಫೋರ್ಸ್ ಸಭೆ ನಡೆಸಿ ಜನರಲ್ಲಿರುವ ಭಯ ಹೋಗಲಾಡಿಸುವುದರ ಜತೆಗೆ ರೋಗ ನಿಯಂತ್ರಿಸಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ಶಾಸಕರು ತಿಳಿಸಿದರು.

    ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ ಮಾತನಾಡಿ, ವಿದೇಶಗಳಿಂದ 47 ಜನ ಮತ್ತು ಹೊರ ರಾಜ್ಯಗಳಿಂದ 2030 ಜನ ಹುಕ್ಕೇರಿ ತಾಲೂಕಿಗೆ ಆಗಮಿಸಿದ್ದಾರೆ. ಇವರಲ್ಲಿ 15 ಜನ 28 ದಿವಸಗಳ ಮತ್ತು 25 ಜನ 14 ದಿನಗಳ ನಿಗಾ ಅವಧಿ ಮುಗಿಸಿದ್ದಾರೆ. ತಾಲೂಕಿನಲ್ಲಿ ಯಾವ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದರು.

    ತಾಲೂಕು ಪಂಚಾಯಿತಿ ಅಧ್ಯಕ್ಷ ದಸ್ತಗೀರ ಬಸ್ಸಾಪುರೆ, ತಹಸೀಲ್ದಾರ್ ಅಶೋಕ ಗುರಾಣಿ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ತಾಪಂ ಇಒ ಮಹಾದೇವ ಬಿರಾದಾರಪಾಟೀಲ ಹಾಗೂ
    ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಇದ್ದರು.

    ಪೊಲೀಸ್ ಇಲಾಖೆ ರೋಗ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮ ಸಮರ್ಥನೀಯವಾಗಿದೆ. ಆದರೆ, ವಯಸ್ಸಾದವರು, ಹೆಣ್ಣು ಮಕ್ಕಳನ್ನು ಹೊರತು ಪಡಿಸಿ ಅನವಶ್ಯಕವಾಗಿ ತಿರುಗಾಡುವ ಯುವಕರನ್ನು ನಿಯಂತ್ರಿಸಲು ದಂಡ ಪ್ರಯೋಗಿಸಿ.
    | ಉಮೇಶ ಕತ್ತಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts