More

    ಎಪಿಎಂಸಿ ಬಂದ್ ತರಲಿದೆ ಸಮಸ್ಯೆ, ತರಕಾರಿ ಪೂರೈಕೆ ವ್ಯತ್ಯಯ

    ಮಂಗಳೂರು: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದರಿಂದ ಸರ್ಕಾರದ ಆದೇಶ ಹಾಗೂ ನಿರ್ದೇಶಕರ ಸೂಚನೆಯಂತೆ ಏಪ್ರಿಲ್ 24, 25ರಂದು ಎರಡು ದಿನ ಎಪಿಎಂಸಿ ಮಾರ್ಕೆಟ್ ಬಂದ್ ಆಗಲಿದೆ. ಇದರಿಂದ ಎರಡು ದಿನ ತರಕಾರಿ, ಹಣ್ಣುಹಂಪಲು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

    ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ರಾಜ್ಯದ ವಿವಿಧ ಭಾಗಗಳಿಂದ ತರಕಾರಿ ಹಾಗೂ ಹಣ್ಣುಹಂಪಲು ಪ್ರತಿದಿನ ಪೂರೈಕೆಯಾಗುತ್ತದೆ. ಇಲ್ಲಿಂದ ಜಿಲ್ಲೆಯ ವಿವಿಧ ಕಡೆ ಪೂರೈಸಲಾಗುತ್ತಿತ್ತು. ಆದರೆ ಶನಿವಾರ, ಭಾನುವಾರಗಳಂದು ಎಪಿಎಂಸಿಗೆ ಲಾರಿಗಳು ಬರುವುದಿಲ್ಲ. ಜನ ಗುಂಪು ಸೇರುವುದನ್ನು ತಡೆಯುವ ಹಾಗೂ ದೈಹಿಕ ಅಂತರ ಪಾಲನೆ ದೃಷ್ಟಿಯಿಂದ ನಿರ್ದೇಶಕರು ಎಪಿಎಂಸಿ ಬಂದ್ ಆದೇಶ ಹೊರಡಿಸಿದ್ದು ತರಕಾರಿ, ಹಣ್ಣು ಪೂರೈಕೆ ಮೇಲೆ ಪರಿಣಾಮ ಬೀರಲಿದೆ.

    ಎಪಿಎಂಸಿ ಬಂದ್ ಆಗಲಿರುವ ಕಾರಣ ಸಗಟು ವಹಿವಾಟುದಾರರು ನೇರವಾಗಿ ತಮ್ಮ ಮಳಿಗೆಗಳಿಗೆ ತರಕಾರಿ, ಹಣ್ಣು ತರಿಸಿಕೊಂಡು ಅಲ್ಲಿಂದಲೇ ರೀಟೇಲ್ ಪೂರೈಕೆ ಮಾಡಲಿದ್ದಾರೆ ಎಂದು ಸಗಟು ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ. ಆದರೆ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ ಎನ್ನುತ್ತಾರೆ ಅವರು. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ. ಮೊದಲೇ ವೀಕೆಂಡ್ ಕರ್ಫ್ಯೂ, ಅರೆಬರೆ ಲಾಕ್‌ಡೌನ್‌ನ ಗೊಂದಲದಿಂದ ಬೇಸತ್ತಿರುವ ಜನರಿಗೆ ತರಕಾರಿ, ಹಣ್ಣುಗಳ ದರ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ.

    ಸೆಂಟ್ರಲ್ ಮಾರ್ಕೆಟ್‌ನಲ್ಲಿ ವ್ಯಾಪಾರ?: ಕಳೆದ ಲಾಕ್‌ಡೌನ್ ವೇಳೆ ಹಲವು ಗೊಂದಲಗಳಿಗೆ ಕಾರಣವಾಗಿದ್ದ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಎಪಿಎಂಸಿ ಬಂದ್ ಕಾರಣದಿಂದ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ. ಕೆಲವು ವಾಹನಗಳು ಸೆಂಟ್ರಲ್ ಮಾರ್ಕೆಟ್‌ನಲ್ಲಿ ವಹಿವಾಟು ನಡೆಸುವ ಸಾಧ್ಯತೆಗಳಿವೆ. ಸಗಟು ಖರೀದಿದಾರರು ಇಲ್ಲಿ ವಹಿವಾಟು ಮಾಡಿ ರೀಟೇಲ್ ಆಗಿ ಪೂರೈಸಬಹುದು.

    ಗ್ರಾಹಕರ ಜೇಬಿಗೆ ಹೊರೆ: ಈಗಾಗಲೇ ತರಕಾರಿ, ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದು ಎಪಿಎಂಸಿ ಬಂದ್‌ನಿಂದ ಮತ್ತಷ್ಟು ಪರಿಣಾಮ ಬೀರಲಿದೆ. ಕೆಲವು ತರಕಾರಿ, ಹಣ್ಣುಗಳ ಬೆಲೆ ಗಗನಮುಖಿಯಾಗಿದ್ದು ಇದು ಇನ್ನಷ್ಟು ಹೆಚ್ಚಬಹುದು. ಇದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊಡೆತ ಗ್ಯಾರಂಟಿ. ಒಂದೆಡೆ ರಂಜಾನ್ ಉಪವಾಸ ಕಾರಣ ಹಣ್ಣುಗಳ ಬೆಲೆ ಹೆಚ್ಚಿರುವ ಮಧ್ಯೆ ಈಗ ಪೂರೈಕೆಯಲ್ಲೂ ವ್ಯತ್ಯಯವಾದರೆ ಮತ್ತಷ್ಟು ಹೊರೆ ಆಗಲಿದೆ.

    ಎಪಿಎಂಸಿಗೆ ಎರಡು ದಿನ ತರಕಾರಿ, ಹಣ್ಣಿನ ಲಾರಿಗಳು ಬರುವುದಿಲ್ಲ. ನಿರ್ದೇಶಕರ ಆದೇಶದಂತೆ ಎಪಿಎಂಸಿ ಬಂದ್ ಇರಲಿದೆ. ಇದರಿಂದ ತರಕಾರಿ, ಹಣ್ಣು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ದರ ಹೆಚ್ಚಾಗುವ ಸಾಧ್ಯತೆ ಇದೆ. ಪೂರೈಕೆ ಆಧರಿಸಿಕೊಂಡು ದರದಲ್ಲಿ ವ್ಯತ್ಯಾಸವಾಗಬಹುದು.
    ಹನೀಫ್ ಮಲಾರ್ ಸಗಟು ತರಕಾರಿ ವ್ಯಾಪಾರಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts