More

    ತರಕಾರಿ, ದಿನಸಿ ಬೆಲೆ ಗಗನಕ್ಕೆ

    ರಾಣೆಬೆನ್ನೂರ: ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಇತ್ತ ತರಕಾರಿ, ದಿನಸಿ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಲಾಕ್​ಡೌನ್​ನಿಂದ ಚೇತರಿಸಿಕೊಳ್ಳುತ್ತಿರುವ ಜನತೆಗೆ ದಿನಸಿ ಪದಾರ್ಥ, ತರಕಾರಿ ಬೆಲೆ ಏರಿಕೆಯಾಗಿರುವುದು ದೊಡ್ಡ ಬರೆ ಹಾಕಿದಂತಾಗಿದೆ.

    ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಬೀನ್ಸ್ 60 ರೂ., ಕ್ಯಾರೆಟ್ 40 ರೂ., ಟೊಮ್ಯಾಟೊ 30 ರೂ., ಹಿರೇಕಾಯಿ 50 ರೂ., ಹಸಿ ಮೆಣಸಿನಕಾಯಿ 50 ರೂ., ಉಳ್ಳಾಗಡ್ಡಿ 60 ರೂ., ಬೀಟ್​ರೂಟ್ 60 ರೂ., ಬದನೆಕಾಯಿ 50 ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ಲಾಕ್​ಡೌನ್ ಹಾಗೂ ಅದಕ್ಕಿಂತಲೂ ಮುಂಚೆ ಇದೇ ತರಕಾರಿ ಬೆಲೆ ಅರ್ಧದಷ್ಟು ಕಡಿಮೆಯಿತ್ತು.

    ಸಾಗಾಟ ವೆಚ್ಚ ಹೆಚ್ಚಳ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದ ಕಾರಣ ವಸ್ತುಗಳ ಸಾಗಾಟ ವೆಚ್ಚವೂ ಏರಿಕೆಯಾಗಿದೆ. ಇದರ ಪರಿಣಾಮ ದಿನಸಿ ಪದಾರ್ಥಗಳ ಮೇಲೆ ಬೀಳುತ್ತಿದೆ. ಹೀಗಾಗಿ ಅನಿವಾರ್ಯ ಎಂಬಂತೆ ದಿನಸಿ ಪದಾರ್ಥಗಳ ಬೆಲೆಯೂ ಅಧಿಕವಾಗಿದೆ. ಅಡುಗೆ ಎಣ್ಣೆ 1 ಕೆ.ಜಿ.ಗೆ 100 ರೂ.ಯಿಂದ 140 ರೂ.ವರೆಗೆ ಏರಿಕೆಯಾಗಿದೆ. ಕಡಲೆಬೇಳೆ 80 ರೂ.ಯಿಂದ 100 ರೂ.ವರೆಗೆ ಏರಿಕೆಯಾಗಿದೆ. ಅದರಂತೆ ಹಲವು ಪದಾರ್ಥಗಳ ದರವೂ ಏರಿಕೆ ಕಂಡಿದೆ.

    ರೈತ, ವರ್ತಕರಿಗೂ ತೊಂದರೆ: ಗ್ರಾಮೀಣ ಭಾಗದ ರೈತರಿಗೆ ತೈಲ ಬೆಲೆ ಏರಿಕೆ ಸದ್ಯ ತಲೆಬಿಸಿಯಾಗಿ ಕಾಡುತ್ತಿದೆ. ತರಕಾರಿ ಸೇರಿ ತಮ್ಮ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಗಳಿಗೆ ಸಾಗಾಟ ಮಾಡಬೇಕೆಂದರೆ ಕನಿಷ್ಠ 100 ರೂ.ಯಿಂದ 300 ರೂ.ವರೆಗೆ ಹೆಚ್ಚಿನ ಹಣ ನೀಡಬೇಕು. ಗೋಧಿ, ಅಕ್ಕಿ ಮತ್ತಿತರ ವಸ್ತುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಿದ್ದು, ಕೆಲ ರಾಜ್ಯಗಳಿಂದ 15 ಸಾವಿರ ರೂ. ಬಾಡಿಗೆ ಪಡೆಯುವ ವಾಹನಗಳು ಇಂದು 30 ಸಾವಿರ ಕೇಳುತ್ತಿದ್ದಾರೆ. ಇದರಿಂದಾಗಿ ತರಕಾರಿ ಸೇರಿ ಇತರ ವಸ್ತುಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂಬುದು ರೈತರ ಹಾಗೂ ವರ್ತಕರ ಅಭಿಪ್ರಾಯವಾಗಿದೆ.

    ಮಾರುಕಟ್ಟೆಯಲ್ಲಿ ಪ್ರತಿ ವಸ್ತುವಿನ ದರ ಏರಿಕೆಯಾಗಿದೆ. ವಿತರಕರಿಂದ ಖರೀದಿ ಮಾಡುವಾಗ ಸಾರಿಗೆ ನೆಪವೊಡ್ಡಿ ಪ್ರತಿ ವಸ್ತುಗಳ ಮೇಲೆ ಹೆಚ್ಚಿಗೆ ಹಣ ಪಡೆಯಲಾಗುತ್ತಿದೆ. ಈ ಹಿನ್ನೆಲೆ ಗ್ರಾಹಕರಿಗೆ ವಸ್ತುಗಳ ದರ ಏರಿಕೆ ಮಾಡಲಾಗಿದ್ದು, ಜನತೆ ಬೆಲೆ ಏರಿಕೆಗೆ ಸುಸ್ತಾಗಿ ಹೋಗಿದ್ದಾರೆ.

    ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ ತೆಗೆದುಕೊಂಡರೂ ಪ್ರತಿ ಕೆ.ಜಿ.ಗೆ 50 ರೂ. ಮೇಲ್ಪಟ್ಟ ಬೆಲೆಯಿದೆ. ಇಷ್ಟೊಂದು ಬೆಲೆ ಏಕೆ ಅಂತಾ ಕೇಳಿದರೆ ಎಲ್ಲ ವ್ಯಾಪಾಸ್ಥರು ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆಗಿದೆ. ನಾವೇನು ಮಾಡಬೇಕು ಎಂದು ಹೇಳುತ್ತಿದ್ದಾರೆ. ಹೀಗಾದರೆ ಸಾಮಾನ್ಯ ಜನತೆ ನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಲಿದೆ.
    | ಮಹೇಶ ಎಸ್.ಎಚ್., ಗ್ರಾಹಕ


    ತರಕಾರಿ ಸೇರಿ ಯಾವುದೇ ವಸ್ತುಗಳನ್ನು ಮಾರುಕಟ್ಟೆಗೆ ತರಲು ವಾಹನದವರು ದುಪ್ಪಟ್ಟು ಬಾಡಿಗೆ ಕೇಳುತ್ತಿದ್ದಾರೆ. ಆದ್ದರಿಂದ ತರಕಾರಿ ವಾಹನಕ್ಕೆ ನೀಡಿದ ಬಾಡಿಗೆ ಸರಿದೂಗಿಸಲು ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ಅಲ್ಲದೆ, ಬೇಸಿಗೆ ಆರಂಭವಾದ ಮೇಲೆ ನೀರಾವರಿ ಕೃಷಿಯ ಬೆಳೆಯೇ ಹೆಚ್ಚಾಗಿ ಮಾರುಕಟ್ಟೆಗೆ ಬರಲಿದೆ. ಹೀಗಾಗಿ ಬೆಲೆ ಹೆಚ್ಚಳ ಸಾಮಾನ್ಯವಾಗಲಿದೆ.
    | ಶಂಕ್ರಪ್ಪ ಮೆಣಸಿನಹಾಳ, ತರಕಾರಿ ವ್ಯಾಪಾರಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts