More

    ಏರು ಹಾದಿಯಲ್ಲಿ ತರಕಾರಿ ಬೆಲೆ

    ಮಂಗಳೂರು: ತರಕಾರಿ ದರದಲ್ಲಿ ವಿಪರೀತ ಏರಿಕೆಯಾಗಿದೆ. ಎರಡು ತಿಂಗಳಿಂದ ಬಹುತೇಕ ಎಲ್ಲ ತರಕಾರಿಗಳ ಬೆಲೆ ಏರುಗತಿಯಲ್ಲಿ ಸಾಗಿದ್ದು, ನವರಾತ್ರಿ ಬಳಿಕವಂತೂ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ.

    ಸಾಮಾನ್ಯವಾಗಿ 10-15 ರೂಪಾಯಿಗೆ ಸಿಗುತ್ತಿದ್ದ ಒಂದು ಕೆ.ಜಿ.ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಸದ್ಯ 40-45 ರೂ. ಇದೆ. 20 ರೂ. ಇದ್ದ ಆಲೂಗಡ್ಡೆ ಬೆಲೆ 28-30ರ ವರೆಗೆ ತಲುಪಿದೆ. ಕೆಲವು ತರಕಾರಿಗಳ ದರವಂತೂ 100 ರೂ.ಗಡಿಯತ್ತ ದಾಪುಗಾಲು ಇಡುತ್ತಿದೆ. ದಿನಕೂಲಿ ಮಾಡಿ ಜೀವನ ಸಾಗಿಸುವವರಿಗೆ ತರಕಾರಿ ಬೆಲೆ ಏರಿಕೆ ದೊಡ್ಡ ಹೊಡೆತ ನೀಡಿದೆ. ಕರೊನಾದಿಂದ ಸಂಕಷ್ಟಕ್ಕೀಡಾಗಿರುವ ಜನಸಮಾನ್ಯರಿಗೆ ತರಕಾರಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಬೆಲೆ ಏರಿಕೆಗೆ ಏನು ಕಾರಣ: ಮಂಗಳೂರಿಗೆ ಘಟ್ಟದ ಮೇಲಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬಯಲು ಸೀಮೆಯ ಮೈಸೂರು, ಬೆಂಗಳೂರು, ಚಾಮರಾಜನಗರ ಭಾಗದಿಂದ ತರಕಾರಿಗಳು ಬರುತ್ತವೆ. ಬಯಲು ಸೀಮೆಯ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಬೆಳೆಗಳಿಗೂ ಹಾನಿಯಾಗಿದೆ. ಇದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇನ್ನೊಂದೆಡೆ ಡೀಸೆಲ್ ಬೆಲೆಯೂ 100 ರೂ.ಗಡಿ ದಾಟಿದ್ದು, ಸಾಗಾಟ ವೆಚ್ಚವೂ ಹೆಚ್ಚಿದೆ. ಇದರ ನೇರ ಪರಿಣಾಮ ತರಕಾರಿ ಬೆಲೆ ಏರಿಕೆ ಎನ್ನುತ್ತಾರೆ ಅತ್ತಾವರದ ತರಕಾರಿ ವ್ಯಾಪಾರಿ ದೀಪಕ್ ಎಸ್.

    ಹಿಂದೆ ಕೆಲವು ಸೀಸನ್‌ಗಳಲ್ಲಿ ಮಾತ್ರ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಬೆಲೆ ಏರಿಕೆ ನಿರಂತರವಾಗಿರುತ್ತದೆ. ಆದ್ದರಿಂದ ಸದ್ಯ ಬೆಲೆ ಇಳಿಕೆ ಸಾಧ್ಯತೆ ಕಡಿಮೆ. ಡೀಸೆಲ್ ಬೆಲೆಯಲ್ಲೇನಾದರೂ ಇಳಿಕೆಯಾದರೆ ಸ್ವಲ್ಪ ಮಟ್ಟಿಗೆ ತರಕಾರಿ ದರವೂ ಇಳಿಯಬಹುದು ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.

    ದ.ಕ.ಜಿಲ್ಲೆಯಲ್ಲಿ ಹೇಗಿದೆ ದರ?: ಮಂಗಳೂರಿನಲ್ಲಿ ಕೆಲವು ತರಕಾರಿಗಳ ದರ ಹೀಗಿದೆ. ಸೌತೆಕಾಯಿ ಕೆ.ಜಿ.ಗೆ 30 ರೂ.(20 ರೂ.), ಕ್ಯಾಬೇಜ್ 20 ರೂ.(20 ರೂ.), ಕ್ಯಾಪ್ಸಿಕಮ್-100 ರೂ. (50 ರೂ.), ಕ್ಯಾರೆಟ್ 70 ರೂ.(30 ರೂ.), ನುಗ್ಗೆಕಾಯಿ 100 (40-60 ರೂ.), ಬೀನ್ಸ್ 70 ರೂ.(40 ರೂ.), ತೊಂಡೆಕಾಯಿ 60 ರೂ. (40 ರೂ.), ಕೊತ್ತಂಬರಿ ಸೊಪ್ಪು 120 ರೂ.(30-40 ರೂ.), ಕುಂಬಳ ಕಾಯಿ 30 ರೂ, ಮುಳ್ಳು ಸೌತೆ 40 ರೂ(30 ರೂ), ಸೋರೆಕಾಯಿ 50 ರೂ.(30-40 ರೂ.), ಸುವರ್ಣಗಡ್ಡೆ 45 ರೂ. (30-40 ರೂ.) ಬೀಟ್‌ರೂಟ್ 50 ರೂ. (40 ರೂ.). (ಆವರಣದಲ್ಲಿ ಹಳೇ ದರ)

    ಉಡುಪಿಗೂ ಬೆಲೆ ಏರಿಕೆ ಬಿಸಿ: ಉಡುಪಿ: ತರಕಾರಿ ಬೆಲೆ ಏರಿಕೆಯ ಬಿಸಿ ಜಿಲ್ಲೆಯ ಗ್ರಾಹಕರಿಗೂ ತಟ್ಟಿದೆ. 10 ದಿನದ ಹಿಂದೆ ಕೆಜಿಗೆ 28 ರೂ.ಇದ್ದ ಟೊಮ್ಯಾಟೊ ದರ ಈಗ 36ರಿಂದ 40 ರೂ.ಗೆ ಏರಿಕೆಯಾಗಿದೆ. ಬೀನ್ಸ್ 48ರಿಂದ 60ಕ್ಕೆ, ಬಟಾಟೆ 18ರಿಂದ 22 ರೂ., ಸೌತೆಕಾಯಿ 20ರಿಂದ 28 ರೂ, ಬೆಂಡೆ 20 ರಿಂದ 28 ರೂ, ಈರುಳ್ಳಿ 20 ರಿಂದ 34 ರೂ, ಕ್ಯಾರೆಟ್ 35ರಿಂದ 55 ರೂ.ಗೆ ಹೆಚ್ಚಳವಾಗಿದೆ. ಹಣ್ಣು ದರವೂ ಏರುಗತಿಯಲ್ಲಿದ್ದು, ಸೇಬು ಕೆ.ಜಿ.ಗೆ 95ರಿಂದ 120ಕ್ಕೆ ಏರಿಕೆಯಾಗಿದೆ. ದ್ರಾಕ್ಷಿ 65(50)ರೂ., ಕಿತ್ತಾಳೆ 50 (30)ರೂ., ದಾಳಿಂಬೆ 110 (90)ರೂ., ಮೂಸಂಬಿ 45 ರೂ.(36)ಗೆ ಮಾರಾಟವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts