| ರವಿ ಗೋಸಾವಿ ಬೆಳಗಾವಿ
ವಿಶ್ವವ್ಯಾಪಿ ಹಬ್ಬುತ್ತಿರುವ ಕರೊನಾ ವೈರಸ್‌ನಿಂದಾಗಿ ರಾಜ್ಯದ ಕುಕ್ಕುಟೋದ್ಯಮ ಪಾತಾಳಕ್ಕಿಳಿದ ಬೆನ್ನಲ್ಲೇ ರೈತರು ಬೆಳೆದ ತೋಟಗಾರಿಕೆ ಹಾಗೂ ಇತರ ಬೆಳೆಗಳಿಗೆ ಕರೊನಾ ಬಿಸಿ ತಟ್ಟಿದೆ. ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ರಫ್ತಾಗುತ್ತಿದ್ದ ತರಕಾರಿ ಇದೀಗ ಎಪಿಎಂಸಿಯಲ್ಲಿಯೇ ಕೊಳೆಯುವಂತಾಗಿದೆ.
ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶಕ್ಕೆ ಪ್ರತಿ ದಿನ 600 ಟನ್‌ಗಿಂತಲೂ ಅಧಿಕ ತರಕಾರಿ ರಫ್ತು ಮಾಡುತ್ತಿದ್ದ ಬೆಳಗಾವಿ ಎಪಿಎಂಸಿ, ಕಳೆದೆರಡು ದಿಗಳಿಂದ ವಹಿವಾಟಿಲ್ಲದೆ ಸ್ತಬ್ಧಗೊಂಡಿದೆ.
ಖರೀದಿಗೆ ಹಿಂದೇಟು: ರೈತರು ಲಾರಿಯಲ್ಲಿ ತಂದಿರುವ ನೂರಾರು ಟನ್ ಮೆಣಸಿನಕಾಯಿ, ಕ್ಯಾಪ್ಸಿಕಮ್, ಬದನೆಕಾಯಿ, ಸೌತೆಕಾಯಿ, ಹೂಕೋಸು, ಎಲೆಕೋಸು ಹಾಗೂ ಕೊತ್ತಂಬರಿ ಸೊಪ್ಪು ಸೇರಿ ಹಲವು ಬಗೆಯ ತರಕಾರಿ ನೂರಾರು ಟನ್‌ಗಟ್ಟಲೆ ಸಂಗ್ರಹವಾಗಿದೆ. ಬೇಡಿಕೆ ಇಲ್ಲದೆ ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳು ಅವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಎಂದಿನಂತೆ ಬೇಡಿಕೆ ಇರಲಿದೆ ಎಂದು ನೂರಾರು ರೈತರು ತಾವು ಬೆಳೆದ ಕ್ಯಾಪ್ಸಿಕಮ್, ಮೆಣಸಿನಕಾಯಿ, ಹೂಕೋಸು ಹಾಗೂ ಕೊತ್ತಂಬರಿ ಸೊಪ್ಪು ಕೊಯ್ಲು ಮಾಡಿ ಮಾರಾಟಕ್ಕಾಗಿ ಅವುಗಳನ್ನು ಇಲ್ಲಿನ ಎಪಿಎಂಸಿಗೆ ತಂದಿದ್ದಾರೆ. ಆದರೆ, ಎರಡು ದಿನಗಳಾದರೂ ಕನಿಷ್ಠ ಬೆಲೆಯನ್ನಾದರೂ ವಿಧಿಸಿ ಮಾತನಾಡಿಸುವವರೂ ಇಲ್ಲದೆ ಕಂಗಾಲಾಗಿದ್ದಾರೆ. ಕರೊನಾ ಭಯದಿಂದ ಗ್ರಾಹಕರು ಮಾರುಕಟ್ಟೆಗೆ ಆಗಮಿಸುತ್ತಿಲ್ಲ ಎಂಬ ಕೊರಗು ಒಂದೆಡೆಯಾದರೆ, ಗಂಟೆ ಗಂಟೆಗೂ ಏರುವ ಬಿಸಿಲಿನ ತಾಪದಿಂದ ಲಾರಿಯಲ್ಲಿಯೇ ತರಕಾರಿಗಳು ಬಾಡುತ್ತಲಿದೆ. ಈ ಹೊಸ ಬೆಳವಣಿಗೆ ರೈತರನ್ನು ಕಂಗಾಲಾಗಿಸಿದೆ.
ವದಂತಿಯಿಂದ ಮತ್ತಷ್ಟು ಕುಸಿತ: ರಾಜ್ಯದಲ್ಲಿ ಕರೊನಾ ಸೋಂಕು ಶಂಕಿತರ ಸಂಖ್ಯೆ ಹೆಚ್ಚಾಗಿದೆ ಎಂಬ ವದಂತಿಯಿಂದ ನೆರೆ ರಾಜ್ಯಗಳಲ್ಲಿ ರಾಜ್ಯದ ತರಕಾರಿಗೆ ಬೇಡಿಕೆ ಕಡಿಮೆಯಾಗಿದೆ. ತರಕಾರಿಯಿಂದ ವೈರಸ್ ಹರಡುವುದಿಲ್ಲವಾದರೂ ವದಂತಿಯಿಂದಾಗಿ ಶುಕ್ರವಾರದಿಂದ ಬೇಡಿಕೆ ಮತ್ತಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಬೆಳಗಾವಿ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ನಿದೇರ್ಶಕ ಸತೀಶ ಪಾಟೀಲ.
ಗೋವಾ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಎಪಿಎಂಸಿಯಿಂದ ಹೈದ್ರಾಬಾದ್, ಪುಣೆ, ಬೆಂಗಳೂರು ಹಾಗೂ ಮುಂಬೈಗೆ ಪ್ರತಿದಿನ ಮೆಣಸಿನಕಾಯಿ 120 ಟನ್, ಕ್ಯಾಪ್ಸಿಕಮ್ ಮತ್ತು ಮೆಣಸಿನ ಕಾಯಿ 300 ಟನ್ ರಫ್ತಾಗುತ್ತವೆ. ಉಳಿದಂತೆ ಸೌತೆಕಾಯಿ, ಎಲೆಕೋಸು, ಹೂಕೋಸು, ಬದನೆಕಾಯಿ ಮತ್ತು ಕೊತ್ತಂಬರಿ ಹಾಗೂ ಇತರ ತರಕಾರಿ ಸೇರಿ ಸುಮಾರು 150ಕ್ಕೂ ಅಧಿಕ ಲಾರಿ ಸಾಗಿಸಲಾಗುತ್ತಿತ್ತು. ಆದರೆ, ಶುಕ್ರವಾರ ಕೇವಲ 50 ಲಾರಿ, ಶನಿವಾರ 42 ಲಾರಿ ಮಾತ್ರ ಹೋಗಿವೆ ಎಂದು ಬೆಳಗಾವಿ ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಶೇ. 80 ಇಳಿಕೆ
ಗದಗ, ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಹೊಸಪೇಟೆ, ಬಳ್ಳಾರಿ, ಕೊಪ್ಪಳ, ಗಂಗಾವತಿ, ಶಿಕಾರಿಪುರ, ಶಿವಮೊಗ್ಗ, ರಾಯಚೂರು, ದಾವಣೆಗೆರೆ ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರತಿ ದಿನ ತಲಾ 8 ರಿಂದ 9 ಲಾರಿ ಹೋಗುತ್ತಿದ್ದವು. ಆದರೆ, ಶನಿವಾರ ಮಾತ್ರ ಎರಡು ಅಥವಾ ಒಂದು ಮಾತ್ರ ವಾಹನ ಕಳುಹಿಸಲಾಗಿದೆ. ಎಂದಿನಂತೆ ಕೊಪ್ಪಳದಿಂದ ನುಗ್ಗೆಕಾಯಿ ಬೆಳಗಾವಿ ಎಪಿಎಂಸಿಗೆ ಬಂದಿದ್ದು, ಆಮದಿನಲ್ಲಿ ಯಾವುದೇ ವ್ಯತಿರಿಕ್ತ ವ್ಯತ್ಯಾಸವಾಗಿಲ್ಲ ಆದರೂ ಗ್ರಾಹಕರ ಸಂಖ್ಯೆ ಮಾತ್ರ ಶೇ. 80ರಷ್ಟು ಇಳಿಮುಖವಾಗಿದೆ.
ಶುಕ್ರವಾರವೇ ಲಾರಿಯಲ್ಲಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ತಂದಿದ್ದೇವೆ. ಈವರೆಗೂ ಮಾರಾಟವಾಗಿಲ್ಲ. ಎಪಿಎಂಸಿಯಲ್ಲಿನ ವ್ಯಾಪಾರಸ್ಥರು ಬೇಡಿಕೆ ಇಲ್ಲ ಎನ್ನುತ್ತಿದ್ದಾರೆ. ಯಾವುದೋ ಊರಲ್ಲಿ ಕಾಯಿಲೆ ಬಂದರೆ ನಮಗೇಕೆ ಶಿಕ್ಷೆ? ರಾತ್ರಿವರೆಗೂ ಕಾದು ನೋಡಿ ಯಾರೂ ತೆಗೆದುಕೊಳ್ಳದಿದ್ದರೆ ಇಲ್ಲಿಯೇ ಬಿಟ್ಟು ವಾಪಸ್ಸಾಗುತ್ತೇವೆ.
| ಮಡಿವಾಳೆಪ್ಪ ಕಲ್ಗೋಡ ತರಕಾರಿ ಬೆಳೆದ ರೈತ