More

    ವೇದ ದರ್ಶನ|ಮದ್ಯಪಾನ ಮಾಡಿ ಬಿದ್ದವನಿಗೆ, ಮೂರ್ಛೆಯಲ್ಲಿ ಬಿದ್ದವನಿಗೆ, ಆಗಿರುವ ‘ಅನುಭವ’ಕ್ಕೂ ಬ್ರಹ್ಮಜ್ಞಾನಿಗಳಾದ ವಾಮದೇವ, ವಸಿಷ್ಠಾದಿಗಳ ‘ಅನುಭವ’ಕ್ಕೂ ಏನು ವ್ಯತ್ಯಾಸ?

    ಗುಡಿಗೆ ಹೋಗೋಣವೆಂದು ಹೇಳಿ ಹೋಟೆಲಿಗೋ ಸಿನಿಮಾ ಮಂದಿರಕ್ಕೋ ಕರೆದುಕೊಂಡು ಹೋದರೆ, ‘‘ಇದು ಅದಲ್ಲ. ಸುಳ್ಳು ಹೇಳಿ ಕರೆತಂದಿರುವೆ!’’ ಎಂದು ವ್ಯತ್ಯಾಸ ತಿಳಿಯಲು ಅನುಕೂಲವಾಗುವುದು ಅನುಭೂತಿಯು ಸವಿಕಲ್ಪವಾದುದರಿಂದಲೇ. ‘‘ಇದು ವ್ಯವಹಾರದಲ್ಲಿ ಸರಿ. ಬ್ರಹ್ಮವಸ್ತುವಿಗೆ ಇದು ಹೇಗೆ ಅನ್ವಯ?’’ ಎಂದು ಕೇಳಿದರೆ, ಹೀಗಿದೆ ಉತ್ತರ. ಲೋಕದಲ್ಲಿ ಬ್ರಹ್ಮವಸ್ತುವಿಗೆ ಇರುವಷ್ಟು ಲಕ್ಷಣಗಳು ಇನ್ನಾವ ವಸ್ತುವಿಗೂ ಇಲ್ಲವೆಂಬ ಅರ್ಥದಲ್ಲಿ ಅದು ಇಂದ್ರಿಯಾದಿ ಸರ್ವ ಕರಣಗಳಿಗೂ ಮೀರಿದೆ. ಲಕ್ಷಣವೇ ಇಲ್ಲವೆಂಬ ಅರ್ಥದಲ್ಲಿ ಅಲ್ಲ. ವೇದವ್ಯಾಸರು ಬ್ರಹ್ಮಸೂತ್ರದ ಪ್ರಾಸ್ತಾವಿಕ ಮೊದಲ ಸೂತ್ರದ ನಂತರ ಎರಡನೆಯದರಲ್ಲಿಯೇ ಉಪನಿಷದುಕ್ತವಾದ ಬ್ರಹ್ಮಲಕ್ಷಣವನ್ನು ತೋರಿಸಿದ್ದಾರೆ: ‘‘ಜನ್ಮಾದ್ಯಸ್ಯ ಯತಃ’’ – ‘‘ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳು ಯಾವ ಪರವಸ್ತುವಿನಿಂದ ಆಗುತ್ತವೆಯೋ ಅದು (ಪರಬ್ರಹ್ಮ)’’ ಎಂಬುದಾಗಿ. ಇದು ಬೇರೆ ಯಾವ ವಸ್ತುವಿಗೂ ಅನ್ವಯವಾಗದ ಕಾರಣ ಅವ್ಯಾಪ್ತಿ-ಅತಿವ್ಯಾಪ್ತಿ ಮೊದಲಾದ ದೋಷಗಳಿಲ್ಲದೆ ಬ್ರಹ್ಮವಸ್ತುವಿಗೆ ಮಾತ್ರ ವಿಶಿಷ್ಟ ಲಕ್ಷಣವಾಗಿರುವುದು. ಇಂಥ ವಸ್ತು ಸಾಕ್ಷಾತ್ಕಾರ ಮಾಡಿದವನೇ ಬ್ರಹ್ಮಜ್ಞಾನಿ, ಎಂಬುದು ವೇದಸಮ್ಮತವಾದ ಮಾರ್ಗ.

    ವೇದ ದರ್ಶನ|ಮದ್ಯಪಾನ ಮಾಡಿ ಬಿದ್ದವನಿಗೆ, ಮೂರ್ಛೆಯಲ್ಲಿ ಬಿದ್ದವನಿಗೆ, ಆಗಿರುವ ‘ಅನುಭವ’ಕ್ಕೂ ಬ್ರಹ್ಮಜ್ಞಾನಿಗಳಾದ ವಾಮದೇವ, ವಸಿಷ್ಠಾದಿಗಳ ‘ಅನುಭವ’ಕ್ಕೂ ಏನು ವ್ಯತ್ಯಾಸ?‘‘ಬ್ರಹ್ಮವು ಲಕ್ಷಣ ಹೊಂದಿದ್ದರೆ ಹೊಂದಿರಲಿ, ಬಿಟ್ಟರೆ ಬಿಡಲಿ, ನಮಗೇನು?’’ ಎಂದರೆ; ಒಂದೂರಿಗೆ ಹೊರಡುವವನು, ಆ ಊರಿಗೆ ಹೋಗಿ ಬಂದವರಿಂದಲೋ, ನೋಡಿದವರಿಂದಲೋ, ಕೊನೆಗೆ ರೈಲ್ವೆ ಗೈಡು, ಪ್ರಯಾಣಿಕರ ಗೈಡು, ಮುಂತಾದ ಪುಸ್ತಕಗಳಿಂದಲೋ, ಅಕ್ಕರೆಯಿಂದ, ಆ ಊರಿನ ಸಮಸ್ತ ಉಪಯುಕ್ತ ವಿಷಯಗಳನ್ನೂ ಪೂರ್ವಭಾವಿಯಾಗಿಯೇ ತಿಳಿಯುವಂತೆ, ನಾವೂ ಶಾಸ್ತ್ರಾಧ್ಯಯನ, ಬ್ರಹ್ಮಜಿಜ್ಞಾಸೆ, ವೇದಾರ್ಥ ಪ್ರಯತ್ನ, ಶ್ರವಣ, ಪಾರಾಯಣಾದಿಗಳಿಂದ ಹೀಗೆ ಪರಮಪದಾವಾಪ್ತಿಗೆ ಪ್ರಯತ್ನಿಸಬೇಕು. ಇಲ್ಲದಿದ್ದರೆ, ಎಲ್ಲಿಗೋ ಉದ್ದೇಶ ಮಾಡಿ ಹೊರಟವನು ಮತ್ತೆಲ್ಲಿಗೋ ಸೇರಿದಂತಾಗಿ, ಉದ್ದೇಶ್ಯನಾಶ, ಕ್ಲೇಶ ಸಂಪಾದನೆ ಮಾತ್ರ ಆಗುವುದು. ಅನೇಕರು ವಾಮಾಚಾರ ಮಾರ್ಗದಲ್ಲಿ, ಮದ್ಯಪಾನ ಮಾಡಿಯೋ, ಸುಮ್ಮನೆ ವೇಷಗಳನ್ನು ಧರಿಸಿ ಮೌನವಾಗಿ ಕುಳಿತೋ, ಅಥವಾ ಈಗೀಗ ಭ್ರಾಂತರು, ಮೂರ್ಛಿತರು ಮೊದಲಾದವರೂ ಸಹ ‘‘ನನಗೆ ಬ್ರಹ್ಮಸಾಕ್ಷಾತ್ಕಾರವಾಗಿದೆ’’ ಎಂದು ಸುಲಭವಾಗಿ ಇತರರನ್ನು ವಂಚಿಸುವುದು ಸಾಧ್ಯವಾಗುವುದು. ಮದ್ಯಪಾನ ಮಾಡಿ ಬಿದ್ದವನಿಗೆ, ಮೂರ್ಛೆಯಲ್ಲಿ ಬಿದ್ದವನಿಗೆ, ಆಗಿರುವ ‘‘ಅನುಭವ’’ಕ್ಕೂ ಬ್ರಹ್ಮಜ್ಞಾನಿಗಳಾದ ವಾಮದೇವ, ವಸಿಷ್ಠಾದಿಗಳ ‘‘ಅನುಭವ’’ಕ್ಕೂ ಏನು ವ್ಯತ್ಯಾಸವೆಂಬ ಪ್ರಶ್ನೆ ಎದ್ದೇ ಏಳುವುದು ಖಂಡಿತ. ಇದಕ್ಕೆ ವೇದಾಂತಶಾಸ್ತ್ರದಲ್ಲಿ ಉತ್ತರ ಹೇಳದಿದ್ದರೆ, ಈಗ ನಡೆಯುತ್ತಿರುವಂತೆ, ಎಲ್ಲರೂ ಬ್ರಹ್ಮಜ್ಞಾನಿಗಳೆಂಬ ಸೋಗು ಹಾಕಲು ಸಹಾಯ ಮಾಡಿಕೊಟ್ಟಂತಾಗುವುದು. ಹೀಗೆ ಸೋಗು ಹಾಕುವವರಿಗೆ, ‘‘ಬ್ರಹ್ಮಲಕ್ಷಣ ಹೇಳು, ನಿನಗೆ ಬ್ರಹ್ಮಾನುಭೂತಿಯಾಗಿದ್ದರೆ?’’ ಎಂಬ ಪ್ರಶ್ನೆಯು ಅತ್ಯಂತ ‘‘ಉಪದ್ರವ’’ಕಾರಕವಾದುದರಿಂದ, ಇವರು ಈ ಪ್ರಶ್ನೆಯನ್ನೇ ಅಲ್ಲದೆ, ವೇದಾಂತಶಾಸ್ತ್ರಕ್ಕೇ ತಳಪಾಯವಾದ ಇಡೀ ತರ್ಕಶಾಸ್ತ್ರವನ್ನೇ ನಿಷ್ಪಲವೆಂದೂ, ಶುಷ್ಕವೆಂದೂ, ನಿರಾಕರಿಸಿ ಇದನ್ನೇ ಸರ್ವಸಾಮಾನ್ಯವಾದ ಲೋಕರೀತಿ (Fashion) ಆಗಿ ಮಾಡಿದ್ದಾರೆ. ನಿಜವಾದ ವೇದಾಂತಿಗೆ, ತರ್ಕ ನಿರಾಕರಣೆಯು, ಬ್ರಹ್ಮದ್ರೋಹವೆಂದು ಅನಿಸಿದರೆ ಆಶ್ಚರ್ಯವಿಲ್ಲ. (“An attack on a Systematic thought is a treason unto Civilization” – Dr. A.N.Whitehead.) ಆದುದರಿಂದ ವೇದೋಕ್ತ ಸಲಕ್ಷಣಬ್ರಹ್ಮೋಪಾಸನೆಯೇ ವಸ್ತುತಃ ಅನುಭೂತಿಗೆ ಹೆಚ್ಚು ಸಮಂಜಸವಾದುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts